ಶಿಗ್ಗಾಂವಿ: ಕಠಿಣ ಪರಿಶ್ರಮದಿಂದ ಮಾತ್ರ ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯ, ವಿದ್ಯಾರ್ಥಿಗಳು ಅವಕಾಶಕ್ಕಾಗಿ ಕಾಯದೆ ಹೊಸ ಹೊಸ ಅವಕಾಶ ಸೃಷ್ಟಿ ಮಾಡಿಕೊಳ್ಳಬೇಕು ಎಂದು ವಚನ ನಿಧಿ ವನಿತಾ ಸಂಘದ ಉಪಾಧ್ಯಕ್ಷೆ ಶಕುಂತಲಾ ಕೋಣನವರ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಖ್ಯಾತ ವೈದ್ಯೆ ಡಾ.ಲತಾ ನಿಡಗುಂದಿ, ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳನ್ನು ಆತ್ಮೀಯತೆಯಿಂದ ಸ್ವಾಗತಿಸಿ ಆತ್ಮಸ್ಥೈರ್ಯ ತುಂಬುವ ಮೂಲಕ ಸಂಬಂಧಗಳನ್ನು ಗಟ್ಟಿಗೊಳಿಸುವ ಈ ಕಾರ್ಯ ಶ್ಲಾಘನೀಯವಾದುದು ಎಂದರು.
ಇನ್ನೊರ್ವ ಮುಖ್ಯ ಅತಿಥಿ ಮಂಜುನಾಥ ಬ್ಯಾಳಿ ಮಾತನಾಡಿ, ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ ಗುರು ಹಿರಿಯರಿಗೆ ಗೌರವ ಕೊಡುವ ಸತ್ಸಂಪ್ರದಾಯ ರೂಢಿಸಿಕೊಳ್ಳಬೇಕು, ಅಂದಾಗ ಸಮಗ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಪುಷ್ಪ ನೀಡಿ ಬರಮಾಡಿಕೊಂಡರು.
ಕಾಲೇಜಿನ ಪ್ರಾಚಾರ್ಯ ಡಾ. ನಾಗರಾಜ ದ್ಯಾಮನಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಕೆ.ಬಸಣ್ಣ, ಕೆ.ಎಸ್. ಬರದೆಲಿ, ಗೀತಾ ಸಾಲ್ಮನಿ, ಅನ್ನಪೂರ್ಣ ಅಂಕಲಕೋಟಿ, ಮಹೇಶ ಲಕ್ಷ್ಮೇಶ್ವರ ಹಾಗೂ ಮಂಜುನಾಥ ಕಾಳೆ ಮುಂತಾದವರು ಇದ್ದರು. ಪ್ರಾರಂಭದಲ್ಲಿ ಸಂಜನಾ ಪಾಟೀಲ ಸ್ವಾಗತಿಸಿದರು. ಕೊನೆಯಲ್ಲಿ ಪುಷ್ಟಾ ಮಠಪತಿ ವಂದಿಸಿದರು. ಬನಶ್ರೀ ಹುತ್ತನಗೌಡ್ರ ನಿರೂಪಿಸಿದರು.