ಕೌಶಲ್ಯದಿಂದ ಮಾತ್ರ ತಾಂತ್ರಿಕ ಯುಗದಲ್ಲಿ ಯಶಸ್ಸು: ಡಾ.ರಾಯನಗೌಡ

KannadaprabhaNewsNetwork | Published : Dec 23, 2024 1:00 AM

ಸಾರಾಂಶ

ಜ್ಞಾನ ಹಾಗೂ ಕೌಶಲ್ಯದ ಯುಗ, ಕಠಿಣ ಪರಿಶ್ರಮ, ಜ್ಞಾನಾರ್ಜನೆ ಹಾಗೂ ಉತ್ತಮ ಕೌಶಲ್ಯವನ್ನು ಹೊಂದಬೇಕು.

ಹೊಸಪೇಟೆ: ಉತ್ತಮ ಜ್ಞಾನ ಹಾಗೂ ಕೌಶಲ್ಯದಿಂದ ಮಾತ್ರ ತಾಂತ್ರಿಕ ಯುಗದಲ್ಲಿ ಯಶಸ್ಸು ಸಾಧಿಸಬಹುದು ಎಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪರೀಕ್ಷಾ ವಿಭಾಗದ ವಿಶೇಷಾಧಿಕಾರಿ ಡಾ.ರಾಯನ ಗೌಡ ಹೇಳಿದರು.

ನಗರದ ಪ್ರೌಢ ದೇವರಾಯ ತಾಂತ್ರಿಕ ಮಹಾವಿದ್ಯಾಲಯ (ಪಿಡಿಐಟಿ)ದಲ್ಲಿ ಹಳೇ ವಿದ್ಯಾರ್ಥಿಗಳ ಪ್ರೌಢ ಸಮ್ಮಿಲನ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದ ಅವರು, ಇದು ಪದವಿ ಯುಗವಲ್ಲ. ಜ್ಞಾನ ಹಾಗೂ ಕೌಶಲ್ಯದ ಯುಗ, ಕಠಿಣ ಪರಿಶ್ರಮ, ಜ್ಞಾನಾರ್ಜನೆ ಹಾಗೂ ಉತ್ತಮ ಕೌಶಲ್ಯವನ್ನು ಹೊಂದಬೇಕು. ವಿದಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆಯನ್ನು ಮಾಡಬೇಕಾದರೆ ಕಠಿಣ ಪರಿಶ್ರಮದಿಂದ ಜ್ಞಾನಾರ್ಜನೆಯನ್ನು ಪಡೆದು ಸಂಶೋಧನಾತ್ಮಕ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು. ಇತೀಚಿನ ಎಷ್ಟೋ ಸಂಶೋಧನಾತ್ಮಕ ಪ್ರಬಂಧಗಳು, ಅಂಕಪಟ್ಟಿಗಳು ಹಾಗೂ ದಾಖಲೆಗಳು ನಕಲಿಯಾಗಿ ಹೊರಹೊಮ್ಮುತ್ತಿವೆ. ಅವುಗಳಿಗೆ ಕಡಿವಾಣ ಹಾಕಲು ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಎಲೆಕ್ಟ್ರಾನಿಕ್ ಡಾಕ್ಯುಮೆಂಟ್ ಡೆಲಿವರಿ ಮತ್ತು ಟ್ರ‍್ಯಾಕಿಂಗ್ ಸಿಸ್ಟಮ್ ಎಂಬ ಹೊಸ ವ್ಯವಸ್ಥೆಯನ್ನು ಕಲ್ಪಿಸಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮ ದಾಖಲೆಗಳನ್ನು ಪರಿಶೀಲಿಸಬಹುದು. ಪದವಿ ಪ್ರಮಾಣಪತ್ರಗಳನ್ನು ಪಡೆಯಲು ಮನೆಯಿಂದಲೇ ಆನ್‌ಲೈನಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದರಿಂದ ವಿಶ್ವವಿದ್ಯಾಲಯದ ಕಾರ್ಯಾಲಯಗಳಿಗೆ ವಿದ್ಯಾರ್ಥಿಗಳು ಅಲೆಯುವುದು ತಪ್ಪಲಿದೆ ಎಂದರು.

ಶಿರಸಿಯ ಉಪವಿಭಾಗಿಯಾಧಿಕಾರಿ ಕಾವ್ಯರಾಣಿ ಕೆ.ವಿ. ಮಾತನಾಡಿ, ನಾವು ಓದಿದ ಶಾಲೆ, ಕಾಲೇಜು, ಊರು ಇವುಗಳನ್ನು ಪ್ರತಿನಿಧಿಸುತ್ತೇವೆ. ಓದಿದ ಶಾಲಾ-ಕಾಲೇಜು, ಊರು ಹಾಗೂ ಸಮಾಜಕ್ಕೆ ನಮ್ಮಿಂದ ಕೊಡುಗೆ ನೀಡಬೇಕು ಎಂದರು.

ಆಡಳಿತ ಮಂಡಳಿ ಅಧ್ಯಕ್ಷ ಕರಿಬಸವರಾಜ ಬಾದಾಮಿ ಮಾತನಾಡಿ, ಕಾಲೇಜ್‌ನಲ್ಲಿ ಹಲವಾರು ಕೌಶಲ್ಯಯುತ ತರಬೇತಿಗಳನ್ನು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಹಮ್ಮಿಕೊಳ್ಳಲಾಗಿದೆ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಮತ್ತು ತರಗತಿಗಳಲ್ಲಿ ಅವುಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜಾನೆಕುಂಟೆ ಬಸವರಾಜ್, ವೀ.ವೀ ಸಂಘದ ಕಾರ್ಯದರ್ಶಿ ಅರವಿಂದ್ ಪಟೇಲ್, ಪ್ರಾಂಶುಪಾಲ ಡಾ.ಯು.ಎಂ.ರೋಹಿತ್, ಪಿಡಿಐಟಿಯ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ.ಆರ್.ಸಿಂಧು, ಹಳೇ ವಿದ್ಯಾರ್ಥಿಗಳಾದ ಸೃಜನಾ ಮತ್ತು ಭಾವನಾ, ಪ್ರೊ. ಶಾಹಿದಾ ಬೇಗಂ, ಪ್ರೊ. ಉದಯ್ ಶಂಕರ್, ರೂಬಿ ಇತರರಿದ್ದರು.

ಹೊಸಪೇಟೆಯ ಪಿಡಿಐಟಿಯಲ್ಲಿ ಹಳೇ ವಿದ್ಯಾರ್ಥಿಗಳ ಪ್ರೌಢ ಸಮ್ಮಿಲನ ಕಾರ್ಯಕ್ರಮಕ್ಕೆ ಡಾ.ರಾಯನ ಗೌಡ ಚಾಲನೆ ನೀಡಿದರು.

Share this article