ಪ್ರತಿಭಾ ಪುರಸ್ಕಾರ ಸಮಾರೋಪ
ಕನ್ನಡಪ್ರಭ ವಾರ್ತೆ ಅರಸೀಕೆರೆವಿದ್ಯಾರ್ಥಿಗಳು ವ್ಯಾಸಂಗದ ಅವಧಿಯಲ್ಲಿ ಸತತ ಪರಿಶ್ರಮದ ಜತೆಗೆ ವಿನಯ, ವಿಧೇಯತೆ, ಸಹನೆ, ಶಿಸ್ತು ಮೈಗೂಡಿಸಿಕೊಂಡಲ್ಲಿ ಯಶಸ್ಸು ಸಾಧಿಸಬಹುದು. ಅದನ್ನು ಬಿಟ್ಟು ಅಹಂಕಾರ ತಲೆಗೇರಿಸಿಕೊಂಡರೆ ಬದುಕು ಅಧಃಪತನಕ್ಕೆ ಜಾರಲಿದೆ ಎಂದು ಜಿಲ್ಲಾ ಆದಾಯ ತೆರಿಗೆ ವಿಭಾಗದ ಐಆರ್‌ಎಸ್ ಅಧಿಕಾರಿ ಎಚ್.ಜಿ.ದರ್ಶನ್ ಕುಮಾರ್ ತಿಳಿಸಿದರು.
ನಗರದ ಹೊಯ್ಸಳೇಶ್ವರ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಪ್ರತಿಭಾನ್ವಿತರನ್ನು ಸನ್ಮಾನಿಸಿ ಮಾತನಾಡಿದರು. ಪದವಿ ವ್ಯಾಸಂಗದ ಬಳಿಕ ಮುಂದೇನು ಮಾಡಬೇಕು ಎನ್ನುವ ಕುರಿತು ಆಲೋಚನೆ ಮಾಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಡೆಸುವ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ನಾಡಿನ ಸೇವೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡಲ್ಲಿ ವಿದ್ಯೆ ಕಲಿತದ್ದಕ್ಕೂ ಸಾರ್ಥಕತೆ ಬರಲಿದೆ ಎಂದು ಹೇಳಿದರು.ಜ್ಞಾನ ಸಂಪಾದನೆ ಮಾಡಿದಲ್ಲಿ ಉನ್ನತ ಹುದ್ದೆ ಪಡೆಯುವುದು, ರಾಜಕಾರಣಿ, ಅತ್ಯುತ್ತಮ ಕೃಷಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥವಾಗಿ ತೊಡಗಿಸಿಕೊಳ್ಳಬಹುದು. ತಾವು ಯಾವುದೇ ಕಾರಣಕ್ಕೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು. ಕಲಿಕೆ ಅವಧಿಯಲ್ಲಿ ಅನಿರೀಕ್ಷಿತವಾಗಿ ಬಂದೊದಗುವ ಅವಮಾನ, ಸನ್ಮಾನಗಳನ್ನು ಸವಾಲಾಗಿ ಸ್ವೀಕರಿಸಿ ಯಶಸ್ಸು ಪಡೆಯುವತ್ತ ದಿಟ್ಟ ಹೆಜ್ಜೆಯಿಡಬೇಕು. ಗುರು , ಹಿರಿಯರನ್ನು ಗೌರವ ಭಾವನೆಯಿಂದ ಕಾಣುವ ಪರಿಪಾಠ ರೂಢಿಸಿಕೊಂಡಲ್ಲಿ ಒಳಿತಾಗಲಿದೆ. ಕಲಿಕೆಯ ಹಂತದಲ್ಲಿ ಕೀಳಿರಿಮೆ ಬಿಟ್ಟು ಮುನ್ನುಗ್ಗುವ ಎದೆಗಾರಿಕೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮಾಂತರ ಠಾಣೆಯಇನ್ಸ್‌ಪೆಕ್ಟರ್ ಟಿ.ಕೆ.ಚಂದ್ರಶೇಖರ್ ಮಾತನಾಡಿ, ಮಾದಕ ದ್ರವ್ಯ ಸೇವನೆ ಅತ್ಯಂತ ಅಪಾಯಕಾರಿಯಾಗಿದ್ದು ದುರ್ವ್ಯಸನದಿಂದ ದೂರವಿರಬೇಕು. ಬೈಕ್ ವ್ಹೀಲಿಂಗ್ ಮಾಡುವುದು, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸದಿದ್ದರೆ ತನ್ನದೇ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಪೋಟೋ ಹಂಚಿಕೊಳ್ಳುವುದು, ಸಂದೇಶ ರವಾನಿಸುವುದರಿಂದ ಉಂಟಾಗುತ್ತಿರುವ ತೊಂದರೆ ಕುರಿತು ವಿದ್ಯಾರ್ಥಿನಿಯರು ಜಾಗೃತರಾಗಿರಬೇಕು. ಗಾಂಜಾ, ಅಫೀಮು ಸೇರಿದಂತೆ ಯವುದೇ ಬಗೆಯ ಮಾದಕ ವಸ್ತುಗಳ ಮಾರಾಟ ಕಂಡು ಬಂದಲ್ಲಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.ಪದವಿ ಕಾಲೇಜು ಸ್ಥಳೀಯ ಸಲಹಾ ಸಮಿತಿ ಅಧ್ಯಕ್ಷ ಜಿ.ಬಿ.ಶಶಿಧರ್ ಮಾತನಾಡಿ, ನಗರ ಹಾಗೂ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ವ್ಯಾಸಂಗದ ಮಹತ್ವ ಅರಿತು ಹಿರಿಯ ಜಗದ್ಗುರು ಶಾಲಾ, ಕಾಲೇಜುಗಳನ್ನು ತೆರೆದಿದ್ದಾರೆ. ಸಮಾರಂಭದಲ್ಲಿ ಸಾಧಕರನ್ನು ಅಹ್ವಾನಿಸಿ ಅಗತ್ಯ ಉಪನ್ಯಾಸ ಕೊಡಿಸುವ ಜತೆಗೆ ಪ್ರತಿಭಾನ್ವಿತರನ್ನು ಗೌರವಿಸುತ್ತಿರುವುದು ಸ್ಮರಣೀಯ ಕಾರ್ಯವಾಗಿದೆ ಎಂದು ಬಣ್ಣಿಸಿದರು.
ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕೇಂದ್ರ ಸಲಹಾ ಸಮಿತಿ ಅಧ್ಯಕ್ಷ ಎಚ್.ಜಿ.ರೇವಣ್ಣ, ಅನುಭವ ಮಂಟಪ ಶಾಲೆಯ ಅಧ್ಯಕ್ಷ ಬಿ.ಮಹಾಲಿಂಗಸ್ವಾಮಿ, ಹೊಯ್ಸಳೇಶ್ವರ ಪದವಿ ಪೂರ್ವ ಕಾಲೇಜು ಅಧ್ಯಕ್ಷ ಶಶಿವಾಳ ಗಂಗಾಧರ್, ಪದವಿ ಕಾಲೇಜು ಪ್ರಾಂಶುಪಾಲ ಎ.ಎಸ್.ವಸಂತಕುಮಾರ್, ಸದಸ್ಯ ಫಿಸಿಯೋ ಮಧು ಮಾತನಾಡಿದರು.ಇದೇ ವೇಳೆ ಪದವಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದ ಎ.ಪಿ.ಶ್ವೇತಾ, ಎಂ.ಆರ್.ಸ್ನೇಹಾ ಹಾಗೂ ಕೆ.ಹರ್ಷಿತಾ ಅವರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಸಮಿತಿಯ ಸಂಚಾಲಕ ಶೇಖರ್ ಸಂಕೋಡನಹಳ್ಳಿ, ಡಿ.ಆರ್.ಸುಧಾ, ಕ್ರೀಡಾ ವಿಭಾಗದ ಎನ್.ಬಿ.ರೇವಣ್ಣ, ಉಪನ್ಯಾಸಕರಾದ ಮಂಜುನಾಥ್, ಡಾ.ಚಂದ್ರಪ್ಪ, ಶಶಿಕುಮಾರ್, ರೂಪಾ, ಪೂಜಾ, ಜಯಶೀಲಾ, ಸುಶ್ಮಿತಾ, ಸ್ವಾತಿ, ಪಾರ್ವತಮ್ಮ, ಅಯೂಬ್, ಪೂರ್ಣಿಮಾ, ರೇಖಾ, ಮೇಘಾ, ನಾಗರತ್ನ, ಕಾಲೇಜು ಸಿಬ್ಬಂದಿ ಹಾಜರಿದ್ದರು.