ಬೆಳ್ತಂಗಡಿ: ವ್ಯಕ್ತಿಗತ ಸಮಸ್ಯೆಗಳಿಂದ ವಿಚಲಿತರಾಗದೆ ನಿರ್ದಿಷ್ಟ ಕ್ಷೇತ್ರದಲ್ಲಿ ಸಾಧಿಸುವ ದೃಢಸಂಕಲ್ಪದೊಂದಿಗೆ ಹೆಜ್ಜೆಯಿರಿಸಿದರೆ ಮುಂದೊಂದು ದಿನ ನಿಶ್ಚಿತವಾಗಿ ಯಶಸ್ಸು ಜೊತೆಯಾಗುತ್ತದೆ ಎಂದು ಖ್ಯಾತ ಚಲನಚಿತ್ರ ನಟ ಪೃಥ್ವಿ ಅಂಬರ್ ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ಪ್ರತಿಭೆಗಳೊಂದಿಗೆ ನೃತ್ಯ ಪ್ರದರ್ಶನ ನೀಡುತ್ತಾ ತಮ್ಮ ಸಾಧನೆಯ ಹಿಂದಿನ ಪ್ರಮುಖ ಮಜಲುಗಳನ್ನು ಅನಾವರಣಗೊಳಿಸಿದರು.15 ವರ್ಷಗಳ ಹಿಂದೆ ಕೊರಿಯೋಗ್ರಫಿ ವಲಯದಲ್ಲಿ ಮಹತ್ವದ್ದನ್ನು ಸಾಧಿಸುವ ಹಂಬಲದೊಂದಿಗೆ ನೃತ್ಯ ಕಲೆಯಲ್ಲಿ ತೊಡಗಿಸಿಕೊಂಡಾಗ ಕಲೆಯೊಂದಿಗಿನ ಸೆಳೆತ ಆವರಿಸಿಕೊಂಡಿತ್ತು. ಈಗಿನ ಹಾಗೆ ತಂತ್ರಜ್ಞಾನದ ನೆರವಿನೊಂದಿಗೆ ಸುಲಭವಾಗಿ ನೃತ್ಯದ ಮಾದರಿಗಳು ಸಿಗುವ ಹಾಗೆ ನೇರವಾಗಿ ಲಭ್ಯವಾಗುತ್ತಿರಲಿಲ್ಲ. ಅವುಗಳ ಹುಡುಕಾಟ ನಡೆಸಿ ಗಮನಿಸಿ ಅಭ್ಯಸಿಸಬೇಕಾಗುತ್ತಿತ್ತು. ಅಂತಹ ಪೂರ್ವ ತಯಾರಿಯು ಸಾಧನೆಯ ಹುಮ್ಮಸ್ಸು ಹೆಚ್ಚಿಸುತ್ತಿತ್ತು ಎಂದು ನೆನಪಿಸಿಕೊಂಡರು.ಹಿಂದಿನ ಕಾಲೇಜು ದಿನಗಳು ನಿಜಕ್ಕೂ ಸುವರ್ಣವಾಗಿದ್ದವು. ಯೂನಿಫಾರ್ಮ್ ಅನ್ನು ಕಡ್ಡಾಯವಾಗಿ ಹಾಕಿಕೊಳ್ಳುವ ನಿಯಮ ಅನ್ವಯವಾಗುತ್ತಿರಲಿಲ್ಲ. ಓದುವ ದಿನಗಳಲ್ಲಿ ನಮಗಿಷ್ಟದ ಕಲೆಯೊಂದಿಗೆ ತೊಡಗಿಸಿಕೊಳ್ಳುವ ಬದ್ಧತೆ ನಮ್ಮನ್ನು ಗೆಲುವಿನ ಹಾದಿಯಲ್ಲಿ ನೆರವಾಗುತ್ತದೆ. ಮೈಲಿಗಲ್ಲಾಗಬಲ್ಲ ಸಾಧನೆಗೆ ಪೂರಕವಾಗುತ್ತದೆ ಎಂದರು.
ದಿಯಾ ಸಿನಿಮಾ ಬಿಡುಗಡೆಯಾಗಿದ್ದು ನಿರ್ಮಾಣವಾಗಿ ಐದು ವರ್ಷಗಳ ನಂತರ. ಸಿನಿಮಾವೊಂದರಲ್ಲಿ ನಟಿಸಿ ಅಷ್ಟು ಸುಧೀರ್ಘ ಅವಧಿ ಕಾದ ನಂತರ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ಲಾಕ್‌ಡೌನ್ ಅವಧಿಯಲ್ಲಿ ಬಿಡುಗಡೆಯಾದ ನಂತರ ಹೊಸ ಅಲೆ ಮೂಡಿಸಿತು. ಸಿನಿಮಾ ಮೆಚ್ಚುಗೆಯ ಪಡೆಯುವವರೆಗಿನ ಹಾದಿ ಭಾವನಾತ್ಮಕ ತೊಳಲಾಟಗಳೊಂದಿಗೆ ಕೂಡಿತ್ತು. ಈ ಹಂತದಲ್ಲಿ ಸಿನಿಮಾ ರಂಗದಲ್ಲಿ ವಿಶೇಷ ಹೆಜ್ಜೆ ಗುರುತು ಮೂಡಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿಸಿದವರು ನನ್ನ ತಾಯಿ ಎಂದು ತಿಳಿಸಿದರು.ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನದ ನಂತರ ಅವಕಾಶದ ಬಾಗಿಲುಗಳು ತೆರೆದುಕೊಂಡವು. ಆ್ಯಂಕರ್ ಆಗಿ ನಿರೂಪಣೆಯ ಕೌಶಲ್ಯ ನೆಚ್ಚಿಕೊಂಡು ಹೆಜ್ಜೆಯರಿಸಿದೆ. ಕೋರಿಯೋಗ್ರಫಿ ಕುರಿತಾದ ಆಸಕ್ತಿ ಕಲಾ ವಲಯದ ಪ್ರವೇಶಕ್ಕೆ ಒತ್ತಾಸೆಯಾಯಿತು. ತದನಂತರ ನಟನೆಯ ಅವಕಾಶಗಳು ಲಭ್ಯವಾದವು ಎಂದು ಹೇಳಿದರು.
ಅರ್ಚಿತ್ ಜೈನ್, ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಸ್ ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಪಿ. ಅವರು ನಟ ಪ್ಲಥ್ವಿ ಅಂಬರ್ ಅವರನ್ನು ಅಭಿನಂದಿಸಿದರು.