ನಿರಂತರ ಅಧ್ಯಯನದಿಂದ ಸಾಧನೆ ಸುಲಭ ಸಾಧ್ಯ: ಜಿಪಂ ಸಿಇಒ ಕೆ.ಆರ್.ನಂದಿನಿ

KannadaprabhaNewsNetwork |  
Published : Jun 30, 2025, 12:34 AM IST
೨೯ಕೆಎಂಎನ್‌ಡಿ-೨ಜಿಲ್ಲೆಯ ಹಲವು ಪ್ರೌಢಶಾಲೆಗಳಿಗೆ ಜಿಪಂ ಸಿಇಓ ಕೆ.ಆರ್.ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗಬಾರದು. ಗೈರು ಹಾಜರಾದಲ್ಲಿ ನಿಮ್ಮನ್ನು ಪರೀಕ್ಷೆಗೆ ಕೂರಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಗ್ರಾಮ ಪಂಚಾಯ್ತಿ ಗ್ರಂಥಾಲಯದ ಉಪಯೋಗ ಪಡೆಯಬೇಕು. ಪಠ್ಯ ಅರ್ಥವಾಗದಿರುವ ಸಂದರ್ಭದಲ್ಲಿ ಶಿಕ್ಷಕರರ ಜತೆ ಸಮಾಲೋಚಿಸಿ ಕಲಿತುಕೊಳ್ಳಲು ಪ್ರಯತ್ನಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿದ್ಯಾರ್ಥಿಗಳು ಶಾಲೆಗೆ ಕಡ್ಡಾಯವಾಗಿ ಹಾಜರಾಗುವ ಮೂಲಕ ನಿರಂತರ ಅಧ್ಯಯನದಲ್ಲಿ ತೊಡಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು, ಇದರ ಬಗ್ಗೆ ಮುಖ್ಯ ಶಿಕ್ಷಕರು ಗಮನ ಹರಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಕೆ.ಆರ್.ನಂದಿನಿ ಸಲಹೆ ನೀಡಿದರು.

ಜಿಲ್ಲೆಯ ಹಲವು ಪ್ರೌಢಶಾಲೆಗಳಿಗೆ ಭೇಟಿ ನೀಡಿದ ಅವರು, ಮಕ್ಕಳು ಕಡ್ಡಾಯವಾಗಿ ಶಾಲೆಗೆ ಹಾಜರಾಗುವುದನ್ನು ಶಿಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮಗೊಳಿಸಬೇಕು ಎಂದರು.

೨೦೨೫ ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.೨೫ ರಷ್ಟು ಫಲಿತಾಂಶವಷ್ಟೇ ಪಡೆದಿರುವ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮ ಫಲಿತಾಂಶ ಬರಲು ಶಾಲೆಯನ್ನು ದತ್ತು ಪಡೆದು ಶೇಕಡ ೧೦೦ ರಷ್ಟು ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದರು.

ವಿದ್ಯಾರ್ಥಿಗಳು ಶಾಲೆಗೆ ಗೈರು ಹಾಜರಾಗಬಾರದು. ಗೈರು ಹಾಜರಾದಲ್ಲಿ ನಿಮ್ಮನ್ನು ಪರೀಕ್ಷೆಗೆ ಕೂರಿಸಲಾಗುವುದಿಲ್ಲ. ವಿದ್ಯಾರ್ಥಿಗಳು ಗ್ರಾಮ ಪಂಚಾಯ್ತಿ ಗ್ರಂಥಾಲಯದ ಉಪಯೋಗ ಪಡೆಯಬೇಕು. ಪಠ್ಯ ಅರ್ಥವಾಗದಿರುವ ಸಂದರ್ಭದಲ್ಲಿ ಶಿಕ್ಷಕರರ ಜತೆ ಸಮಾಲೋಚಿಸಿ ಕಲಿತುಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಒಂದು ವಾರದೊಳಗಾಗಿ ಎಲ್ಲಾ ೫೪ ಮಕ್ಕಳಿಗೆ ಪರೀಕ್ಷೆ ನಡೆಸಿ ಕಡಿಮೆ ಅಂಕ ಗಳಿಸಿದ ೨೭ ಮಕ್ಕಳನ್ನು ಒಂದು ತರಗತಿ, ಹೆಚ್ಚು ಅಂಕ ಗಳಿಸಿದ ೨೭ ಮಕ್ಕಳನ್ನು ಒಂದು ತರಗತಿ ಮಾಡಬೇಕು. ಕಡಿಮೆ ಅಂಕ ಗಳಿಸಿದ ಮಕ್ಕಳ ತರಗತಿಗೆ ಹೆಚ್ಚಿನ ನಿಗಾ ವಹಿಸಿ ವಿಷಯಗಳನ್ನು ಭೋದನೆ ಮಾಡಬೇಕು. ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಬೇಕು. ಗುಂಪು ಅಧ್ಯಯನ ಮಾಡಲು ಅವಕಾಶ ಕಲ್ಪಿಸಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ಪಟ್ಟಿ ಮಾಡಿ, ಆ ಶಾಲೆಗಳನ್ನು ತಾಲೂಕು ಮಟ್ಟದ ಅಧಿಕಾರಿಗಳಿಗೆ ದತ್ತು ನೀಡಲು ಅಗತ್ಯ ಕ್ರಮವಹಿಸಬೇಕು. ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕಿನಲ್ಲಿ ಕಡಿಮೆ ಫಲಿತಾಂಶ ಪಡೆದಿರುವ ಶಾಲೆಗಳನ್ನು ದತ್ತು ಪಡೆಯಬೇಕು. ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕರು ದತ್ತು ಪಡೆದು ಫಲಿತಾಂಶ ಉತ್ತಮಗೊಳಿಸಲು ಪ್ರಯತ್ನಿಸಬೇಕು ಎಂದು ಸೂಚನೆ ನೀಡಿದರು.

ಜಿ.ಪಂ.ಉಪ ಕಾರ್ಯದರ್ಶಿ ಲಕ್ಷ್ಮೀ, ತಾಪಂ ಇಒ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಭಾಗವಹಿಸಿದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ