ತುಮಕೂರು: ಹೊಸ ಸಂಶೋಧನೆಗಳನ್ನು ಮಾಡುವಾಗ ಅನೇಕ ಸವಾಲು ಹಾಗೂ ಸೋಲುಗಳು ಎದುರಾಗುತ್ತವೆ. ಈ ಸವಾಲುಗಳಿಗೆ ಹೆದರದೆ ಮೆಟ್ಟಿನಿಂತು ಮುನ್ನಡೆದಾಗ ಯಶಸ್ಸು ಪ್ರಾಪ್ತಿಯಾಗಲಿದೆ ಎಂದು ಬಾಹ್ಯಾಕಾಶ ಇಲಾಖೆ ಮಾಜಿ ಕಾರ್ಯದರ್ಶಿ ಹಾಗೂ ಇಸ್ರೋ ಮಾಜಿ ಅಧ್ಯಕ್ಷರೂ ಆದ ವಿಕ್ರಮ್ ಸಾರಾಭಾಯ್ ಪ್ರಾಧ್ಯಾಪಕ ಡಾ. ಕೆ. ಶಿವನ್ ಹೇಳಿದರು.
ವಿದ್ಯಾರ್ಥಿಗಳು ಪದವಿ ಮುಗಿದ ನಂತರ ಉದ್ಯೋಗಕ್ಕಾಗಿ ಹುಡುಕಾಟ ನಡೆಸುವ ಬದಲು ಸಂಶೋಧನಾ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಬೇಕು ಎಂದು ಸಲಹೆ ನೀಡಿದರು.
ಇಸ್ರೋ ಸಂಸ್ಥೆಯಿಂದ ನಡೆದ ಚಂದ್ರಯಾನ ಸಂದರ್ಭದಲ್ಲಿ ಅನೇಕ ಸವಾಲುಗಳು ಎದುರಾದವು. ಜತೆಗೆ ಸೋಲುಗಳು ಉಂಟಾದವು. ಆದರೂ ವಿಜ್ಞಾನಿಗಳು ಎದೆಗುಂದದೆ, ಪ್ರಯತ್ನವನ್ನು ಮುಂದುವರಿಸಿದರ ಫಲಯಾಗಿ ಚಂದ್ರಯಾನ-೨ ಯಶಸ್ವಿಯಾಯಿತು. ಹಾಗೆಯೇ ವಿದ್ಯಾರ್ಥಿಗಳು ಸೋಲನ್ನು ಪಾಠವೆಂದು ಪರಿಗಣಿಸಿ ಮುನ್ನುಗ್ಗಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.ಬದುಕಿನಲ್ಲಿ ಆತ್ಮಸ್ಥೈರ್ಯ, ಕಠಿಣ ಪರಿಶ್ರಮ ಹಾಗೂ ಶೋಧನೆ ಮಾಡುವ ಮನೋಭಾವ ಬಹಳ ಮುಖ್ಯ. ಈ ಮೂರು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಇಂದಿನ ವಿದ್ಯಾರ್ಥಿಗಳು ದೇಶದ ಮುಂದಿನ ಭವಿಷ್ಯ. ಹಾಗಾಗಿ ಗ್ರಾಜುಯೇಷನ್ ಡೇ ವಿದ್ಯಾರ್ಥಿಗಳ ಜೀವನದ ಒಂದು ಪ್ರಮುಖ ಘಟ್ಟವಾಗಿದೆ. ಗುರಿ ಸಾಧನೆಗೆ ಇದು ಮೆಟ್ಟಲಾಗಲಿದೆ. ಸದೃಢ ದೇಶ ನಿರ್ಮಿಸುವಲ್ಲಿ ಯುವ ಸಮುದಾಯದ ಪಾತ್ರ ಮಹತ್ವದ್ದಾಗಿದೆ. ಉತ್ತಮ ಪ್ರೋತ್ಸಾಹ ನೀಡಿದರೆ ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿಯೂ ಉನ್ನತ ಸ್ಥಾನ ಪಡೆಯಬಹುದು ಎಂದರು.
ಎಂಟೆಕ್ 50 ಅಭ್ಯರ್ಥಿಗಳು, ಬಿಇ ವಿಭಾಗಗಳ 847 ಅಭ್ಯರ್ಥಿಗಳು, ಬಿಆರ್ಕ್ 35 ಅಭ್ಯರ್ಥಿಗಳು, ಎಂಸಿಎ 118 ಅಭ್ಯರ್ಥಿಗಳು ಹಾಗೂ ಎಂಬಿಎ 196 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.