ಕಠಿಣ ಪರಿಶ್ರಮ, ಛಲದಿಂದ ಯಶಸ್ಸು ಸಾಧ್ಯ: ಡಾ. ಭವ್ಯಶ್ರೀ

KannadaprabhaNewsNetwork |  
Published : Oct 15, 2026, 02:15 AM IST
14ಜಿಡಿಜಿ7 | Kannada Prabha

ಸಾರಾಂಶ

ಕಠಿಣ ಪರಿಶ್ರಮ, ಛಲದಿಂದ ಯಶಸ್ಸು ಸಾಧ್ಯ.

ಕನ್ನಡಪ್ರಭ ವಾರ್ತೆ ಗದಗ

ನಿರ್ದಿಷ್ಟ ಗುರಿ, ನಿರಂತರ ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲವನ್ನು ರೂಢಿಸಿಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸುಲಭವಾಗಿ ಉನ್ನತ ಯಶಸ್ಸು ಗಳಿಸಲು ಸಾಧ್ಯ ಎಂದು ಗೋವಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಭವ್ಯಶ್ರೀ ಮರಳಿ ಹೇಳಿದರು.

ಗದಗ ನಗರದ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ (ಜೆಟಿ) ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಕೋಶದ ವತಿಯಿಂದ ಪದವಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಜಾಮ್, ಗೇಟ್ ಹಾಗೂ ಪಿಜಿಸಿಇಟಿ ಪರೀಕ್ಷೆಗಳ ಜಾಗೃತಿ ಮತ್ತು ಪೂರ್ವಸಿದ್ಧತಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಐಐಎಸ್‌ ಸಿ ಹಾಗೂ ಎನ್‌ ಐಟಿಗಳಲ್ಲಿ ಉನ್ನತ ವ್ಯಾಸಂಗ ಪ್ರವೇಶ ಪಡೆಯಲು ಇಂತಹ ಪರೀಕ್ಷೆಗಳು ಹೆಬ್ಬಾಗಿಲಾಗಿವೆ. ಪದವಿ ಹಂತದಿಂದಲೇ ವ್ಯವಸ್ಥಿತ ವೇಳಾಪಟ್ಟಿ ರೂಪಿಸಿಕೊಂಡು, ಹಳೆಯ ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ, ನಿರಂತರ ಅಧ್ಯಯನ ಹಾಗೂ ಸಮಯ ನಿರ್ವಹಣೆಯೊಂದಿಗೆ ಸಿದ್ಧತೆ ನಡೆಸಬೇಕು.

ಈ ಪರೀಕ್ಷೆಗಳಲ್ಲಿ ಉತ್ತಮ ಶ್ರೇಯಾಂಕ ಪಡೆಯುವುದರಿಂದ ಭಾರತ ಸರ್ಕಾರದ ಆಕರ್ಷಕ ಶಿಷ್ಯವೇತನಗಳು, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಉದ್ಯೋಗಾವಕಾಶಗಳು ಹಾಗೂ ವಿದೇಶಗಳಲ್ಲಿ ಸಂಶೋಧನೆ ಮತ್ತು ಉನ್ನತ ವ್ಯಾಸಂಗಕ್ಕೆ ವಿಫುಲ ವಿದ್ಯಾರ್ಥಿ ವೇತನಗಳು ಲಭ್ಯವಾಗುತ್ತವೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ರಾಜೇಶ ನಾಯರಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೀಳರಿಮೆ ತೊರೆದು ರಾಷ್ಟ್ರಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಕೇವಲ ಪದವಿ ಪ್ರಮಾಣಪತ್ರಕ್ಕೆ ಸೀಮಿತವಾಗದೆ ಜಾಗತಿಕ ಸ್ಪರ್ಧೆಗೆ ಅಣಿಯಾಗಬೇಕು ಎಂದರು.

ಐಕ್ಯೂಎಸಿ ಸಂಚಾಲಕ ಡಾ. ರಮೇಶ್ ಜಿ.ಕೆ. ಮಾತನಾಡಿ, ಕಾಲೇಜು ಕಲ್ಪಿಸುವ ಇಂತಹ ಮಾರ್ಗದರ್ಶನ ಶಿಬಿರಗಳ ಸದುಪಯೋಗ ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಸಂಚಾಲಕಿ ಡಾ. ಮಂಜುಳಾ ಹರಗೇರಿ ಸ್ವಾಗತಿಸಿದರು. ಸೌಂದರ್ಯ ಪ್ರಾರ್ಥಿಸಿದರು. ಸಿಂಚನ ನಿರೂಪಿಸಿ, ಅನ್ನಪೂರ್ಣ ವಂದಿಸಿದರು. ಕಾರ್ಯಾಗಾರದಲ್ಲಿ 230 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಜನಾದ್ರಿ ದೇಗುಲದಿಂದ ಸಿಬ್ಬಂದಿ ಹೊರಗೆ ಹಾಕಿದ ವಿದ್ಯಾದಾಸ ಬಾಬಾ
ವರ್ತುಲ ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ವಿರೋಧ