ಶಿರಹಟ್ಟಿ: ಜೀವನದಲ್ಲಿ ಪ್ರಾಮಾಣಿಕತೆ, ಶಿಸ್ತು, ಕಠಿಣ ಪರಿಶ್ರಮವಿದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಹೇಳಿದರು.
ಕಠಿಣ ಪರಿಶ್ರಮದಿಂದ ಕಂಡ ಕನಸನ್ನು ನನಸು ಮಾಡಲು ಸಾಧ್ಯ. ಹೀಗಾಗಿ ವಿದ್ಯಾರ್ಥಿಗಳು ಸತತ ಪ್ರಯತ್ನದಲ್ಲಿ ತೊಡಗಿರಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ದೊಡ್ಡ ಗುರಿ, ಜ್ಞಾನದ ಸಂಪಾದನೆ, ಕಠಿಣ ಪರಿಶ್ರಮ ಹಾಗೂ ದೃಢವಾದ ಸತತ ಪ್ರಯತ್ನ ಎಂಬ ನಾಲ್ಕು ಅಂಶ ಅಳವಡಿಸಿಕೊಂಡು ಸಾಗಿದಲ್ಲಿ ಕಂಡ ಕನಸು ನನಸಾಗಿಸಲು ಸಾಧ್ಯ ಎಂದರು.
ಜೀವನದಲ್ಲಿ ಧನಾತ್ಮಕ ಚಿಂತನೆ ಅಳವಡಿಸಿಕೊಂಡು ದೇಶಕ್ಕಾಗಿ ಏನಾದರೂ ಕೊಡುಗೆ ನೀಡುವತ್ತ ಗಮನಹರಿಸಬೇಕು. ನಿಮ್ಮ ಸಾಧನೆಗೆ ದೇಶ ಕಾಯುತ್ತಿದೆ ಎಂದ ಅವರು, ಉತ್ತಮ ಗುಣ ರೂಢಿಸಿಕೊಂಡು ಭವಿಷ್ಯದ ನಾಯಕರಾಗಿ ಹೊರಹೊಮ್ಮಬೇಕು. ಸ್ವಾತಂತ್ರ್ಯಕ್ಕೂ ಪೂರ್ವ ನಮ್ಮಲ್ಲಿ ತಂತ್ರಜ್ಞಾನದ ಉಪಕರಣಗಳ ಲಭ್ಯವಿರಲಿಲ್ಲ. ಇದೀಗ ಭಾಹ್ಯಾಕಾಶ, ರಕ್ಷಣಾ ಸೇರಿದಂತೆ ವಿವಿಧ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭಾರತ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಹಸೀಲ್ದಾರ್ ಅನಿಲ ಬಡಿಗೇರ ಮಾತನಾಡಿ, ಶ್ರದ್ದೆ, ಶ್ರಮ, ನಿರಂತರತೆ ಇದ್ದರೆ ಗುರಿ ಮುಟ್ಟಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಾಲೇಜು ಮಟ್ಟದಿಂದಲೇ ವಿದ್ಯಾರ್ಥಿಗಳು ಗುರಿ ತಲುಪಲು ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ.
ಪ್ರಾಧ್ಯಾಪಕ ಬಾಹುಬಲಿ ಜೈನರ ಮಾತನಾಡಿ, ವಿದ್ಯಾರ್ಥಿಗಳು ಯಾವತ್ತೂ ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಎಂತಹ ಹುದ್ದೆಯನ್ನಾದರೂ ಪಡೆಯಬಹುದು. ನಿರಂತರ ಗುರುಗಳ ಮಾರ್ಗದರ್ಶನ ಹಾಗೂ ಕಠಿಣ ಅಭ್ಯಾಸದಿಂದ ನಿರೀಕ್ಷಿತ ಗುರಿ ಸಾಧಿಸಬಹುದು ಎಂದು ತಿಳಿಸಿದರು.
ಶಿಕ್ಷಣದಿಂದ ಮಾತ್ರ ಜೀವನಕ್ಕೆ ಬೆಲೆ ಸಿಗೋದಿಲ್ಲ. ಶಿಕ್ಷಣದೊಂದಿಗೆ ಸಂಸ್ಕಾರ, ಸಂಸ್ಕೃತಿಯ ಕುರಿತು ಮಾರ್ಗದರ್ಶನದ ಅವಶ್ಯಕತೆ ಇಂದಿನ ದಿನಮಾನಗಳಲ್ಲಿ ಅತ್ಯಂತ ಅವಶ್ಯವಾಗಿದೆ. ಜತೆಗೆ ಸಾಂಸ್ಕೃತಿಕ, ಕ್ರೀಡೆ ಹೀಗೆ ಎಲ್ಲ ರಂಗದಲ್ಲಿಯೂ ನಾವು ತೊಡಗಿಸಿಕೊಂಡಾಗ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ತಿಳಿಸಿದರು.