ಕನ್ನಡಪ್ರಭ ವಾರ್ತೆ ಮಹಾಲಿಂಗಪುರ(ರ-ಬ)
ಸಮೀಪದ ಕೆಸರಗೊಪ್ಪದ ಭಗೀರಥ ವಿದ್ಯಾವರ್ಧಕ ಶಿಕ್ಷಣ ಸಂಸ್ಥೆಯಿಂದ ನಡೆದ ಸಾಂಸ್ಕೃತಿಕ ವೈಭವದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಜಗತ್ತಿನ ಪ್ರತಿ ಸಾಧಕನ ಹಿಂದೆ ಒಬ್ಬ ಆದರ್ಶ ತಾಯಿ ಮತ್ತು ಗುರುವಿರುತ್ತಾನೆ. ಜೀಜಾಬಾಯಿಯಂಥ ತಾಯಿಯಿಂದ ಶಿವಾಜಿಯಂತಹ ಚಕ್ರವರ್ತಿ ರೂಪಗೊಂಡ. ಆದರೆ ಇಂದು ಬಹಳಷ್ಟು ಮಾತೆಯರು ಟಿವಿ ಧಾರಾವಾಹಿಗಳ ಗೀಳಿಗೆ ಬಲಿಯಾಗಿ ಮಕ್ಕಳಲ್ಲಿ ಅನಾಥ ಪ್ರಜ್ಞೆ ಕಾಡುವಂತಾಗಿದೆ. ಹಾಗಾಗೀ ನಿತ್ಯ ಮಗು ಶಾಲೆಯಿಂದ ಮನೆಗೆ ಬರುವ ವೇಳೆಗೆ ಮನೆ ದೇವಾಲಯವಾಗಿರಲಿ. ಮಕ್ಕಳಿಗೆ ಆದರ್ಶ ಪುರುಷರ ಚರಿತ್ರೆ ಹೇಳಿ ದೇಶಪ್ರೇಮಿಗಳನ್ನಾಗಿಸಬೇಕಿದೆ. ಗ್ರಾಮೀಣ ಭಾಗದಲ್ಲಿದ್ದರೂ ಭಗೀರಥ ಕನ್ನಡ ಮಾಧ್ಯಮ ಶಾಲೆಯ ಮಕ್ಕಳ ನಿರರ್ಗಳ ಕನ್ನಡ, ಇಂಗ್ಲಿಷ್ ನಿರೂಪಣೆ, ಕ್ರೀಡೆ, ನೃತ್ಯ ಮುಂತಾದ ಪ್ರತಿಭೆ ಯಾವುದೇ ಸಿಬಿಎಸ್‌ಇ, ಐಸಿಎಸಇ ಶಾಲೆಗಳನ್ನು ಮೀರಿಸುವಂತಿದ್ದು, ಇದೇ ಗುಣಮಟ್ಟ ಕಾಯ್ದುಕೊಂಡು ಗ್ರಾಮೀಣ ಪ್ರತಿಭೆಗಳನ್ನು ಬೆಳೆಸುವಂತಾಗಲೆಂದರು.
ಶಿವಾಪುರದ ಅಡವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಸಾಧನೆಯ ನಂತರ ಹತ್ತಿದ ಮೆಟ್ಟಲುಗಳನ್ನು ಮರೆಯುವ ಹಾಗೂ ಸಂಪತ್ತು ಬಂದ ಮೇಲೆ ಹೆತ್ತವರನ್ನು ಮರೆಯುವ ಗುಣದಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗುತ್ತಿದೆ. ಮನುಷ್ಯ ಸ್ವಾರ್ಥವನ್ನು ತ್ಯಜಿಸಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕಾಗಿದೆ ಎಂದರು.ಭಗೀರಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜವಾಹರ ದಡ್ಡಿಮನಿ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಪ್ರತಿಭೆಗಳಾದ ಅಪರಾಧ ಸ್ಥಳ ಪರಿಶೀಲನಾಧಿಕಾರಿ ಪ್ರಕಾಶ ಸಸಾಲಟ್ಟಿ, ಪಿಎಸ್‌ಐ ಪರೀಕ್ಷೆಯ ೧೭೨ನೇ ರ‍್ಯಾಂಕ್ ವಿಜೇತ ಲಕ್ಷ್ಮಣ ಬ್ಯಾಕೋಡ, ಅಥ್ಲೆಟಿಕ್ ಚಿನ್ನದ ಪದಕ ವಿಜೇತೆ ಪೃಥ್ವಿ ಬ್ಯಾಕೋಡರನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ಉಪಾಧ್ಯಕ್ಷ ಸಿದಗಿರೆಪ್ಪ ಉಳ್ಳಾಗಡ್ಡಿ, ಕಾರ್ಯದರ್ಶಿ ಶ್ರೀಶೈಲ ಬಡಿಗೇರ, ನಿರ್ದೇಶಕರಾದ ಭೀಮಪ್ಪ ಸಸಾಲಟ್ಟಿ, ಚನ್ನು ದೇಸಾಯಿ, ಮಾರುತಿ ಕರೋಶಿ, ಸಿದ್ದು ಸತ್ತಿಗೇರಿ, ಪ್ರಭು ಹುಬ್ಬಳ್ಳಿ, ಶಿವಾನಂದ ದೊಡಮನಿ, ಜಯಶ್ರೀ ತೇಜಪ್ಪಗೋಳ, ಬಸವರಾಜ ಶಿರೋಳ, ವಸಂತ ಜಗದಾಳ, ಮುಖ್ಯಗುರು ವಿಠ್ಠಲ ಕಾರಜೋಳ ಮತ್ತು ಇತರರಿದ್ದರು. ಅಕ್ಷತಾ ಬ್ಯಾಕೋಡ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಂಜಲಿ ದಡ್ಡಿಮನಿ, ಮಹೇಶ ಏಳೆಮ್ಮಿ, ರಾಜರಾಂ ಬಡಿಗೇರ, ಸಂಜನಾ ಚನ್ನಾಳ, ರಶ್ಮಿ, ದಡ್ಡಿಮನಿ, ಕಾರ್ತಿಕ ಪೂಜಾರಿ, ಸಾಧನಾ ಪೂಜಾರಿ, ಗಾಯಿತ್ರಿ ಬಡಿಗೇರ ನಿರ್ವಹಿಸಿದರು.