ಧಾರವಾಡ: ನೂರಾರು ಕೋಟಿ ಹಣ ವ್ಯಯಿಸಿ ಜಾರಿಗೊಳಿಸಿದ ಜಲ ಜೀವನ್ ಮಿಶನ್ (ಜೆಜೆಎಂ) ಯೋಜನೆ ಜನರಿಗೆ ಉಪಯೋಗ ಆಗಿಲ್ಲ. ಬಹುತೇಕ ಹಳ್ಳಿಗಳಲ್ಲಿ ಪೈಪ್ ಕಿತ್ತು ಹೋಗಿವೆ. ಕೆಲವು ಸಚಿವರು ತಪ್ಪು ಭಾವಿಸಿದರೂ ಪರವಾಗಿಲ್ಲ. ಈ ಯೋಜನೆ ಸಕ್ಸಸ್ ಅಸಾಧ್ಯ ಎಂದು ಶಾಸಕ ವಿನಯ ಕುಲಕರ್ಣಿ ಕಡ್ಡಿ ಮುರಿದಂತೆ ಯೋಜನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಮೀಪದ ಕಿತ್ತೂರಿನ ಪ್ರವಾಸಿ ನಿರೀಕ್ಷಣಾ ಮಂದಿರದ ಆವರಣದಲ್ಲಿ ಸೋಮವಾರ ಅರ್ಹ ರೈತರಿಗೆ ಸರ್ಕಾರದ ಯೋಜನೆಗಳಲ್ಲಿ ವಿವಿಧ ಯಂತ್ರೋಪಕರಣ ವಿತರಣೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.ಜೆಜೆಎಂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸಂಪೂರ್ಣ ವಿಫಲವಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಈ ಯೋಜನೆಯಿಂದ ಹಣ ಪೋಲಾಗಿದ್ದಾಗಿ ದೂರಿದರು.
₹1200 ಕೋಟಿ ವೆಚ್ಚದಲ್ಲಿ ಧಾರವಾಡ, ಕಲಘಟಗಿ, ಕುಂದಗೋಳ ಹಾಗೂ ನವಲಗುಂದ ತಾಲೂಕಿನ ಹಳ್ಳಿಗಳಿಗೆ ನಿರಂತರ ಕುಡಿಯುವ ನೀರು ಯೋಜನೆ ಜಾರಿಗೆ ಮಲಪ್ರಭಾದಿಂದ ಪ್ರತ್ಯೇಕ ಪೈಪ್‌ಲೈನ್ ಅಳವಡಿಸಿದ್ದಾಗಿ ತಿಳಿಸಿದರು.ಈಗಾಗಲೇ ನೀರು ಸಂಗ್ರಹಕ್ಕೆ ಉಳ್ಳಿಗೇರಿ ಗ್ರಾಮದ ಹತ್ತಿರ ಪ್ರತ್ಯೇಕ ಟ್ಯಾಂಕ್ ನಿರ್ಮಿಸಿದೆ. ಜೆಜೆಎಂ ವೈಫಲ್ಯದ ಕುರಿತು ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದರೂ, ಪ್ರಯೋಜನವಾಗಿಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.
ತಮ್ಮ 20 ವರ್ಷಗಳ ರಾಜಕೀಯ ಜೀವನದಲ್ಲಿ ಎಲ್ ಆ್ಯಂಡ್ ಟಿ ಕಂಪನಿಯಂತಹ ಕೆಟ್ಟ ಕಂಪನಿ ನೋಡಿಯೇ ಇಲ್ಲ. ಕಳಪೆ ಕಾಮಗಾರಿ ಬಗ್ಗೆ ಪರಿಶೀಲನೆ ನಡೆದಿದೆ. ಅಲ್ಲದೇ, ಈ ಕಂಪನಿಗೆ ₹10 ಕೋಟಿ ದಂಡ ವಿಧಿಸಿದ್ದಾಗಿ ಹೇಳಿದರು.ತಮ್ಮ ಗ್ರಾಮೀಣ ಕ್ಷೇತ್ರದಲ್ಲಿ ಬಹುತೇಕ ಸಿಸಿ ರಸ್ತೆ ನಿರ್ಮಿಸಿತ್ತು. ಆದರೆ, ಈ ಕಂಪನಿ ಜೆಜೆಎಂ ಅನುಷ್ಠಾನದ ನೆಪದಲ್ಲಿ ಸಾಕಷ್ಟು ರಸ್ತೆ ಹಾಳು ಮಾಡಿಟ್ಟಿದೆ. ಹಾಳಾದ ರಸ್ತೆ ರಿಪೇರಿ ಮಾಡಿಲ್ಲ. ಗುತ್ತಿಗೆ ಪಡೆದವರೂ, ಪತ್ತೆಯಾಗಿಲ್ಲ ಎಂದು ದೂರಿದರು.
ಹುಬ್ಬಳ್ಳಿ-ಧಾರವಾಡಕ್ಕೆ ರಿಂಗ್ ರೋಡ್ ಬಹಳ ಅಗತ್ಯವಿದೆ. ಇದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರೂ ಮೂರ್ನಾಲ್ಕು ಯೋಜನೆ ರೂಪಿಸಿದ್ದಾರೆ. ಈ ಬಗ್ಗೆ ಸರ್ವೇ ಕಾರ್ಯವೂ ಮುಗಿದಿದೆ. ಈ ಯೋಜನೆ ಜರೂರು ಅನುಷ್ಠಾನಿಸಲು ಒತ್ತಾಯಿಸಿದರು.ಜಿಲ್ಲೆಯಲ್ಲಿ ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ಅಂಗವಿಕಲರ ವೇತನ ಸೇರಿದಂತೆ ಸುಮಾರು 2004 ಪ್ರಕರಣ ವಿಲೇವಾರಿ ಮಾಡಿ, ಪ್ರಮಾಣ ಪತ್ರ ವಿತರಿಸಿದೆ. ಆರೇಳು ರೈತರ ಆತ್ಮಹತ್ಯೆ ಪ್ರಕರಣಕ್ಕೆ ಪರಿಹಾರ ನೀಡಿದ್ದಾಗಿ ತಿಳಿಸಿದರು.
ಕೃಷಿ ಹಾಗೂ ತೋಟಗಾರಿಕೆ ಇಲಾಖೆ ವಿವಿಧ ಯೋಜನೆಯಡಿ ಶೇ. 90ರಷ್ಟು ಸಬ್ಸಿಡಿ ದರದಲ್ಲಿ ರೈತರಿಗೆ ಟ್ಯಾಕ್ಟರ್, ರೋಟೊವ್ಯಾಕ್ಟರ್, ನೇಗಿಲು, ಒಕ್ಕುವ ಯಂತ್ರ ಹಾಗೂ ಬಿತ್ತುವ ಯಂತ್ರಗಳು ಅರ್ಹರಿಗೆ ನೀಡುವ ಕೆಲಸ ಮಾಡಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ, ಜಿಪಂ ಮಾಜಿ ಸದಸ್ಯ ಕರಿಯಪ್ಪ ಮಾದರ, ಹು-ಡಾ ಯೋಜನಾಧಿಕಾರಿ ಡಾ.ಸಂತೋಷ ಬಿರಾದಾರ ಇದ್ದರು.