ಕಾರವಾರ: ತಾವು ಕಂಡ ಕನಸನ್ನು ನನಸು ಮಾಡಲು ತಮ್ಮಲ್ಲಿರುವ ಕತ್ತಲನ್ನು ಬೆಳಕಾಗಿ ಪರಿವರ್ತಿಸಲು, ಪ್ರತಿಭೆಯನ್ನು ಹೊರಹಾಕಲು ಋಣಾತ್ಮಕ ವಿಚಾರಗಳನ್ನು ಕಿತ್ತುಹಾಕಿ ಧನಾತ್ಮಕತೆಯನ್ನು ಅಳವಡಿಸಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಭಾರ ಉಪನಿರ್ದೇಶಕ ವಿರೂಪಾಕ್ಷಗೌಡ ಪಾಟೀಲ್ ತಿಳಿಸಿದರು.
ತಾಲೂಕಿನ ಅಸ್ನೋಟಿ ಶಿವಾಜಿ ವಿದ್ಯಾಮಂದಿರದಲ್ಲಿ ನಡೆದ ಉ.ಕ. ಜಿಲ್ಲಾ ನಾಗರಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ಸಮಿತಿ ಉದ್ಘಾಟಿಸಿ ಮತ್ತು ಸಾಧಕರಿಗೆ ಸನ್ಮಾನ ಹಾಗೂ ವಸತಿನಿಲಯದ ವಿದ್ಯಾರ್ಥಿಗಳಿಗೆ ಅವಶ್ಯಕ ವಸ್ತುಗಳ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಕ್ರಿಯಾಶೀಲ ಮನೋಭಾವ ಬೆಳೆಸಿಕೊಂಡು ಕಠಿಣ ಪರಿಶ್ರಮಪಟ್ಟರೆ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದರು.ಸಮಿತಿಯ ಪ್ರಧಾನ ಕಾರ್ಯದರ್ಶಿ ಸತೀಶ ನಾಯ್ಕ ಮಾತನಾಡಿ, ಉ.ಕ. ಜಿಲ್ಲಾ ನಾಗರಿಕರ ಮತ್ತು ಅಂಘಟಿತ ಕಾರ್ಮಿಕರ ಹಿತರಕ್ಷಣಾ ಸಮಿತಿಯು ಒಂದು ವರ್ಷದ ಹಿಂದೆಯೇ ಜನ್ಮ ತಾಳಿ ಇಂದು ಬದುಕನ್ನು ಅರಳಿಸಿಕೊಂಡಿದೆ. ಈ ಸಂಘಟನೆ ಬೆಳೆದು ತನ್ನ ಬೆಳಕನ್ನು ರಾಜ್ಯದ ಎಲ್ಲೆಡೆ ಪಸರಿಸಬೇಕು. ದೀನ ದಲಿತರು, ಬಡವರ, ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ತಲುಪಿಸಿ ಅವರಲ್ಲಿನ ಕತ್ತಲನ್ನು ಹೋಗಲಾಡಿಸಿ ಬೆಳಕಿನ ಜ್ಯೋತಿ ಚೆಲ್ಲಬೇಕೆಂಬ ಉದ್ದೇಶ ಹೊಂದಿದೆ ಎಂದರು.ಸದಾಶಿವಗಡದ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಗಣೇಶ ಬಿಷ್ಠಣ್ಣನವರ್ ಮಾತನಾಡಿ, ಈ ಸಂಘಟನೆ ಯಾವುದೇ ನಂಬಿಕೆದ್ರೋಹ ಹಾಗೂ ರಾಜಕಾರಣಕ್ಕೆ ಬಲಿಕೊಡದೆ ಉತ್ತಮವಾಗಿ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದರು. ಈ ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತರಾದ ಅಣಶಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ವಿಷ್ಣು ಪಟಗಾರ ಮತ್ತು ಅಂಕೋಲಾ ಪಿ.ಎಂ. ಹೈಸ್ಕೂಲ್ ಶಾಲೆಯ ಶಿಕ್ಷಕ ಜಿ.ಆರ್. ತಾಂಡೇಲ ಅವರನ್ನು ಸನ್ಮಾನಿಸಲಾಯಿತು.ಸಮಿತಿಯ ಅಧ್ಯಕ್ಷ ಪ್ರಮೋದ ಮಾಳ್ಸೇಕರ, ಖಜಾಂಜಿ ಪ್ರಭಾಕರ ಮಡಿವಾಳ, ಸದಸ್ಯರಾದ ಸುನೀಲ ನಾಯ್ಕ, ಗಣಪತಿ ನಾಯ್ಕ, ಶ್ರೀಧರ ನಾಯ್ಕ, ಚೇತನ್ ಮ್ಹಾಳೇಕರ ಇದ್ದರು. ಸಮಿತಿಯ ಜಂಟಿ ಕಾರ್ಯದರ್ಶಿ ನಾಗೇಶ ಭೋವಿ ಸ್ವಾಗತಿಸಿದರು. ಸಮಿತಿಯ ಉಪಾಧ್ಯಕ್ಷೆ ಶೋಭಾ ನಾರ್ವೇಕರ ನಿರೂಪಿಸಿದರು.
೧೮ರಂದು ಕುಂದರಗಿ ಸೊಸೈಟಿಯ ನೂತನ ಕಟ್ಟಡ ಉದ್ಘಾಟನೆಯಲ್ಲಾಪುರ: ತಾಲೂಕಿನ ಕುಂದರಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ₹೨.೫೪ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ನ. ೧೮ರಂದು ಜರುಗಲಿದೆ.ಇದೇ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಿಗೆ ಗೌರವ ಸನ್ಮಾನ, ಸದಸ್ಯರ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಕುಮಟಾದ ಜಿಲ್ಲಾ ಸಹಕಾರ ಯುನಿಯನ್ ಸಹಯೋಗದಲ್ಲಿ ಸಹಕಾರ ಸಪ್ತಾಹದ ಪ್ರಯುಕ್ತ ಉಪನ್ಯಾಸ ಮತ್ತು ಸನ್ಮಾನ ಕಾರ್ಯಕ್ರಮವು ಜರುಗಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಂದು ಬೆಳಗ್ಗೆ ೧೦ ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಉಪಸ್ಥಿತರಿರುವರು. ಕಟ್ಟಡದ ಉದ್ಘಾಟನೆಯನ್ನು ಶಾಸಕ ಶಿವರಾಮ ಹೆಬ್ಬಾರ್ ನೆರವೇರಿಸುವರು.ವಿಶೇಷ ಅಭ್ಯಾಗತರಾಗಿ ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಪಾಲ್ಗೊಳ್ಳಲಿದ್ದು, ಸಂಘದ ಅಧ್ಯಕ್ಷ ಹೇರಂಬ ಹೆಗಡೆ ಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತೊಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಗ್ರಾಪಂ ಅಧ್ಯಕ್ಷೆ ಯಮುನಾ ಸಿದ್ದಿ, ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ವಿ.ಎನ್. ಭಟ್ಟ ಅಳ್ಳಂಕಿ, ಶಿರಸಿಯ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮತ್ತೀಘಟ್ಟ, ಶಿರಸಿಯ ಟಿಎಂಎಸ್ ಅಧ್ಯಕ್ಷ ಜಿ.ಟಿ.ಹೆಗಡೆ ತಟ್ಟೀಸರ, ಯಲ್ಲಾಪುರ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಹಾಸಣಗಿ ಸೇ.ಸ. ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ ಇತರರು ಆಗಮಿಸುವರು.