ಧಾರವಾಡ:
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಿಂದ ಎದುರಾಗಬಹುದಾದ ಅಪಾಯ ನಿವಾರಿಸುವ, ಇತ್ತೀಚೆಗೆ ವೈದ್ಯಕೀಯ ಕ್ಷೇತ್ರಕ್ಕೆ ಪರಿಚಿತವಾದ ಅತ್ಯಾಧುನಿಕ ತಂತಿ ಮುಕ್ತ ಪೇಸ್‌ಮೇಕರ್ ಇದಾಗಿದೆ. ಸಾಮಾನ್ಯವಾಗಿ ಹೃದಯ ಬಡಿತ ಅಸಹಜವಾಗಿ ಕಡಿಮೆಯಾದ ಸಂದರ್ಭದಲ್ಲಿ ಪೇಸ್‌ಮೇಕರ್ ಅಳವಡಿಸಲಾಗುತ್ತದೆ. ಅಂತೆಯೇ, 68 ವರ್ಷದ ವ್ಯಕ್ತಿಯೊಬ್ಬರಿಗೆ ಈ ಚಿಕಿತ್ಸೆ ಮಾಡಿದ್ದು ಸಂಪೂರ್ಣ ಯಶಸ್ವಿಯಾಗಿದೆ ಎಂದರು.
ಹೇಗೆ ಕಾರ್ಯ:ಎದೆ ಸೀಳಿ ತಂತಿಗಳನ್ನು ಅಳವಡಿಸಬೇಕಾದ ಸಾಂಪ್ರದಾಯಿಕ ಪೇಸ್‌ಮೇಕರ್‌ಗಳಿಗಿಂತ ಇದು ಭಿನ್ನವಾಗಿದೆ. ಸಂಪೂರ್ಣ ವೈಯರ್‌ಲೆಸ್ ಆಗಿದ್ದು ಸ್ಥಳೀಯ ಅರಿವಳಿಕೆ ನೀಡಿ ಒಂದು ಗಂಟೆ ಪ್ರಕ್ರಿಯೆ ನಡೆಸಲಾಗಿದೆ. ತೊಡೆಯ ಭಾಗದ ರಕ್ತನಾಳದ ಮೂಲಕ ಕ್ಯಾತಿಟರ್ ಸಹಾಯದಿಂದ ಸಣ್ಣ ಪೇಸ್‌ಮೇಕರ್ ಕ್ಯಾಪ್ಸುಲ್‌ಗಳನ್ನು ನೇರವಾಗಿ ಹೃದಯದ ಮೇಲಿನ ಮತ್ತು ಕೆಳಗಿನ ಬಲ ಕೋಣೆಗಳಲ್ಲಿ ಅಳವಡಿಸಲಾಗುತ್ತದೆ ಎಂದ ಅವರು, ಹೃದಯ ಬಡಿತದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಇದೊಂದು ಮಹತ್ವದ ಸಾಧನೆ ಎಂದು ವಿವರಿಸಿದರು.
ಇಲ್ಲಿ ಯಾವುದೇ ತಂತಿಗಳಾಗಲಿ ಅಥವಾ ಶಸ್ತ್ರಚಿಕಿತ್ಸೆಯ ಪಾಕೆಟ್‌ಗಳಾಗಲಿ ಇಲ್ಲ. ಹೀಗಾಗಿ ರೋಗಿಯ ದೇಹದ ಮೇಲೆ ಯಾವುದೇ ಕಲೆ ಆಗುವುದಿಲ್ಲ. ರಕ್ತಸ್ರಾವ ಕನಿಷ್ಠವಿದ್ದು, ಸೋಂಕು ಅಥವಾ ತಂತಿ-ಸಂಬಂಧಿತ ತೊಡಕುಗಳ ಅಪಾಯ ಇರುವುದಿಲ್ಲ. ಅಲ್ಲದೆ, ಈ ಸಾಧನವು 17 ವರ್ಷ ಬ್ಯಾಟರಿ ಅವಧಿ ಹೊಂದಿದ್ದು, ಸಂಪೂರ್ಣ ಸುರಕ್ಷಿತವಾಗಿದೆ ಎಂದು ಡಾ. ರಘು ಪ್ರಸಾದ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಹೃದಯಾಲಯದ ಸೋಮನಾಥ ರಾಯಕೋಡಿ, ದುಂಡೇಶ್ ತಡಕೋಡ ಇದ್ದರು.