- ಹೊನ್ನೇಕೊಡಿಗೆ ಸಂಜೀವಿನಿ ಒಕ್ಕೂಟದ ಸ್ಪೂರ್ತಿ ಸ್ವಸಹಾಯ ಸಂಘದಿಂದ ಪ್ರಾರಂಭಿಸಿದ ಎಣ್ಣೆ ಗಾಣ ಉದ್ಘಾಟನೆ
ಮಹಿಳೆಯರಿಗೆ ಕೊಟ್ಟ ಎಲ್ಲಾ ಜವಾಬ್ದಾರಿಯನ್ನು ಪ್ರಾಮಾಣಿಕತೆಯಿಂದ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಮಂಗಳವಾರ ಹೊನ್ನೇಕೊಡಿಗೆ ಗ್ರಾಪಂ ವ್ಯಾಪ್ತಿಯ ಹಂತುವಾನಿಯಲ್ಲಿ ಹೊನ್ನೇಕೊಡಿಗೆ ಸಂಜೀವಿನಿ ಒಕ್ಕೂಟದ ಸ್ಪೂರ್ತಿ ಮಹಿಳಾ ಸ್ವಸಹಾಯ ಸಂಘದವರು ನೂತನವಾಗಿ ₹3 ಲಕ್ಷ ರು. ವೆಚ್ಚದಲ್ಲಿ ಪ್ರಾರಂಭಿಸಿದ ಎಣ್ಣೆ ಗಾಣದ ಮಿಷನ್ ಉದ್ಘಾಟಿಸಿ ಮಾತನಾಡಿದರು. ಇಂದಿನ ಕಾಲದಲ್ಲಿ ಕೊಬ್ಬರಿ ಎಣ್ಣೆ ಯಲ್ಲೂ ಕಲಬೆರಕೆ ಕಂಡು ಬಂದಿದೆ. ಆದ್ದರಿಂದ ಇಲ್ಲೇ ತಯಾರಿಸುವ ಶುದ್ಧ ಕೊಬ್ಬರಿ ಎಣ್ಣೆಯನ್ನು ಇಲ್ಲಿನ ಗ್ರಾಮಸ್ಥರು ಇಲ್ಲೇ ಖರೀದಿ ಮಾಡಬೇಕು ಎಂದು ಸಲಹೆ ನೀಡಿದರು.ಸಂಜೀವಿನಿ ಒಕ್ಕೂಟದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲೇ ಇದು 2 ನೇ ಎಣ್ಣೆ ಗಾಣ ಪ್ರಾರಂಭವಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ ಪ್ರಥಮ ಎಣ್ಣೆ ಗಾಣವಾಗಿದೆ. ಬಹಳ ವರ್ಷಗಳ ಹಿಂದೆ ಮಹಿಳೆಯರು 4 ಗೋಡೆಯ ಒಳಗೆ ಸೀಮಿತವಾಗಿದ್ದರು. ಇಂದಿರಾ ಗಾಂಧಿ ಕಾಲದಿಂದ ಮಹಿಳೆಯರಿಗೆ ಸಮಾನತೆ ಬಂದಿದೆ. ಈಗ ಮಹಿಳೆಯರು ಎಲ್ಲಾ ರಂಗದಲ್ಲೂ ಯಶಸ್ಸು ಕಂಡಿದ್ದಾರೆ. ರಾಷ್ಟ್ರಪತಿಯಿಂದ ಹಿಡಿದು ರಾಜಕೀಯ, ಕ್ರೀಡೆ, ಗಗನ ಯಾತ್ರೆಯಲ್ಲೂ ಸಾಧನೆ ಮಾಡಿದ್ದಾರೆ. ರಾಜೂವ್ ಗಾಂಧಿ ಪ್ರಧಾನಿಯಾಗಿದ್ದಾಗ ವಿವಿಧ ಕ್ಷೇತ್ರದಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ತಂದಿದ್ದರು. ಮುಂದೆ ಶಾಸನ ಸಭೆಯಲ್ಲೂ ಮಹಿಳೆಯರಿಗೆ ಶೇ. 50 ರಷ್ಟು ಮೀಸಲಾತಿ ಬರಬಹುದು ಎಂದರು.
ಈ ಸಂದರ್ಭದಲ್ಲಿ ಹೊನ್ನೇಕೊಡಿಗೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಶಬಿ ಮರಿಯಮ್ಮ, ಕಾರ್ಯದರ್ಶಿ ಹೇಮಾವತಿ, ಖಜಾಂಚಿ ನಿಶ್ಚಿತ, ಎನ್.ಆರ್.ಎಲ್.ಎಂ.ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸುಬ್ರಮಣ್ಯ, ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ಶೈನಿ, ಕವನಾ, ಕೃಷಿಯೇತರ ವ್ಯವಸ್ಥಾಪಕಿ ವಿನೂತಾ ,ಗ್ರಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷೆ ಕೆ.ವಿ.ಚಾಂದಿನಿ, ಗ್ರಾಪಂ ಸದಸ್ಯದ ಕೆ.ಎನ್.ಮಂಜುನಾಥ್, ಅಶೋಕ್, ತಾಪಂ ಮಾಜಿ ಸದಸ್ಯೆ ಮೀನಾಕ್ಷಿ ಕಾಂತರಾಜ್,ಪಿಸಿಎಆರ್.ಡಿ ಬ್ಯಾಂಕ್ ನಿರ್ದೇಶಕ ದೇವಂತರಾಜ್, ಸ್ಪೂರ್ತಿ ಸ್ವಸಹಾಯ ಸಂಘದ ಸದಸ್ಯರು, ಒಕ್ಕೂಟದ ಸಂಪನ್ಮೂಲ ವ್ಯಕ್ತಿಗಳು ಇದ್ದರು.