ಕನ್ನಡಪ್ರಭ ವಾರ್ತೆ ಶಿವಮೊಗ್ಗ ಎದೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸತತ 12 ಗಂಟೆಗಳ ದೀರ್ಘ ಕಾಲದ ಶಸ್ತ್ರ ಚಿಕಿತ್ಸೆ ಮೂಲಕ ಅಪರೂಪದ ಮತ್ತು ಕಷ್ಟಕರವಾದ ಹೃದಯ ರಕ್ತನಾಳ ಛಿದ್ರಗೊಳ್ಳುವಿಕೆಯ ತೊಂದರೆ ಗುಣಪಡಿಸುವಲ್ಲಿ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ ಎಂದು ಡಾ. ಬಾಲಸುಬ್ರಮಣಿ ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 55 ವಯಸ್ಸಿನ ಶಿರಸಿಯ ಮಹಿಳೆಯೊಬ್ಬರು ಎದೆನೋವಿನಿಂದಾಗಿ ಆಸ್ಪತ್ರೆಗೆ ಬಂದಿದ್ದರು. ಅವರನ್ನು ತಪಾಸಣೆ ಮಾಡಿದಾಗ, ಹೃದಯದಲ್ಲಿ ಅತ್ಯಂತ ಅಪಾಯಕಾರಿ ತೊಂದರೆ ಕಂಡುಬಂದಿತ್ತು. ಹೃದಯದ ರಕ್ತನಾಳ ಛಿದ್ರಗೊಂಡಿತ್ತು. ಹೀಗೆ ಹೃದಯ ಹರಿದ ತೊಂದರೆಗಳು ತುಂಬಾ ವಿರಳ. ಈ ಸಮಸ್ಯೆ ಇರುವ ರೋಗಿ 30 ನಿಮಿಷ ಬದುಕಲೂ ಕಷ್ಟವಾಗುತ್ತದೆ. ಆದರೆ, ಸಕಾಲಕ್ಕೆ ಆಸ್ಪತ್ರೆಗೆ ಬಂದಿದ್ದ ಅವರಿಗೆ ಹೈ ರಿಸ್ಕ್ ಶಸ್ತ್ರಚಿಕಿತ್ಸೆಗೆ ನಮ್ಮ ಆಸ್ಪತ್ರೆ ತಂಡ ಸಿದ್ಧವಾಯಿತು. ರೋಗಿಗಳ ಪೋಷಕರಿಗೆ ಸಮಸ್ಯೆ ತಿಳಿಸಿ, ವಿವಿಧ ಪರೀಕ್ಷೆ ನಡೆಸಲಾಯಿತು. ಕೊನೆಗೆ ಆಸ್ಪತ್ರೆ ವೈದ್ಯರೆಲ್ಲಾ ಸೇರಿ ಸತತ 12 ಗಂಟೆಗಳ ದೀರ್ಘ ಕಾಲದ ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ತಿಳಿಸಿದರು. ನಾಲ್ಕು ದಿನವೂ ಕೃತಕ ಉಸಿರಾಟ ನೀಡಲಾಗಿತ್ತು. ಇದು ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯರ ಸಾಹಸದ ಮತ್ತು ಯಶಸ್ವಿ ಚಿಕಿತ್ಸೆಯಾಗಿದೆ. ಇಂತಹ ಅಪರೂಪದ 8 ಕೇಸುಗಳು ಇದುವರೆಗೆ ನಮ್ಮಲ್ಲಿ ಬಂದಿದ್ದು, ಮೂವರನ್ನು ಉಳಿಸಲಾಗಲಿಲ್ಲ. ಇನ್ನು 5 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ರೋಗಿ ಚೇತರಿಕೆ ಕಂಡಿದ್ದು, ಅವರನ್ನು ಡಿಸಾರ್ಜ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆಯ ಪತಿ ಗಜಾನನ ವಾಲೇಕರ್ ಮಾತನಾಡಿ, ನನ್ನ ಪತ್ನಿಗೆ ನಾರಾಯಣ ಆಸ್ಪತ್ರೆಯ ವೈದ್ಯರು ಪುನರ್ಜನ್ಮ ನೀಡಿದ್ದಾರೆ. ಹಣ ನಮಗೆ ಮುಖ್ಯವಾಗಿರಲಿಲ್ಲ. ಆಸ್ಪತ್ರೆಯ ಇಡೀ ವೈದ್ಯರ ತಂಡ ಸಂಪೂರ್ಣ ಸಹಕಾರ ನೀಡಿದ್ದಾರೆ. ಆಪರೇಷನ್ ಆಗುವ ವರೆಗೂ ನಮಗೆ ನಂಬಿಕೆ ಇರಲಿಲ್ಲ. ವೈದ್ಯರ ಶ್ರಮ ವ್ಯರ್ಥವಾಗಲಿಲ್ಲ. ದೇವರ ದಯದಿಂದ ನನ್ನ ಪತ್ನಿ ಈಗ ಆರೋಗ್ಯವಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಡಾ. ಶ್ರೀವತ್ಸ ನಾಡಿಗ್, ಡಾ. ಚಕ್ರವರ್ತಿ, ಡಾ. ಸಂದೀಪ್, ಶಸ್ತ್ರ ಚಿಕಿತ್ಸೆಗೆ ಒಳಗಾದ ಪ್ರಿಯಾ ಜಿ. ವಾಲೇಕರ್ ಇದ್ದರು. - - - -20ಎಸ್‌ಎಂಜಿಕೆಪಿ06: ಶಿವಮೊಗ್ಗದ ಶಿವಮೂರ್ತಿ ವೃತ್ತದ ಬಳಿ ಇರುವ ಸಹ್ಯಾದ್ರಿ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಡಾ. ಬಾಲಸುಬ್ರಮಣಿ ಮಾತನಾಡಿದರು.