ಗದಗ: ಗದಗ ಜಿಲ್ಲಾ ಆಸ್ಪತ್ರೆ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕ್ಯಾಥ್‌ಲ್ಯಾಬ್‌ನಲ್ಲಿ ಮೊಟ್ಟ ಮೊದಲ ಬಾರಿಗೆ ಟಿಎವಿಐ (ಟ್ರಾನ್ಸ್‌ಕ್ಯಾಥೆಟರ್ ಐಯೋಟಿಕ್ ವಾಲ್ವ್ ಇಂಪ್ಲಾಂಟೇಶನ್) ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ₹20- ₹25 ಲಕ್ಷ ವೆಚ್ಚ ತಗುಲಬಹುದಾದ ಟ್ರಾನ್ಸ್‌ಕ್ಯಾಥೆಟರ್ ಐಯೋಟಿಕ್ ವಾಲ್ವ್ ಇಂಪ್ಲಾಂಟೇಶನ್ ಹೃದಯ ಶಸ್ತ್ರಚಿಕಿತ್ಸೆಯನ್ನು ಜಿಲ್ಲೆಯ ನರಗುಂದ ತಾಲೂಕಿನ 55 ವರ್ಷದ ಹೃದ್ರೋಗಿಗೆ ಎಸ್ಸಿ- ಎಸ್ಟಿ ಅನುದಾನ ಬಳಸಿ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ.
ಹೃದ್ರೋಗ ತಜ್ಞ ಡಾ. ಸಂಜೀವಕುಮಾರ ಚಿಂತಾಮನಿ, ಡಾ. ಮಂಜುನಾಥ ಹಿರೇಮಠ ಸಹಕಾರದಲ್ಲಿ ಬೆಂಗಳೂರಿನ ಟಿಎವಿಐ ತಜ್ಞ ವೈದ್ಯ ಡಾ. ವಿಕ್ರಮ ಪಾಟೀಲ ನೇತೃತ್ವದ ವೈದ್ಯಕೀಯ ತಂಡ 55 ವರ್ಷದ ವ್ಯಕ್ತಿಗೆ ಸಂಕೀರ್ಣವಾದ ಹೈಬ್ರಿಡ್ ವಿಧಾನದ ಮೂಲಕ ಯಶಸ್ವಿ ಹೃದಯ ಮಹಾಪಧಮನಿಯ ಕವಾಟ ಬದಲಾವಣೆ ಮಾಡಿದ್ದಾರೆ.ಗದುಗಿನಲ್ಲಿ ಮೊದಲು: ಬೆಂಗಳೂರಿನ ಜಯದೇವ ಆಸ್ಪತ್ರೆ ಹೊರತುಪಡಿಸಿ ರಾಜ್ಯದಲ್ಲೇ ಸರ್ಕಾರಿ ಆಸ್ಪತ್ರೆ ಹಾಗೂ ಇತರೆ ಜಿಲ್ಲೆಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಕ್ಯಾಥ್ ಲ್ಯಾಬ್‌ವೊಂದರಲ್ಲಿ ನಡೆಸಿದ ಮೊದಲ ಯಶಸ್ವಿ ಶಸ್ತ್ರಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಈ ಚಿಕಿತ್ಸೆ ಪಾತ್ರವಾಗಿದೆ. ಇದು ತೆರೆದ ಹೃದಯ ಶಸ್ತ್ರಚಿಕಿತ್ಸೆ ಇಲ್ಲದೆ, ತೊಡೆಯ ಮೂಲಕ ಕ್ಯಾತಿಟರ್ ಬಳಸಿ ಹೃದಯದ ಕವಾಟ ಬದಲಾಯಿಸುವ ಅತ್ಯಾಧುನಿಕ ಮತ್ತು ಕನಿಷ್ಠ ಅಪಾಯದ ಚಿಕಿತ್ಸಾ ವಿಧಾನವಾಗಿದೆ.
ಮೊದಲ ಬಾರಿಗೆ ಪ್ರಯತ್ನ: ಗದಗ ಸುತ್ತಮುತ್ತಲಿನ ಜಿಲ್ಲೆ ಸೇರಿ ಇತರೆ ಜಿಲ್ಲೆಗಳ ಯಾವ ಸರ್ಕಾರಿ ಆಸ್ಪತ್ರೆಗಳಲ್ಲೂ ಈವರೆಗೂ ಟಿಎವಿಐ ಹೃದಯ ಶಸ್ತ್ರಚಿಕಿತ್ಸೆ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಯತ್ನ ನಡೆದಿದ್ದು, ಯಶಸ್ಸು ಸಿಕ್ಕಿದೆ. ಕ್ಯಾಥಲ್ಯಾಬ್ ಆರಂಭಿಸಿದ ವರ್ಷದಲ್ಲೇ ವೈದ್ಯರು ಈ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ ಎಂದು ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕ ಡಾ. ಬಸವರಾಜ ಬೊಮ್ಮನಹಳ್ಳಿ ತಿಳಿಸಿದರು.