ಶಿವಮೊಗ್ಗ: ಸುಧಾರಿತ ವಿಧಾನ ಬಳಸಿ ಅಪರೂಪದ ಮೆದುಳಿನ ಶಸ್ತ್ರಚಿಕಿತ್ಸೆಯನ್ನು ನಮ್ಮ ನಂಜಪ್ಪ ಲೈಫ್‌ಕೇರ್ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ವೈದ್ಯೆ ಡಾ.ನಿಶಿತ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಮೊದಲ ಬಾರಿಗೆ ನಂಜಪ್ಪ ಆಸ್ಪತ್ರೆಯಲ್ಲಿ ಮಾಡಿರುವ ಅಪರೂಪದ ಶಸ್ತ್ರಚಿಕಿತ್ಸೆಯಾಗಿದೆ ಎಂದರು.ತಲೆನೋವಿನಿಂದ ನರಳುತ್ತಿದ್ದ 21 ವರ್ಷದ ಯುವತಿ ಆಕೆಯ ಮೆದುಳನ್ನು ಎಂಆರ್‌ಐ ಸ್ಕ್ಯಾನ್ ಮಾಡಿದಾಗ ಮೆದುಳಿನ ಎಡಭಾಗದ ರಕ್ತನಾಳದಲ್ಲಿ ಊತ ಕಂಡು ಬಂದಿತು. ಇದಕ್ಕೆ ವೈದ್ಯಕೀಯ ಭಾಷೆಯಲ್ಲಿ ‘ಡಿಸ್ಸೆಕ್ಟಿಂಗ್ ಅನ್ಯೂರಿಸಮ್’ ಎಂದು ಕರೆಯುತ್ತಾರೆ. ಇದು ಅಪಾಯಕಾರಿಯಾಗಿದ್ದು, ಮೆದುಳನ್ನು ಓಪನ್ ಸರ್ಜರಿ ಮಾಡುವ ಬದಲಿಗೆ ಈಗಿನ ಸುಧಾರಿತ ವಿಧಾನದಲ್ಲಿ ಈ ಸರ್ಜರಿ ಮಾಡುವ ಸವಾಲು ತೆಗೆದುಕೊಂಡೆವು. ಈ ಮೆದುಳಿನ ಚಿಕಿತ್ಸೆಯನ್ನು ಫ್ಲೋ ಡೈವರ್ಟರ್ ಬಳಸಿ ಪ್ರಮುಖ ರಕ್ತನಾಳ ಪುನರ್ ನಿರ್ಮಾಣ ಮಾಡಬೇಕಾಯಿತು. ಅರವಳಿಕೆ ತಜ್ಞರ ಸಹಕಾರದಿಂದ ನಮ್ಮ ತಂಡ ಮೆದುಳಿನ ಪ್ರಮುಖ ರಕ್ತನಾಳ ತಲುಪಲು ತೊಡೆಯಲ್ಲಿ ಸಣ್ಣ ಸೂಜಿಗಾತ್ರದ ತೆಳುವಾದ ಟ್ಯೂಬ್ ಬಳಸಿ, ಅದನ್ನು ಮೆದುಳಿಗೆ ತಲುಪಿಸಿ ಅಲ್ಲಿ ಊತವಿರುವ ರಕ್ತನಾಳಕ್ಕೆ ರಕ್ತ ಸಂಚಾರ ನಿಲ್ಲಿಸಲಾಯಿತು ಎಂದು ವಿವರಿಸಿದರು. ಈಗ ಆ ರೋಗಿ ಆರೋಗ್ಯವಾಗಿದ್ದಾರೆ. ಈ ವಿಧಾನ ಕ್ಲಿಷ್ಟಕರ ಊತಗಳ ಚಿಕಿತ್ಸೆಗೆ ತುಂಬಾ ಸಹಾಯಕ ಮತ್ತು ದೀರ್ಘ ಕಾಲಿನ ರಕ್ಷಣೆಯಾಗಿದೆ. ಒಮ್ಮೆ ಚಿಕಿತ್ಸೆ ಯಶಸ್ವಿಯಾದರೆ ಮತ್ತೆ ಊತ ಇರುವುದಿಲ್ಲ. ರೋಗಿ ಆಪರೇಷನ್ ಆದ ಮರು ದಿನವೇ ಬಿಡುಗಡೆಯಾಗಬಹುದು. ಇದು ಅತ್ಯುತ್ತಮ ವಿಧಾನ ಎಂದು ತಿಳಿಸಿದರು.
ಸಾಮಾನ್ಯವಾಗಿ ಈ ರೀತಿ ಶಸ್ತ್ರಚಿಕಿತ್ಸೆಗೆ ಏಳೆಂಟು ಲಕ್ಷ ಖರ್ಚಾಗುತ್ತದೆ. ಬೆಂಗಳೂರು, ಬೆಳಗಾವಿಯಂತಹ ನಗರದಲ್ಲಿ ಮಾತ್ರ ಈ ಸೌಲಭ್ಯವಿತ್ತು. ಮಲೆನಾಡು ಭಾಗದಲ್ಲಿ ಇರಲಿಲ್ಲ. ನಾವು ಇದನ್ನು ಮಾಡಿದ್ದೇವೆ. ಇಂತಹ ಕಾಯಿಲೆಗೂ ಸರ್ಕಾರ ದಿಂದ ಸಹಾಯಧನ ಬೇಕಾಗುತ್ತದೆ. ಎಲ್ಲಾ ರೀತಿ ಆರೋಗ್ಯವಿಮೆಯ ಪಟ್ಟಿಗೆ ಈ ಕಾಯಿಲೆಯನ್ನು ಸೇರಿಸಬೇಕು ಎಂಬುದು ನಮ್ಮ ಆಗ್ರಹ. ಹಾಗಾದಾಗ ಬಿಪಿಎಲ್ ಕಾರ್ಡ್ ಸೇರಿದಂತೆ ಎಲ್ಲಾ ರೀತಿ ಆರೋಗ್ಯ ಸೌಲಭ್ಯದ ಸಹಾಯ ಪಡೆಯಲು ಅನುಕೂಲವಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪಿಆರ್‌ಒ ತ್ರಿವೇಣಿಶೆಟ್ಟಿ ಇದ್ದರು.
ಗಂಭೀರ ಸಮಸ್ಯೆ ತಂದೊಡ್ಡುವ ಊತ
ಗಂಭೀರ ಸಮಸ್ಯೆ ಉಂಟುಮಾಡುವ ವೈದ್ಯಕೀಯ ಭಾಷೆಯಲ್ಲಿ ಡಿಸ್ಸೆಕ್ವಿಂಗ್ ಅನ್ಯೂರಿಸಮ್ ಎಂದು ಕರೆಯಲ್ಪಡುವ ಈ ಊತ ಯುವತಿ ಮೆದುಳಿನಲ್ಲಿ 9 ಮಿ. ಮೀ.ಗಾತ್ರದಲ್ಲಿತ್ತು. ಇದು ಹೊಡೆದು ಹೋಗಿದ್ದರೆ ಮೆದುಳಿನಲ್ಲಿ ತೀವ್ರ ರಕ್ತ ಸ್ರಾವ ಉಂಟಾಗಿ ಸಾವು ಅಥವಾ ಜೀವತಾವಧಿ ಅಂಗವೈಕಲ್ಯಕ್ಕೆ ಕಾರಣವಾಗುತ್ತಿತ್ತು ಎಂದು ಅರವಳಿಕೆ ತಜ್ಞ ಡಾ.ಪ್ರವೀಣ್ ಕುಮಾರ್ ವಿವರಿಸಿದರು.ಈ ಸಮಸ್ಯೆಗೆ ತಕ್ಷಣದ ಚಿಕಿತ್ಸೆ ಅಗತ್ಯವಿತ್ತು. ಆದರೆ, ಯುವತಿ ಮೆದುಳಿನ ರಕ್ತನಾಳದಲ್ಲಿದ್ದ ಊತದ ಆಕಾರ ಮತ್ತು ಸ್ಥಳ ದಿಂದಾಗಿ ತೆರೆದ ಮೆದುಳಿನ ಶಸ್ತ್ರಚಿಕಿತ್ಸೆ ಸರಿಯಾದ ಆಯ್ಕೆಯಲ್ಲ ಎಂದು ತೀರ್ಮಾನಿಸಿ, ಪ್ಲೋ ಡೈವರ್ಟರ್ ಬಳಸಿ ಪ್ರಮುಖ ರಕ್ತನಾಳ ಪುನರ್‌ನಿರ್ಮಾಣ ಎಂಬ ವಿಶೇಷ, ಸುಧಾರಿತ ವಿಧಾನದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು. ಸುಸಜ್ಜಿತ, ಉನ್ನತ ಮತ್ತು ಆಧುನಿಕ ತಂತ್ರಜ್ಞಾನ ಒಳಗೊಂಡ ಅನುಭವಿ ನ್ಯೂರೋ ಸರ್ಜನ್‌ಗಳಿರುವ ಆಸ್ಪತ್ರೆಗಳಲ್ಲಿ ಮಾತ್ರ ಮಾಡಲಾಗುತ್ತದೆ ಎಂದು ಹೇಳಿದರು.