ಕನ್ನಡಪ್ರಭ ವಾರ್ತೆ ಚಾಮರಾಜನಗರ ೨೦೨೪ರ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಅಧಿಕಾರದಲ್ಲಿರುವಾಗ ಜನರ ಕೆಂಗಣ್ಣಿಗೆ ಗುರಿಯಾಗುವ ಬಂಡವಾಳಶಾಹಿ ಪಕ್ಷಗಳು ಹೊಸ ಮುಖಗಳೊಂದಿಗೆ, ಹೊಸ ಗ್ಯಾರಂಟಿಗಳೊಂದಿಗೆ ಮತ್ತೆ ಜನರ ಬಳಿಗೆ ಬರುತ್ತಿವೆ. ಇನ್ನೊಂದೆಡೆ, ದುಡಿಯುವ ಜನರ, ರೈತ, ಕಾರ್ಮಿಕರ ಸಮಸ್ಯೆಗಳ ಪರಿಹಾರಕ್ಕೆ ದಿನನಿತ್ಯ ಹೋರಾಟ ಕಟ್ಟುತ್ತಿರುವ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಇವರ ವಿರುದ್ಧ ಪರ್ಯಾಯವಾಗಿ ಈ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸುತ್ತಿದೆ ಎಂದು ರಾಜ್ಯ ಸಮಿತಿ ಸದಸ್ಯ ಬಿ. ರವಿ ಹೇಳಿದರು.
ಕಳೆದ ೧೦ ವರ್ಷಗಳಿಂದ ದೇಶವನ್ನು ಆಳುತ್ತಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ. ೨೦೧೪ರಲ್ಲಿ ಬಿಜೆಪಿ ದನಿ ಎತ್ತಿದ ಬೆಲೆಏರಿಕೆ, ನಿರುದ್ಯೋಗ, ಭ್ರಷ್ಟಾಚಾರದಂತಹ ಸಮಸ್ಯೆಗಳ ಕುರಿತು ಈಗ ಮೌನವಾಗಿದೆ.
ಅಬ್ಬರದ ಪ್ರಚಾರ ಮಾಡಿದ ’ಗುಜರಾತ್ ಮಾದರಿ’ ಅದೃಶ್ಯವಾಗಿದೆ. ಕಪ್ಪುಹಣ, ಸ್ವಿಸ್ ಬ್ಯಾಂಕ್ ಖಾತೆಗಳ ಬಗ್ಗೆ ಇರಲಿ, ಎಸ್‌ಬಿಐಯಲ್ಲಿರುವ ಚುನಾವಣಾ ಬಾಂಡ್ ಕುರಿತು ಮಾಹಿತಿ ನೀಡದಂತೆ ತಡೆಯಲು ಸರ್ವ ಪ್ರಯತ್ನ ಮಾಡಿದೆ. ಎಂದು ಅರೋಪಿಸಿದರು.ಜಾಗತಿಕ ಹಸಿವಿನ ಸೂಚ್ಯಂಕ, ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ಭಾರತದ ಸ್ಥಾನ ಪಾತಾಳದಲ್ಲಿದೆ. ಆದರೆ ಮೋದಿ ಅವರು ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಇಷ್ಟು ವರ್ಷ ಆಳ್ವಿಕೆ ನಡೆಸಿ ದೇಶವನ್ನು ಹಾಳುಗೆಡವಿದ ಕಾರಣ ದೇಶವನ್ನು ಅಭಿವೃದ್ಧಿಯ ಪಥಕ್ಕೆ ತರಲು ಇನ್ನೂ ಒಂದು ಅವಕಾಶ ಕೊಡಿ ಎಂದು ಕೇಳುತ್ತಾರೆ. ಹಿಂದೆ ಕಾಂಗ್ರೆಸ್ ಆಳ್ವಿಕೆಯಲ್ಲಿ ಅವರು ಇದೇ ರೀತಿ ಬ್ರಿಟಿಷರ ಮೇಲೆ ಗೂಬೆ ಕೂರಿಸುತ್ತಿದ್ದರು. ಮೋದಿಯವರ ಆಳ್ವಿಕೆಯಲ್ಲಿ ಅಂಬಾನಿ, ಅದಾನಿಗಳು ವಿಕಸಿತಗೊಂಡು ಜಗತ್ತಿನ ಅತಿ ಶ್ರೀಮಂತ ಬಂಡವಾಳಶಾಹಿಗಳಾಗಿದ್ದಾರೆ ಎಂದರು,
ಈ ಚುನಾವಣೆ ಬಂಡವಾಳಶಾಹಿ ಮತ್ತು ಕಾರ್ಮಿಕರ ನಡುವಿನ, ಶೋಷಕರು ಮತ್ತು ಶೋಷಿತರ ನಡುವಿನ ಸಮರವಾಗಿದೆ. ಭಾರತದ ಶೋಷಿತ ದುಡಿಯುವ ವರ್ಗದ, ಬಡ ರೈತರ ಪರ್ಯಾಯವಾಗಿ ದೇಶದ ಎಡಪಕ್ಷಗಳು ಒಂದು ಒಕ್ಕೂಟದ ಮೂಲಕ ಜನ ಹೋರಾಟಗಳನ್ನು ಕಟ್ಟಬೇಕಾಗಿತ್ತು. ಚುನಾವಣೆಗಳು ಪರಿಹಾರವಲ್ಲ, ಸಮಾಜವಾದವೇ ನೈಜ ಪರಿಹಾರ ಎಂಬ ಪ್ರಚಾರವನ್ನು ಕೈಗೆತ್ತಿಕೊಳ್ಳಬೇಕಿತ್ತು. ಆದರೆ ದುರಂತವೆಂದರೆ ಸಿಪಿಐ, ಸಿಪಿಐಎಂ ನಂತಹ ಎಡವಾದಿ ಪಕ್ಷಗಳು ಕೆಲವು ಎಂಪಿ ಸೀಟುಗಳ ಆಸೆಗೆ ಇಂಡಿಯಾ ಮೈತ್ರಿಕೂಟವನ್ನು ಸೇರಿವೆ. ಇಂತಹ ಪರಿಸ್ಥಿತಿಯಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷವು ಶೋಷಿತ ಜನರ ನೈಜ ಹೋರಾಟದ ಪರ್ಯಾಯವಾಗಿ ತನ್ನ ಶಕ್ತಿಮೀರಿ ಈ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದೆ ಎಂದರು.