ನಿಷೇಧಿತ ಪಿಓಪಿ ಗಣಪತಿ ವಿಗ್ರಹಗಳ ದಾಸ್ತಾನಿನ ಮೇಲೆ ದಿಢೀರ್‌ ದಾಳಿ

KannadaprabhaNewsNetwork |  
Published : Jun 23, 2025, 11:49 PM IST
ವಶಕ್ಕೆ ಪಡೆದ ನಿಷೇಧಿತ ಪಿಓಪಿ ಗಣಪತಿ ವಿಗ್ರಹಗಳನ್ನು ಜಿಲ್ಲಾಧಿಕಾರಿ ದಿವ್ಯ ಪ್ರಭು ಪರಿಶೀಲಿಸಿದರು. | Kannada Prabha

ಸಾರಾಂಶ

ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಪಿಓಪಿ ಗಣಪತಿ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಗಡಿ ಭಾಗದಲ್ಲಿ ಮತ್ತು ಮಹಾನಗರದ ಗಡಿಗಳಲ್ಲಿ ಚೆಕ್ ಪೊಸ್ಟ್ ತೆರೆಯಲಾಗುತ್ತಿದೆ. ಹಬ್ಬದ ಸಂದರ್ಭದಲ್ಲಿ ಇಂತಹ ಪಿಓಪಿ ವಿಗ್ರಹಗಳನ್ನು ಜಿಲ್ಲೆಯ ಪ್ರವೇಶಕ್ಕೆ ಹಾಗೂ ಮಾರಾಟಕ್ಕೆ ಅವಕಾಶವಾಗುವುದಿಲ್ಲ ಎಂದು ಭಾವಿಸಿ, ಈಗಲೇ ಗ್ರಾಮೀಣ ಭಾಗದಲ್ಲಿ ಮತ್ತು ನಗರದ ಕೆಲವು ಪ್ರದೇಶಗಳಲ್ಲಿ ಪಿಓಪಿ ವಿಗ್ರಹ ಸಂಗ್ರಹ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ.

ಧಾರವಾಡ: ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿರುವ ಪಿಓಪಿ ಪತ್ತೆ ಕಾರ್ಯಪಡೆಯಿಂದ ಗರಗ ಗ್ರಾಮದಲ್ಲಿ ಸೋಮವಾರ ಸಂಜೆ ದಿಢೀರ್ ದಾಳಿ ಮಾಡಿ, ಅಪಾರ ಪ್ರಮಾಣದ ಪಿಓಪಿ ಗಣಪತಿ ವಿಗ್ರಹಗಳನ್ನು ವಶಕ್ಕೆ ಪಡೆಯಲಾಗಿದೆ.

ನಿಷೇಧಿತ ಪಿಓಪಿ ಗಣೇಶ ವಿಗ್ರಹಗಳ ದಾಸ್ತಾನು ಹೊಂದಿದ್ದ ಮಾಲೀಕನ ವಿರುದ್ಧ ಪರಿಸರ ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಉಚ್ಚನ್ಯಾಯಲಯದ ಆದೇಶದ ಅನುಸಾರ ಕ್ರಿಮಿನಲ್ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ನಗರದ ಕಲಾಭವನ ಮೈದಾನದಲ್ಲಿ, ದಾಳಿಯಲ್ಲಿ ವಶಪಡಿಸಿಕೊಂಡ ಪಿಓಪಿ ಗಣಪತಿ ವಿಗ್ರಹಗಳನ್ನು ದಾಸ್ತಾನಿಕರಿಸುವ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಪಿಓಪಿ ಗಣಪತಿ ವಿಗ್ರಹಗಳು ಜಿಲ್ಲೆಗೆ ಬರದಂತೆ ತಡೆಯಲು ಪೊಲೀಸ್ ಇಲಾಖೆಯಿಂದ ಜಿಲ್ಲೆಯ ಗಡಿ ಭಾಗದಲ್ಲಿ ಮತ್ತು ಮಹಾನಗರದ ಗಡಿಗಳಲ್ಲಿ ಚೆಕ್ ಪೊಸ್ಟ್ ತೆರೆಯಲಾಗುತ್ತಿದೆ.

ಹಬ್ಬದ ಸಂದರ್ಭದಲ್ಲಿ ಇಂತಹ ಪಿಓಪಿ ವಿಗ್ರಹಗಳನ್ನು ಜಿಲ್ಲೆಯ ಪ್ರವೇಶಕ್ಕೆ ಹಾಗೂ ಮಾರಾಟಕ್ಕೆ ಅವಕಾಶವಾಗುವುದಿಲ್ಲ ಎಂದು ಭಾವಿಸಿ, ಈಗಲೇ ಗ್ರಾಮೀಣ ಭಾಗದಲ್ಲಿ ಮತ್ತು ನಗರದ ಕೆಲವು ಪ್ರದೇಶಗಳಲ್ಲಿ ಪಿಓಪಿ ವಿಗ್ರಹ ಸಂಗ್ರಹ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ ಎಂದರು.

184 ಪಿಓಪಿ ವಿಗ್ರಹ ವಶಕ್ಕೆ: ಸಾರ್ವಜನಿಕರು ಕರೆ ಮಾಡಿ ನನಗೆ ಮಾಹಿತಿ ನೀಡಿದ್ದರಿಂದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕಂದಾಯ, ಗ್ರಾಪಂ, ಪೊಲೀಸ್ ಇಲಾಖೆ ಅಧಿಕಾರಿಗಳ ತಂಡ ರಚಿಸಿ ಈ ಕಾರ್ಯಪಡೆ ಮೂಲಕ ದಿಢೀರ್ ದಾಳಿ ಮಾಡಲು ಸೂಚಿಸಲಾಗಿತ್ತು. ಗರಗ ಗ್ರಾಮದ ವಿನಾಯಕ ಕಾಳಪ್ಪ ಪತ್ತಾರ ಮಾಲೀಕತ್ವದಲ್ಲಿ 184 ಪಿಓಪಿ ಗಣಪತಿ ವಿಗ್ರಹಗಳನ್ನು ದಾಸ್ತಾನುಕರಿಸಿ, ಅವುಗಳಿಗೆ ರಾಸಾಯನಿಕ ಮಿಶ್ರಿತ ಬಣ್ಣ ಮಾಡುವ ಕಾರ್ಯ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ದಾಳಿ ಮಾಡಿದ ಕಾರ್ಯಪಡೆಯ ಸದಸ್ಯರು ಗರಗ ಗ್ರಾಮದ ಶಿವಾಜಿ ಬಡಾವಣೆಯಲ್ಲಿ 75 ವಿಗ್ರಹಗಳು ಮತ್ತು ಸಂಗೊಳ್ಳಿ ರಾಯಣ್ಣ ಬಡಾವಣೆಯಲ್ಲಿ 109 ವಿಗ್ರಹಗಳು ದೊರೆತಿದ್ದು, ವಶಕ್ಕೆ ಪಡೆಯಲಾಗಿದೆ ಎಂದರು.

ಆರೋಪಿ ವಿನಾಯಕ ಪತ್ತಾರ ಎಂಬುವವರು ಪಿಓಪಿ ವಿಗ್ರಹಗಳ ಸಗಟು ಮತ್ತು ಬಿಡಿ ಮಾರಾಟಗಾರರು ಆಗಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಎಲ್ಲ ಪಿಓಪಿ ವಿಗ್ರಹಗಳನ್ನು ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರದಿಂದ ತರಲಾಗಿತ್ತು ಎಂದು ಆರೋಪಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾನೆ. ಈ ಕುರಿತು ಸೂಕ್ತ ತನಿಖೆ ಮಾಡಿ, ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಈ ವೇಳೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಹಿರಿಯ ಅಧಿಕಾರಿ ಜಗದೀಶ ಐ.ಎಚ್, ಗರಗ ಪಿಡಿಒ ಶಶಿಧರ ಗಂಧದ, ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ಗಂಗಾಧರ ಮನಕಟ್ಟಿಮಠ, ಗರಗ ಪಿಎಸ್ ಐ ಸಿದ್ರಾಮ ಉನ್ನದ, ಗ್ರಾಮ ಆಡಳಿತ ಅಧಿಕಾರಿ ಮಹೇಶ ನಾಗವ್ವನವರ, ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿಗಳಾದ ಮುನಾಫ್ ಸೌದಾಗರ, ಶಶಿಧರ ಕೋಡಿಹಳ್ಳಿ, ವಿಠ್ಠಲ ದಂಡಿಗದಾಸರ ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!