ದಾವಣಗೆರೆ ನಗರದ ಆಜಾದ್ ನಗರದಲ್ಲಿನ ಮುದ್ದಾಬೋವಿ ಕಾಲನಿಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ದಾವಣಗೆರೆ : ನಗರದ ಆಜಾದ್ ನಗರದಲ್ಲಿನ ಮುದ್ದಾಬೋವಿ ಕಾಲನಿಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭ ಮೂಲಸೌಕರ್ಯಗಳ ಕೊರತೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯ ಸಿಬ್ಬಂದಿ ಹಾಗೂ ಅಂಗನವಾಡಿ ಮೇಲ್ವಿಚಾರಕರೊಂದಿಗೆ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಅಂಗನವಾಡಿ ಕೇಂದ್ರಗಳ ಕಟ್ಟಡದಲ್ಲಿ ಸರಿಯಾದ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರಲಿಲ್ಲ. ಇಲ್ಲಿ ಶೌಚಾಲಯ ಕೂಡ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿಗೆ ಬರುವ ಮಕ್ಕಳ ದೈನಂದಿನ ಹಾಜರಿಯನ್ನು ಭರ್ತಿ ಮಾಡಿರಲಿಲ್ಲ. ವೆಂಕಭೋವಿ ಕಾಲನಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕಳೆದೊಂದು ವಾರದಿಂದ ಹಾಜರಾತಿ ಪುಸ್ತಕದಲ್ಲಿ ನಮೂದು ಸಹ ಮಾಡಿಲ್ಲ. ಇಲಾಖೆಯಿಂದ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ಪೂರೈಸಿದ್ದರೂ ಅವುಗಳನ್ನು ಗಂಟುಮೂಟೆ ಕಟ್ಟಿ ಮಕ್ಕಳ ಕೈಗೆ ಸಿಗದ ಹಾಗೆ ಇರಿಸಲಾಗಿತ್ತು. ಊಟವನ್ನು ಪರಿಶೀಲಿಸಿ ನೋಡಿದಾಗ ಇಲಾಖೆ ನಿರ್ದೇಶನದಂತೆ ರುಚಿಕಟ್ಟಾದ, ಗುಣಮಟ್ಟದ ಊಟವನ್ನು ತಯಾರಿಸಿರಲಿಲ್ಲ. ಅನ್ನ ಮತ್ತು ಉಪ್ಪಿಟ್ಟಿನಲ್ಲಿ ಪೋಷಕಾಂಶಗಳ ಕೊರತೆ ಕಂಡುಬಂದಿತು.
ಈ ಎಲ್ಲ ಅವ್ಯವಸ್ಥೆಗಳ ಕಂಡ ನ್ಯಾಯಾಧೀಶರು ಅಂಗನವಾಡಿ ಕಾರ್ಯಕರ್ತೆಯರಿಗೆ, ಅಂಗನವಾಡಿ ಸಹಾಯಕರಿಗೆ ಮತ್ತು ಅಂಗನವಾಡಿ ಮೇಲ್ವಿಚಾರಕರಿಗೆ ಸರ್ಕಾರದ ಆಶಯ ಮತ್ತು ಉದ್ದೇಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅಂಗನವಾಡಿ ಕೇಂದ್ರಗಳಲ್ಲಿನ ಕೊರತೆಗಳ ಬಗ್ಗೆ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.