ಮಾವು ಬೆಳೆಗಾರರ ಸಂಕಷ್ಟಕ್ಕೆ ಧ್ವನಿಯಾದ ಸುಧಾಕರ್‌

KannadaprabhaNewsNetwork |  
Published : Jun 19, 2026, 01:15 AM IST
   ಸಿಕೆಬಿ-1 ಸಂಸದ ಡಾ.ಕೆ.ಸುಧಾಕರ್‌ | Kannada Prabha

ಸಾರಾಂಶ

ರಾಜ್ಯದಲ್ಲಿ ಮಾವಿನ ಬೆಲೆ ಕುಸಿದು ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರೈತರ ಕೈ ಹಿಡಿಯಬೇಕೆಂದು ಅವರು ಕೋರಿದ್ದಾರೆ.

ಪರಿಹಾರ ಕ್ರಮ ಕೈಗೊಳ್ಳುವಂತೆ ಕೇಂದ್ರ ಕೃಷಿ ಸಚಿವರಿಗೆ ಮನವಿ । ಸಮರ್ಪಕ ಖರೀದಿ ವ್ಯವಸ್ಥೆ ಮಾಡಲು ಡಾ.ಕೆ. ಸುಧಾಕರ್ ಆಗ್ರಹ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮಾವು ಬೆಳೆಗಾರರು ಎದುರಿಸುತ್ತಿರುವ ಬೆಲೆ ಕುಸಿತದ ಸಮಸ್ಯೆಗೆ ಧ್ವನಿಯಾಗಿರುವ ಸಂಸದ ಡಾ.ಕೆ.ಸುಧಾಕರ್‌, ಕೇಂದ್ರ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಸಮಸ್ಯೆ ಬಗೆಹರಿಸಬೇಕೆಂದು ಕೋರಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಮಾವಿನ ಬೆಲೆ ಕುಸಿದು ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರೈತರ ಕೈ ಹಿಡಿಯಬೇಕೆಂದು ಅವರು ಕೋರಿದ್ದಾರೆ. ಈ ವರ್ಷ ಸಮೃದ್ಧವಾಗಿ ಮಾವಿನ ಇಳುವರಿ ಬಂದಿದ್ದರೂ, ರಾಜ್ಯದಲ್ಲಿ ಸಮರ್ಪಕ ಖರೀದಿ ವ್ಯವಸ್ಥೆ, ಸಂಸ್ಕರಣಾ ಸೌಲಭ್ಯ ಮತ್ತು ಮಾರುಕಟ್ಟೆ ಬೆಂಬಲದ ಕೊರತೆಯಿಂದಾಗಿ ಮಾವಿನ ಬೆಲೆ ಕೆ.ಜಿ.ಗೆ 4 ರೂ., 6 ರು.ಗೆ ಕುಸಿದಿದೆ. ಹಗಲಿರುಳು ಬೆವರು ಸುರಿಸಿದ ಸಾವಿರಾರು ರೈತರು ತಾವು ಹೂಡಿದ ಕನಿಷ್ಠ ಬಂಡವಾಳ, ಕೊಯ್ಲು ಮತ್ತು ಸಾರಿಗೆ ವೆಚ್ಚವನ್ನೂ ಮರಳಿ ಪಡೆಯಲಾಗದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತುರ್ತಾಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬೆಲೆಯನ್ನು ಸ್ಥಿರಗೊಳಿಸಲು ಮತ್ತು ರೈತರು ನಷ್ಟಕ್ಕೆ ಸಿಲುಕುವುದನ್ನು ತಪ್ಪಿಸಲು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (ಎನ್ಎಎಫ್ಇಡಿ) ಮತ್ತು ಇತರೆ ಸಂಸ್ಥೆಗಳ ಮೂಲಕ ತಕ್ಷಣ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಅತಿ ಹೆಚ್ಚು ಹಾನಿಗೊಳಗಾಗಿರುವ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಲ್ಲಿ ವಿಶೇಷ ಖರೀದಿ ವ್ಯವಸ್ಥೆ ಜಾರಿಗೊಳಿಸಬೇಕು. ಆಹಾರ ಸಂಸ್ಕರಣಾ ಘಟಕಗಳು ಮತ್ತು ರೈತ ಉತ್ಪಾದಕ ಸಂಸ್ಥೆಗಳ (ಇಪಿಓಎಸ್) ಮೂಲಕ ಹೆಚ್ಚುವರಿ ಮಾವನ್ನು ಮೌಲ್ಯವರ್ಧನೆಗೆ ಬಳಸಿಕೊಂಡು ಬೃಹತ್ ಪ್ರಮಾಣದ ಸಂಸ್ಕರಣೆಗೆ ಚಾಲನೆ ನೀಡಬೇಕು. ನೆರೆಯ ರಾಜ್ಯಗಳಿಗೆ ಹಾಗೂ ವಿದೇಶಗಳಿಗೆ ಮಾವು ಸಾಗಿಸಲು ಇರುವ ಸಾರಿಗೆ ಮತ್ತು ಇನ್ನಿತರ ಅಡಚಣೆಗಳನ್ನು ನಿವಾರಿಸಿ ಸೂಕ್ತ ಮಾರುಕಟ್ಟೆ ಸಂಪರ್ಕ ಕಲ್ಪಿಸಿ, ರಫ್ತು ಹಾಗೂ ಅಂತರರಾಜ್ಯ ಮಾರುಕಟ್ಟೆ ವಿಸ್ತರಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.ಮಾವು ಬೆಳೆಗಾರರು ಅಪಾರ ನಷ್ಟ ಹೊಂದಿದ್ದಾರೆ. ಆದ್ದರಿಂದ ಕೃಷಿ ಅಧಿಕಾರಿಗಳ ಮೂಲಕ ತಕ್ಷಣ ನಷ್ಟದ ಮೌಲ್ಯಮಾಪನ ಮಾಡಿ ಬಾಧಿತ ರೈತರಿಗೆ ಕೇಂದ್ರ ಯೋಜನೆಗಳಡಿ ಪರಿಹಾರ ಒದಗಿಸಬೇಕು. ಕೃಷಿ ಮತ್ತು ಆಹಾರ ಸಂಸ್ಕರಣಾ ಸಚಿವಾಲಯದ ಅಧಿಕಾರಿಗಳ ಜಂಟಿ ತಂಡವನ್ನು ತಕ್ಷಣವೇ ಕರ್ನಾಟಕಕ್ಕೆ ನಿಯೋಜಿಸಿ, ವಸ್ತುಸ್ಥಿತಿಯನ್ನು ಪರಿಶೀಲಿಸಿ ತಕ್ಷಣದ ಪರಿಹಾರ ಕ್ರಮಗಳನ್ನು ಶಿಫಾರಸು ಮಾಡಬೇಕು ಎಂದು ಅವರು ಕೋರಿದ್ದಾರೆ. ಕರ್ನಾಟಕದ ಮಾವು ಬೆಳೆಗಾರರಿಗೆ, ಅದರಲ್ಲೂ ವಿಶೇಷವಾಗಿ ಬಯಲುಸೀಮೆ ಭಾಗದ ರೈತರಿಗೆ, ಮಾವು ಕೇವಲ ಒಂದು ಬೆಳೆಯಲ್ಲ, ಅದು ಲಕ್ಷಾಂತರ ರೈತರು, ಕೃಷಿ ಕಾರ್ಮಿಕರು ಹಾಗೂ ಗ್ರಾಮೀಣ ಆರ್ಥಿಕತೆಯ ಜೀವನಾಡಿಯಾಗಿದೆ. ರೈತರು ತಮ್ಮ ಶ್ರಮದ ಫಲವನ್ನು ಕಣ್ಣೀರಿನ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಬರಬಾರದು. ಸಮಯೋಚಿತ ಹಸ್ತಕ್ಷೇಪದಿಂದ ಮಾತ್ರ ಈ ಸಂಕಷ್ಟವನ್ನು ತಡೆಯಲು ಸಾಧ್ಯವಾಗುತ್ತದೆ. ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಅಗತ್ಯ ನೆರವು ಒದಗಿಸಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ರೈತರ ಹಿತಾಸಕ್ತಿ ಮತ್ತು ಅವರ ಬದುಕಿನ ರಕ್ಷಣೆಗೆ ನಾನು ಸದಾ ಅವರೊಂದಿಗಿರುತ್ತೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸಿಕೆಬಿ-1 ಸಂಸದ ಡಾ.ಕೆ.ಸುಧಾಕರ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಾ.ವೀರೇಂದ್ರ ಹೆಗ್ಗಡೆಗೆ ಸಿದ್ಧಶ್ರೀ ಪ್ರಶಸ್ತಿ
ಮೊರಾರ್ಜಿ ವಸತಿ ಶಾಲೆಯ ಬಾಲಕಿ ಮೇಲೆ ನಿರಂತರ ಅತ್ಯಾಚಾರ: ದೂರು