ಅಡಕೆ ಲಾರಿಗೆ ತಡೆ: ವ್ಯವಹಾರ ಸ್ಥಗಿತ ಎಚ್ಚರಿಕೆ

KannadaprabhaNewsNetwork |  
Published : Jun 24, 2026, 03:45 AM IST
ಅಡಕೆ ವರ್ತಕರ ಸಭೆ  | Kannada Prabha

ಸಾರಾಂಶ

ದ.ಕ., ಉಡುಪಿ ಜಿಲ್ಲೆಗಳಿಂದ ಗುಜರಾತ್, ದೆಹಲಿ ಮತ್ತಿತರ ಕಡೆಗೆ ಅಡಕೆ ಸಾಗಾಟ ಮಾಡುತ್ತಿದ್ದ ಸುಮಾರು 40-50ರಷ್ಟು ಲಾರಿಗಳನ್ನು ಮಹಾರಾಷ್ಟ್ರ ರಾಜ್ಯದ ಆರೋಗ್ಯ ಇಲಾಖೆ ಆಯುಕ್ತರು ಗುಣಮಟ್ಟ ಪರೀಕ್ಷಿಸುವ ಉದ್ದೇಶದಿಂದ ತಡೆದು ನಿಲ್ಲಿಸಿರುವುದರಿಂದ ಅಡಕೆ ವರ್ತಕರು ಮತ್ತು ಸಾಗಾಟಗಾರರು ಆಕ್ರೋಶಗೊಂಡಿದ್ದಾರೆ.

ಸುಳ್ಯ: ದ.ಕ., ಉಡುಪಿ ಜಿಲ್ಲೆಗಳಿಂದ ಗುಜರಾತ್, ದೆಹಲಿ ಮತ್ತಿತರ ಕಡೆಗೆ ಅಡಕೆ ಸಾಗಾಟ ಮಾಡುತ್ತಿದ್ದ ಸುಮಾರು 40-50ರಷ್ಟು ಲಾರಿಗಳನ್ನು ಮಹಾರಾಷ್ಟ್ರ ರಾಜ್ಯದ ಆರೋಗ್ಯ ಇಲಾಖೆ ಆಯುಕ್ತರು ಗುಣಮಟ್ಟ ಪರೀಕ್ಷಿಸುವ ಉದ್ದೇಶದಿಂದ ತಡೆದು ನಿಲ್ಲಿಸಿರುವುದರಿಂದ ಅಡಕೆ ವರ್ತಕರು ಮತ್ತು ಸಾಗಾಟಗಾರರು ಆಕ್ರೋಶಗೊಂಡಿದ್ದಾರೆ. ಈ ಸಮಸ್ಯೆ ಬಗೆಹರಿಯುವವರೆಗೆ ಅಡಕೆ ಸಾಗಾಟ ಮಾಡದಿರಲು ಹಾಗೂ ಖರೀದಿಸದಿರಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅಡಕೆ ಕೃಷಿಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವ ಸಾಧ್ಯತೆ ಕಂಡುಬಂದಿದೆ.

ದ.ಕ. ಜಿಲ್ಲೆಯಿಂದ ಗುಜರಾತ್, ದೆಹಲಿ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಿಗೆ ಲಾರಿಗಳಲ್ಲಿ ಅಡಕೆ ಸಾಗಾಟ ನಡೆಯುತ್ತಿದ್ದು, ಈ ಲಾರಿಗಳು ಮಹಾರಾಷ್ಟ್ರ ಮೂಲಕ ಸಾಗಬೇಕಾಗಿದೆ. ಹೀಗೆ ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಅಲ್ಲಿನ ಆರೋಗ್ಯ ಇಲಾಖೆ ಆಯುಕ್ತರೊಬ್ಬರು ತಡೆದು ನಿಲ್ಲಿಸಿದ್ದಾರೆ.

ಲಾರಿಗಳಲ್ಲಿರುವ ಅಡಕೆ ಗುಣಮಟ್ಟ ಪರೀಕ್ಷೆ ನಡೆಸಬೇಕಾಗಿದ್ದು, ಪರೀಕ್ಷಾ ವರದಿ ಬಂದ ಬಳಿಕ ಅದರಲ್ಲಿ ಹಾನಿಕಾರಕ ಅಂಶಗಳಿಲ್ಲವೆಂದು ಕಂಡುಬಂದಲ್ಲಿ ಬಿಟ್ಟು ಕಳುಹಿಸಲಾಗುವುದು ಎಂದು ಅವರು ಹೇಳಿದ್ದಾರೆನ್ನಲಾಗಿದೆ.

ಅಡಕೆ ಕೃಷಿಕ ಹಾಗೂ ಕಾಂಗ್ರೆಸ್‌ ನಾಯಕ ಎಂ. ವೆಂಕಪ್ಪ ಗೌಡ ಹಾಗೂ ಅಡಕೆ ವರ್ತಕರ ಸಂಘದ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ ನೇತೃತ್ವದಲ್ಲಿ ಸುಳ್ಯ ಎಪಿಎಂಸಿಯಲ್ಲಿ ಸಭೆ ನಡೆದು ಕೃಷಿಕರಿಗೆ ಸಮಸ್ಯೆ ಆಗದಂತೆ ತಡೆಯಲು ಜನಪ್ರತಿನಿಧಿಗಳು ಮಹಾರಾಷ್ಟ್ರ ಸರಕಾರದೊಂದಿಗೆ ಮಾತುಕತೆ ನಡೆಸುವಂತೆ ಒತ್ತಾಯಿಸಲಾಯಿತು.

ವ್ಯವಹಾರ ಸ್ಥಗಿತ ಎಚ್ಚರಿಕೆ:

ಕರ್ನಾಟಕದಿಂದ ಇತರ ರಾಜ್ಯಗಳಿಗೆ ಸಾಗಿಸುತ್ತಿದ್ದ ಅಡಕೆಯನ್ನು ಮಹಾರಾಷ್ಟ್ರದಲ್ಲಿ ಅಲ್ಲಿನ ಆಹಾರ ಮತ್ತು ಔಷಧ ಆಡಳಿತ ಅಧಿಕಾರಿಗಳು ತಡೆಹಿಡಿದಿರುವ ಮತ್ತು ಜಪ್ತಿ ಮಾಡಿರುವ ಘಟನೆ ಸಂಬಂಧ ಸುಳ್ಯ ಅಡಕೆ ವ್ಯಾಪಾರಸ್ಥರು ಮತ್ತು ಕೃಷಿಕರ ಸಮಾಲೋಚನಾ ಸಭೆ ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಸುಳ್ಯ ತಾಲೂಕಿಗೊಳಪಟ್ಟ ಕೆಲವು ಅಡಕೆ ವ್ಯಾಪಾರಸ್ಥರು ಮತ್ತು ಕೃಷಿಕರು ಭಾಗವಹಿಸಿದ್ದರು.

ಸಭೆಯಲ್ಲಿ ಅಡಕೆ ವ್ಯಾಪಾರಸ್ಥರಾದ ಶಾಹುಲ್ ಹಮೀದ್ ಕುತ್ತಮೊಟ್ಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ಮಹಾರಾಷ್ಟ್ರ ಸರಕಾರವು ಸುಮಾರು 50ಕ್ಕೂ ಹೆಚ್ಚು ಅಡಿಕೆ ಸಾಗಾಣಿಕೆಯ ಲಾರಿಗಳನ್ನು ತಡೆ ಹಿಡಿದಿದ್ದು ಇದರಿಂದಾಗಿ ವ್ಯಾಪಾರಸ್ಥರಿಗೆ ತುಂಬಾ ನಷ್ಟ ಉಂಟಾಗಿದೆ. ಗುಜರಾತ್ ಮತ್ತು ದೆಹಲಿ ಮುಂತಾದ ಕಡೆಗಳಿಗೆ ಕಳಿಸಿರುವ ಅಡಕೆ ಲಾರಿಗಳನ್ನು ತಡೆದು ವ್ಯಾಪಾರಸ್ಥರು ಮತ್ತು ಕೃಷಿಕರಿಗೆ ಅನ್ಯಾಯ ಮಾಡಲಾಗುತ್ತಿದೆ. ಕೂಡಲೇ ಇಂತಹ ಕ್ರಮಗಳನ್ನು ಮಹಾರಾಷ್ಟ್ರ ಸರಕಾರ ಕೈಬಿಡಬೇಕೆಂದು ಅವರು ಆಗ್ರಹಿಸಿದರು.

ಎಪಿಎಂಸಿ ಮಾಜಿ ನಿರ್ದೇಶಕ ಆದಂ ಕಮ್ಮಾಡಿ ಹಾಗೂ ಜಿಲ್ಲಾ ಅಡಕೆ ವ್ಯಾಪಾರಸ್ಥ ಸಂಘದ ಅಧ್ಯಕ್ಷ ಸಲೀಂ ಪೆರುಗೋಡಿ ಮಾತನಾಡಿ, ಈ ಬಗ್ಗೆ ಈಗಾಗಲೇ ಜಿಲ್ಲಾ ಸಮಿತಿಯಲ್ಲಿ ಸಭೆಗಳು ನಡೆದಿದ್ದು, ಮುಂದಿನ ದಿನಗಳಲ್ಲಿ ನಮ್ಮ ವ್ಯಾಪಾರ ವಹಿವಾಟನ್ನು ನಿಲ್ಲಿಸುವುದಾಗಿಯೂ ಕೂಡ ತೀರ್ಮಾನಗಳನ್ನು ಕೈಗೊಂಡಿದ್ದೇವೆ. ಆದ್ದರಿಂದ ಸಂಬಂಧಪಟ್ಟ ಇಲಾಖೆಯವರು ಕೂಡಲೇ ಎಚ್ಚೆತ್ತು ಈ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿದರು.ಎಂ. ವೆಂಕಪ್ಪ ಗೌಡ ಮಾತನಾಡಿ, ವ್ಯಾಪಾರಸ್ಥರು ಹಮ್ಮಿಕೊಳ್ಳುವ ಪ್ರತಿಭಟನೆಯಲ್ಲಿ ರೈತರುಗಳು ಕೂಡ ಬೆಂಬಲ ಸೂಚಿಸುವ ಅಗತ್ಯವಿದೆ ಎಂದು ಹೇಳಿದರು.

ತಾಲೂಕು ಕಿಸಾನ್ ಘಟಕದ ಅಧ್ಯಕ್ಷ ಸುರೇಶ್ ಅಮೈ, ಆಲೆಟ್ಟಿ ಗ್ರಾಪಂ ಸದಸ್ಯರಾದ ಸತ್ಯ ಕುಮಾರ್ ಅಡಿಂಜ, ವಿಜಯ್ ಕುಮಾರ್ ಅಲೆಟ್ಟಿ, ವ್ಯಾಪಾರಸ್ಥರಾದ ಸಿದ್ದೀಕ್ ಕೋಡಿಯಮ್ಮ, ಹಾಜಿ ಕೆಎಂಎಸ್ ಮಹಮ್ಮದ್, ಕೆಎಂ ಮೊಹಮ್ಮದ್ ಕುಂಞ, ಕಲೀಮ್ ಎಸ್‌ಎಂ, ಯು.ಎಚ್. ಅಬೂಬಕ್ಕರ್ ಮಂಗಳ, ಅಬ್ದುಲ್ ಖಾದರ್ ಹಾಜಿ, ಸಮೀರ್ ಕರಾವಳಿ, ಎಸ್‌ಪಿ ಅಬೂಬಕ್ಕರ್, ಅಶ್ರಫ್ ಎಸ್. ಕೆ. ಅಬ್ದುಲ್, ರೈತ ಸಂಘಟನೆ ಮುಖಂಡ ಮಂಜುನಾಥ್ ಮಡ್ತಿಲ, ಪಿ.ಎಂ. ಅಬ್ಬಾಸ್ ಉಪಸ್ಥಿತರಿದ್ದರು. ಪಿ.ಎಸ್. ಗಂಗಾಧರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ₹1.02 ಕೋಟಿ ಮೌಲ್ಯದ ಮದ್ಯ ಜಪ್ತಿ
ವಿಚಿತ್ರ ದೇಹ ರಚನೆಯ ಕರು ಜನನ