ಶೀಘ್ರವೇ ಸಕ್ಕರೆ ಕಾರ್ಖಾನೆಗಳು ಆರಂಭ: ಜಿಲ್ಲಾಧಿಕಾರಿ ಡಾ.ಕುಮಾರ

KannadaprabhaNewsNetwork |  
Published : Jul 08, 2026, 01:30 AM IST
೭ಕೆಎಂಎನ್‌ಡಿ-೧ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಪರಿಸ್ಥಿತಿ, ರೈತರ ಸಮಸ್ಯೆ ಮತ್ತು ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವ ಕುರಿತಂತೆ ಮಂಡ್ಯ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ್ದೇನೆ. ಸರ್ಕಾರದ ಹಂತದಲ್ಲಿ ಜಿಲ್ಲೆಯ ರೈತರ ಪರಿಸ್ಥಿತಿಯನ್ನು ಕಬ್ಬು ಅಭಿವೃದ್ಧಿ ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮುಂದಿನ ವಾರದಲ್ಲಿ ಕಾರ್ಖಾನೆಗಳ ಆರಂಭಕ್ಕೆ ಸರ್ಕಾರದಿಂದ ಅನುಮತಿ ದೊರೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯೂ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲಾ ಸಕ್ಕರೆ ಕಾರ್ಖಾನೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅವರು ರೈತರಿಗೆ ಭರವಸೆ ನೀಡಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮುಂಗಾರು ಪರಿಸ್ಥಿತಿ, ರೈತರ ಸಮಸ್ಯೆ ಮತ್ತು ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸುವ ಕುರಿತಂತೆ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ್ದೇನೆ. ಸರ್ಕಾರದ ಹಂತದಲ್ಲಿ ಜಿಲ್ಲೆಯ ರೈತರ ಪರಿಸ್ಥಿತಿಯನ್ನು ಕಬ್ಬು ಅಭಿವೃದ್ಧಿ ಆಯುಕ್ತರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಮುಂದಿನ ವಾರದಲ್ಲಿ ಕಾರ್ಖಾನೆಗಳ ಆರಂಭಕ್ಕೆ ಸರ್ಕಾರದಿಂದ ಅನುಮತಿ ದೊರಕಿಸಿಕೊಡುವುದಾಗಿ ತಿಳಿಸಿದರು.

ನ್ಯಾಯಾಲಯದಿಂದ ತಡೆಯಾಜ್ಞೆ:

ರಾಜ್ಯ ಸರ್ಕಾರದ ಆದೇಶದಂತೆ ರೈತರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ೫೦ ರು. ಬಾಕಿ ಹಣ ೧೦.೦೪ ಕೋಟಿ ರು. ಹಣ ನೀಡುವಂತೆ ಆದೇಶ ಜಾರಿಯಾದ ೨೪ ಗಂಟೆಗಳಲ್ಲೇ ನೋಟಿಸ್ ನೀಡಿ ಸೂಚನೆ ನೀಡಿದ್ದೇನೆ. ಆದರೆ, ಸಕ್ಕರೆ ಕಾರ್ಖಾನೆಯವರು ಹಣ ಪಾವತಿಸಲು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಸರ್ಕಾರದ ಪರವಾಗಿಯೇ ಆದೇಶ ಬರಬಹುದು ಎಂಬ ನಿರೀಕ್ಷೆ ಇದೆ. ಆದೇಶ ಬಂದ ನಂತರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

ಜಿಲ್ಲಾಧಿಕಾರಿ ನಿರ್ಧಾರವಲ್ಲ:

ಬೆಳೆಗಳಿಗೆ ನೀರು ಹರಿಸುವ ವಿಚಾರ ಜಿಲ್ಲಾಧಿಕಾರಿ ನಿರ್ಧಾರವಲ್ಲ. ಅದು ನೀರಾವರಿ ಸಲಹಾ ಸಮಿತಿಯ ನಿರ್ಧಾರ. ನಾವು ವಾಸ್ತವ ಚಿತ್ರಣವನ್ನು ಸಮಿತಿಯ ಮುಂದೆ ಇಡುತ್ತೇವೆ. ಕಳೆದ ವರ್ಷ ಜೂನ್ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಿತ್ತು. ಬೆಳೆಗಳಿಗೆ ನೀರು ಕೊಟ್ಟಿದ್ದೆವು. ಈಗ ಅಣೆಕಟ್ಟೆಯಲ್ಲಿ ೧೧ ಟಿಎಂಸಿಯಷ್ಟು ಮಾತ್ರ ನೀರಿದೆ. ಮುಂದಿನ ದಿನಗಳಲ್ಲಿ ಜಲಾಶಯಕ್ಕೆ ಬರುವ ಒಳಹರಿವನ್ನು ಆಧರಿಸಿ ನೀರು ಹರಿಸುವ ಬಗ್ಗೆ ಸಮಿತಿ ತೀರ್ಮಾನ ಮಾಡಲಿದೆ. ಜುಲೈ ಅಂತ್ಯ ಹಾಗೂ ಆಗಸ್ಟ್ ಮೊದಲವಾರದಲ್ಲೂ ಜಿಲ್ಲೆಯಲ್ಲಿ ಬಿತ್ತನೆ ನಡೆಸಲಾಗಿದೆ. ಕುಡಿಯುವ ನೀರಿಗೆ ೨ ಟಿಎಂಸಿಯಷ್ಟು ನೀರಿನ ಅಗತ್ಯವಿದೆ. ಈಗಿರುವ ನೀರನ್ನು ಕುಡಿಯುವ ನೀರಿಗೆ ಮಾತ್ರ ಕಾಯ್ದಿರಿಸಲಾಗಿದೆ ಎಂದು ರೈತರಿಗೆ ವಿವರಿಸಿದರು.

ಪರ್ಯಾಯ ಬೆಳೆಗಳ ಆಲೋಚನೆ:

ನಾನು ಈ ಬಾರಿ ಬೆಳೆಯನ್ನೇ ಬೆಳೆಯಬೇಡಿ ಎನ್ನುತ್ತಿಲ್ಲ. ಇನ್ನೂ ಆಶಾದಾಯಕ ಮಳೆಯಾಗುವುದನ್ನು ಎದುರು ನೋಡುತ್ತಿದ್ದೇವೆ. ಒಂದು ವೇಳೆ ಮಳೆ ಮತ್ತು ನೀರಿನ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಬಗ್ಗೆಯೂ ಆಲೋಚನೆ ಮಾಡಬೇಕಿದೆ. ಅದಕ್ಕಾಗಿ ತಜ್ಞರು, ವಿಜ್ಞಾನಿಗಳ ಜೊತೆ ಚರ್ಚೆ ನಡೆಸಲಾಗಿದೆ. ಜುಲೈ ಎರಡನೇ ವಾರದಿಂದ ಆಗಸ್ಟ್ ಮೊದಲ ಮತ್ತು ಎರಡನೇವಾರದವರೆಗೆ ಮಳೆ ಬಾರದಿದ್ದರೆ ಆ ಸಮಯದಲ್ಲಿ ಯಾವ ಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಪಟ್ಟಿ ಮಾಡಿಕೊಂಡಿದ್ದೇವೆ. ಇದು ಪರ್ಯಾಯ ಬೆಳೆಯ ಆಲೋಚನೆಯೇ ಹೊರತು ಆದೇಶವಲ್ಲ. ಅದಕ್ಕೂ ಬಿತ್ತನೆ ಬೀಜ, ಗೊಬ್ಬರವನ್ನು ಸಿದ್ಧ ಮಾಡಿಟ್ಟುಕೊಳ್ಳಬೇಕಿರುವ ಕಾರಣ ಆ ನಿಟ್ಟಿನಲ್ಲೂ ಕ್ರಿಯಾಯೋಜನೆ ತಯಾರಿಸಿಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

ಪರಿಹಾರ ಘೋಷಣೆ ಮಾಡಲು ಸಕಾಲವಲ್ಲ:

ಬೆಳೆ ಪರಿಹಾರ ಘೋಷಣೆಗೆ ಇದು ಸಕಾಲವಲ್ಲ. ಮುಂಗಾರು ಮಳೆಯಲ್ಲಿ ಶೇ.೭೦ರಷ್ಟು ಕಡಿಮೆಯಾದರೆ ಆಗ ಪರಿಹಾರ ಘೋಷಣೆ ಮಾಡಲಾಗುತ್ತದೆ. ಆಗಸ್ಟ್ ತಿಂಗಳ ನಂತರ ರಾಜ್ಯಸರ್ಕಾರ ಆ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ. ಆದರೆ, ಬೆಳೆ ವಿಮೆ ಮಾಡಿಸಿಕೊಳ್ಳಲು ರೈತರು ಹೆಚ್ಚು ಆಸಕ್ತಿ ವಹಿಸಬೇಕು. ಇದುವರೆಗೆ ೧೧ ಸಾವಿರ ರೈತರು ಮಾತ್ರ ಮುಂಗಾರು ಹಂಗಾಮಿಗೆ ಬೆಳೆ ವಿಮೆ ಮಾಡಿಸಿಕೊಂಡಿದ್ದಾರೆ. ಅಲಸಂದೆ, ರಾಗಿ, ಭತ್ತ, ಎಳ್ಳು, ಹುರುಳಿ, ಜೋಳ, ಟಮೋಟೋ, ತೊಗರಿ, ನೆಲಗಡಲೆ, ಮಾವು ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳುವುದಕ್ಕೆ ಅವಕಾಶವಿದ್ದು ರೈತರು ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಬೆಳಗ್ಗೆ ೧ ಗಂಟೆ ಹೆಚ್ಚಿಸುವ ಸಲಹೆ:

ಪ್ರಸ್ತುತ ಪಂಪ್‌ ಸೆಟ್‌ಗಳಿಗೆ ೭ ಗಂಟೆ ವಿದ್ಯುತ್ ಪೂರೈಸಲಾಗುತ್ತಿದೆ. ರಾತ್ರಿ ವೇಳೆ ಪಂಪ್‌ಸೆಟ್‌ಗಳಿಗೆ ನೀಡುತ್ತಿರುವ ವಿದ್ಯುತ್ ಸಮಯದ ಬಗ್ಗೆ ರೈತರು ಸಮಸ್ಯೆ ಹೇಳಿಕೊಂಡಿದ್ದಾರೆ. ಹಾಗಾಗಿ ರಾತ್ರಿ ನಿಗದಿಪಡಿಸಿರುವ ಸಮಯದಲ್ಲಿ ಒಂದು ಗಂಟೆ ಕಡಿತಗೊಳಿಸಿ ಬೆಳಗ್ಗೆ ಒಂದು ಗಂಟೆ ಹೆಚ್ಚಿಸುವ ಕುರಿತು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ. ಇದರ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅದಕ್ಕೆ ಅಧಿಕಾರಿಗಳು ಸಮ್ಮತಿಸಿದರೆ ರೈತರಿಗೆ ಅನುಕೂಲವಾಗಲಿದೆ. ರೈತರ ಅಭಿಪ್ರಾಯ ಸರ್ಕಾರದ ಗಮನಕ್ಕೆ ತರುವೆ

ಬೆಂಗಳೂರಿಗೆ ಆರನೇ ಹಂತದ ಕುಡಿವ ನೀರಿನ ಯೋಜನೆಯ ಕುರಿತಂತೆ ರೈತರು ವ್ಯಕ್ತಪಡಿಸಿರುವ ಅಭಿಪ್ರಾಯಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಒಂದು ವರ್ಷಕ್ಕೆ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ೬ ಟಿಎಂಸಿ ನೀರಿನ ಅಗತ್ಯವಿದೆ. ಈ ಕುರಿತಂತೆ ಸರ್ಕಾರದ ಅಧಿಕಾರಿಗಳೊಂದಿಗೆ ಸಭೆ ಏರ್ಪಡಿಸುತ್ತೇನೆ. ಈಗ ವ್ಯಕ್ತವಾದ ರೈತರ ವಾದವನ್ನು ನಡವಳಿಗಳಲ್ಲಿ ಸೇರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು.

-ಡಾ.ಕುಮಾರ, ಜಿಲ್ಲಾಧಿಕಾರಿ, ಮಂಡ್ಯಸಭೆಯಲ್ಲಿ ರೈತರು ಮಂಡಿಸಿದ ಅಭಿಪ್ರಾಯಗಳು

ಕಾರ್ಖಾನೆ ಮಾಲೀಕರಿಗೆ ನಾಚಿಕೆಯಾಗ್ಬೇಕು!

ಸಕ್ಕರೆ ಕಾರ್ಖಾನೆಯವರು ೫೦ ರು. ಕೊಡುವುದಕ್ಕೆ ನ್ಯಾಯಾಲಯಕ್ಕೆ ಹೋಗಿರುವುದಕ್ಕೆ ನಾಚಿಕೆಯಾಗಬೇಕು. ಎರಡು-ಮೂರು ಸಕ್ಕರೆ ಕಾರ್ಖಾನೆ ಮಾಡಿರುವವರಿಗೆ ೫೦ ರು. ಕೊಡಲಾಗುವುದಿಲ್ಲವೇ. ಇದು ರೈತರಿಗೆ ಮಾಡುವ ದ್ರೋಹ. ಸರ್ಕಾರ ಒಣಗುತ್ತಿರುವ ಬೆಳೆಗಳಿಗೆ ತಕ್ಷಣವೇ ನೀರು ಹರಿಸಬೇಕು. ೬ನೇ ಹಂತದ ಕುಡಿವ ನೀರಿನ ಯೋಜನೆ ಜಿಲ್ಲೆಯ ಪಾಲಿಗೆ ಮರಣಶಾಸನ.

- ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷರು ರೈತಸಂಘ

ಆರನೇ ಹಂತದ ಕುಡಿವ ನೀರಿಗೆ ಅವಕಾಶ ನೀಡಬೇಡಿ. ಕುಡಿವ ನೀರಿಗೆ ಅವರು ಬೇರೆ ವ್ಯವಸ್ಥೆ ಮಾಡಿಕೊಳ್ಳಲಿ. ಅಣೆಕಟ್ಟೆಗೆ ಸ್ವಲ್ಪ ಒಳಹರಿವು ಹೆಚ್ಚಿದೆ. ೭೦ ಅಡಿಯವರೆಗೂ ಬೆಳೆಗಳಿಗೆ ನೀರು ಕೊಡುವುದಕ್ಕೆ ಅವಕಾಶವಿದೆ. ತಕ್ಷಣವೇ ಬೆಳೆಗಳಿಗೆ ನೀರು ಹರಿಸಿ ಒಣಗುತ್ತಿರುವ ಬೆಳೆಗಳನ್ನು ರಕ್ಷಿಸಬೇಕಿದೆ. ಇಲ್ಲವೇ ಪ್ರತಿ ಎಕರೆಗೆ ೫೦ ಸಾವಿರ ರು. ಪರಿಹಾರ ಕೊಡಲಿ.

- ವೇಣುಗೋಪಾಲ್, ಅಧ್ಯಕ್ಷರು, ರಾಜ್ಯ ಕಬ್ಬು ಬೆಳೆಗಾರರ ಸಂಘ

ಜಿಲ್ಲೆಯ ೩೭ ಸಾವಿರ ಹೆಕ್ಟೇರ್‌ನಲ್ಲಿ ಕಬ್ಬು ಇದೆ. ಕಾರ್ಖಾನೆಗಳು ಶೀಘ್ರ ಆರಂಭವಾಗಬೇಕು. ಕಬ್ಬು ಅರೆಯುವುದು ನಿಧಾನವಾದರೆ ರೈತರಿಗೆ ದೊಡ್ಡ ಅಪಾಯ ಎದುರಾಗಲಿದೆ. ಕಾರ್ಖಾನೆಗಳಿಂದ ೫೦ ರು. ಹಣವನ್ನು ಕೊಡಿಸಿಕೊಡಬೇಕು. ಆರನೇ ಹಂತದ ಯೋಜನೆಯನ್ನು ಕೈಬಿಟ್ಟು ಕೃಷಿಗೆ ನೀರನ್ನು ಒದಗಿಸುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ.

- ಸುನಂದಾ ಜಯರಾಂ, ರೈತನಾಯಕಿ

ಬೆಳೆಗಳಿಗೆ ತಕ್ಷಣವೇ ನೀರನ್ನು ಒದಗಿಸುವುದು ಮೊದಲ ಆದ್ಯತೆಯಾಗಬೇಕಿದೆ. ಕರಾವಳಿ, ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಕಾವೇರಿ ಕಣಿವೆಯಲ್ಲೂ ಮುಂದಿನ ದಿನಗಳಲ್ಲಿ ಒಳ್ಳೆಯ ಮಳೆಯಾಗಬಹುದೆಂಬ ಆಶಾಭಾವನೆ ಇದೆ. ಹೇಮಾವತಿಯಿಂದಲೂ ಬೆಳೆಗಳಿಗೆ ನೀರು ಹರಿಸುವ ಸಂಬಂಧ ಸರ್ಕಾರದ ಗಮನಸೆಳೆಯಬೇಕಿದೆ.

- ರಾಜೇಗೌಡ, ಮುಖಂಡರು, ಕೆ.ಆರ್.ಪೇಟೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕಿನಲ್ಲಿ ೧೯೬೭ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು
ಬೆಳೆಗೆ ನೀರು ಕೊಡದಿದ್ದರೆ ಕೋಟ್ಯಂತರ ರು. ನಷ್ಟ