ಹಬ್ಬದ ಹೊತ್ತಲ್ಲೇ ಸಕ್ಕರೆ ದರ ಏರಿಕೆ

KannadaprabhaNewsNetwork |  
Published : Aug 26, 2026, 03:15 AM IST
ಬೆಳಗಾವಿ  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ಸಾಲು ಸಾಲು ಹಬ್ಬಗಳ ಸಂಭ್ರಮದ ನಡುವೆಯೇ ಸಕ್ಕರೆ ದರ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ತಿಂಗಳ ಹಿಂದೆ ಕೆಜಿಗೆ ₹45ರಷ್ಟಿದ್ದ ಸಕ್ಕರೆ ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲಿ ₹70ರಿಂದ ₹75ರ ಗಡಿ ತಲುಪಿದೆ. ಹಬ್ಬದ ಸಮಯದಲ್ಲಿ ಸಿಹಿ ತಿನಿಸುಗಳ ಬೇಡಿಕೆ ಹೆಚ್ಚಿರುವ ಬೆನ್ನಲ್ಲೇ ಸಕ್ಕರೆ ಬೆಲೆ ಏರಿಕೆಯಾಗಿರುವುದು ಮನೆ ಬಜೆಟ್‌ಗೆ ಮತ್ತೊಂದು ಹೊರೆ ತಂದಿದೆ.

ಪ್ರಮೋದ ಗಡಕರ

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಾಲು ಸಾಲು ಹಬ್ಬಗಳ ಸಂಭ್ರಮದ ನಡುವೆಯೇ ಸಕ್ಕರೆ ದರ ದಿಢೀರ್ ಏರಿಕೆಯಾಗಿದ್ದು, ಗ್ರಾಹಕರಿಗೆ ಶಾಕ್ ನೀಡಿದೆ. ತಿಂಗಳ ಹಿಂದೆ ಕೆಜಿಗೆ ₹45ರಷ್ಟಿದ್ದ ಸಕ್ಕರೆ ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲಿ ₹70ರಿಂದ ₹75ರ ಗಡಿ ತಲುಪಿದೆ. ಹಬ್ಬದ ಸಮಯದಲ್ಲಿ ಸಿಹಿ ತಿನಿಸುಗಳ ಬೇಡಿಕೆ ಹೆಚ್ಚಿರುವ ಬೆನ್ನಲ್ಲೇ ಸಕ್ಕರೆ ಬೆಲೆ ಏರಿಕೆಯಾಗಿರುವುದು ಮನೆ ಬಜೆಟ್‌ಗೆ ಮತ್ತೊಂದು ಹೊರೆ ತಂದಿದೆ.

ಸಕ್ಕರೆ ದರ ಏರಿಕೆಗೆ ಕಬ್ಬಿನ ಪೂರೈಕೆ ಕೊರತೆ, ಮಳೆ ಅಭಾವದಿಂದ ಇಳುವರಿ ಕುಸಿತ, ಎಥನಾಲ್ ಉತ್ಪಾದನೆಗೆ ಕಬ್ಬಿನ ಬಳಕೆ ಹೆಚ್ಚಳ ಸೇರಿದಂತೆ ಹಲವು ಕಾರಣಗಳು ಚರ್ಚೆಯಲ್ಲಿವೆ. ಇದರ ಜತೆಗೆ ಕೆಲ ಕಾರ್ಪೊರೇಟ್ ಕಂಪನಿಗಳು ಹಾಗೂ ದಲ್ಲಾಳಿಗಳು ಸಕ್ಕರೆ ದಾಸ್ತಾನು ಮಾಡಿಕೊಂಡು ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಪೂರೈಕೆ–ಬೇಡಿಕೆ ಅಂತರವೇ ಅಸ್ತ್ರ?:

ಈ ಬಾರಿ ಕಬ್ಬಿನ ಉತ್ಪಾದನೆ ಹಾಗೂ ಇಳುವರಿ ಕಡಿಮೆಯಾಗುವ ನಿರೀಕ್ಷೆ ಇದೆ. ದೇಶದಲ್ಲಿ 340 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯ ಗುರಿ ಹೊಂದಿದ್ದರೂ, ಸುಮಾರು 35 ಲಕ್ಷ ಮೆಟ್ರಿಕ್ ಟನ್ ಕಡಿಮೆ ಉತ್ಪಾದನೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲೂ ಸದ್ಯ ಸುಮಾರು 9 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ದಾಸ್ತಾನು ಇದೆ. ಹೊಸ ಸಕ್ಕರೆ ಮಾರುಕಟ್ಟೆಗೆ ಬರಲು ನವೆಂಬರ್‌ನಲ್ಲಿ ಆರಂಭವಾಗುವ ಕಬ್ಬು ನುರಿಸುವ ಹಂಗಾಮಿನವರೆಗೆ ಕಾಯಬೇಕಿದೆ.

ಈ ಪೂರೈಕೆ–ಬೇಡಿಕೆ ಅಂತರವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ. ಕಾರ್ಖಾನೆಗಳಿಂದ ಕಡಿಮೆ ದರದಲ್ಲಿ ಸಕ್ಕರೆ ಖರೀದಿಸಿ ಗೋದಾಮುಗಳಲ್ಲಿ ಸಂಗ್ರಹಿಸಿಟ್ಟುಕೊಂಡು, ಮಾರುಕಟ್ಟೆಯಲ್ಲಿ ಕೊರತೆ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ.

ಹಬ್ಬಗಳ ಬೇಡಿಕೆ ಹೆಚ್ಚಳ:

ಶ್ರಾವಣ ಮಾಸ, ವರಮಹಾಲಕ್ಷ್ಮೀ ಹಬ್ಬ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಮುಂದಿನ ದಿನಗಳಲ್ಲಿ ಗಣೇಶೋತ್ಸವ ಸೇರಿದಂತೆ ಸಾಲು ಸಾಲು ಹಬ್ಬಗಳು ಎದುರಾಗಲಿವೆ. ಈ ಸಂದರ್ಭ ಸಿಹಿ ತಿನಿಸುಗಳ ತಯಾರಿಕೆಗೆ ಸಕ್ಕರೆ ಬಳಕೆ ಹೆಚ್ಚಾಗುತ್ತದೆ. ಬೇಡಿಕೆ ಹೆಚ್ಚಿರುವುದನ್ನೇ ಬಂಡವಾಳ ಮಾಡಿಕೊಂಡು ದಲ್ಲಾಳಿಗಳು ದರ ಹೆಚ್ಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಿಹಿ ತಿಂಡಿಗಳಿಗೂ ದರ ಏರಿಕೆ ಬಿಸಿ:

ಸಕ್ಕರೆ ದರ ಏರಿಕೆಯ ಪರಿಣಾಮ ಕೇವಲ ಅಡುಗೆ ಮನೆಯ ಬಜೆಟ್‌ಗೆ ಸೀಮಿತವಾಗುವ ಸಾಧ್ಯತೆ ಇಲ್ಲ. ಚಹಾ, ಕಾಫಿಯಿಂದ ಹಿಡಿದು ಲಡ್ಡು, ಜಿಲೇಬಿ, ಮೈಸೂರುಪಾಕ್, ಪೇಡಾ, ಬರ್ಫಿ, ರಸಗುಲ್ಲಾ, ಕುಂದಾ, ಕರದಂಟು ಸೇರಿದಂತೆ ವಿವಿಧ ಸಿಹಿ ತಿನಿಸುಗಳ ಬೆಲೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಬಿಸ್ಕಿಟ್, ಕೇಕ್, ಪೇಸ್ಟ್ರಿ, ಬ್ರೆಡ್, ತಂಪು ಪಾನೀಯ, ಐಸ್‌ಕ್ರೀಂ, ಜ್ಯೂಸ್ ಹಾಗೂ ಚಾಕೊಲೇಟ್‌ಗಳ ತಯಾರಿಕೆಯಲ್ಲೂ ಸಕ್ಕರೆ ಪ್ರಮುಖ ಕಚ್ಚಾ ವಸ್ತುವಾಗಿರುವುದರಿಂದ ಉತ್ಪಾದನಾ ವೆಚ್ಚ ಹೆಚ್ಚಳದ ಹೊರೆ ಅಂತಿಮವಾಗಿ ಗ್ರಾಹಕರ ಮೇಲೆಯೇ ಬೀಳುವ ಆತಂಕವಿದೆ.

ಸಕ್ಕರೆ ಉತ್ಪಾದನೆಯಲ್ಲಿ ಭಾರತಕ್ಕೆ 2ನೇ ಸ್ಥಾನ:

ವಿಶ್ವದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ಮೊದಲ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ. ಭಾರತ ಜಾಗತಿಕ ಸಕ್ಕರೆ ಉತ್ಪಾದನೆಯಲ್ಲಿ ಸುಮಾರು ಶೇ.18ರಷ್ಟು ಪಾಲು ಹೊಂದಿದೆ. ಚೀನಾ ಸುಮಾರು ಶೇ.5ರಷ್ಟು ಉತ್ಪಾದನೆಯೊಂದಿಗೆ ನಂತರದ ಸ್ಥಾನದಲ್ಲಿದೆ.

ದೇಶದಲ್ಲಿ ಉತ್ತರ ಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕ ಪ್ರಮುಖ ಕಬ್ಬು ಉತ್ಪಾದಕ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ 2025-26ನೇ ಸಾಲಿನಲ್ಲಿ ಸುಮಾರು 7.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಇದರಲ್ಲಿ 6.40 ಲಕ್ಷ ಹೆಕ್ಟೇರ್ ಪ್ರದೇಶದ ಕಬ್ಬನ್ನು ಕಾರ್ಖಾನೆಗಳಿಗೆ ಪೂರೈಸಲಾಗಿತ್ತು. ಸುಮಾರು 576 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಿ 50 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದಿಸಲಾಗಿದೆ.

ರಾಜ್ಯಕ್ಕೆ ವರ್ಷಕ್ಕೆ ಸುಮಾರು 25ರಿಂದ 28 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಅಗತ್ಯವಿದ್ದು, ಉಳಿದ ಸಕ್ಕರೆಯನ್ನು ಕಬ್ಬು ಬೆಳೆಯದ ಪಶ್ಚಿಮ ಬಂಗಾಳ, ಗೋವಾ, ಮಣಿಪುರ, ಕೇರಳ ಸೇರಿದಂತೆ ಹಲವು ರಾಜ್ಯಗಳಿಗೆ ಕರ್ನಾಟಕದಿಂದಲೇ ಪೂರೈಸಲಾಗುತ್ತದೆ.

ರಫ್ತಿಗೆ ನಿರ್ಬಂಧ ದೇಶದಲ್ಲಿ ಸಕ್ಕರೆ ಕೊರತೆಯ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ವಿಧಿಸಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆ ಉಳಿಸಿಕೊಳ್ಳಲು ಕೈಗೊಂಡ ಈ ಕ್ರಮದಿಂದ ಮತ್ತಷ್ಟು ಕೊರತೆ ಉಂಟಾಗುವುದನ್ನು ತಡೆಯಲು ಸಾಧ್ಯವಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ಗೃಹ ಬಳಕೆ-ವಾಣಿಜ್ಯ ಬಳಕೆಗೆ ಪ್ರತ್ಯೇಕ ದರ?

ಸಕ್ಕರೆ ದರ ನಿಯಂತ್ರಣಕ್ಕೆ ಗ್ಯಾಸ್ ಹಾಗೂ ವಿದ್ಯುತ್ ದರ ಮಾದರಿಯಲ್ಲಿ ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಪ್ರತ್ಯೇಕ ದರ ನಿಗದಿಪಡಿಸಬೇಕು ಎಂಬ ಬೇಡಿಕೆಯೂ ಕೇಳಿಬಂದಿದೆ. ಗೃಹ ಬಳಕೆಯ ಸಕ್ಕರೆಗೆ ಕೆಜಿಗೆ ₹75 ಹಾಗೂ ವಾಣಿಜ್ಯ ಬಳಕೆಗೆ ₹100 ದರ ನಿಗದಿಪಡಿಸಬೇಕು. ಇದರಿಂದ ಕಾರ್ಖಾನೆಗಳಿಗೆ ಲಾಭದ ಜತೆಗೆ ರೈತರಿಗೆ ಹೆಚ್ಚಿನ ದರ ನೀಡಲು ಸಾಧ್ಯವಾಗಲಿದೆ ಎಂಬ ವಾದವಿದೆ.

ರಂಗರಾಜನ್ ಸಮಿತಿ ವರದಿ ಪ್ರಕಾರ ಕಬ್ಬಿನ ಉಪ ಉತ್ಪನ್ನಗಳಿಂದ ಬರುವ ಲಾಭಾಂಶವನ್ನು ರೈತರಿಗೂ ಹಂಚಿಕೆ ಮಾಡಬೇಕು ಎಂಬ ಆಗ್ರಹವೂ ಇದೆ. ಪುಣೆಯ ಸೋಮೇಶ್ವರ ಸಕ್ಕರೆ ಕಾರ್ಖಾನೆ ಕಳೆದ ವರ್ಷ ಕಬ್ಬು ಪೂರೈಸಿದ ರೈತರಿಗೆ ಹೆಚ್ಚುವರಿ ಬಿಲ್ ನೀಡಲು ಕೈಗೊಂಡಿರುವ ಮಾದರಿಯಲ್ಲಿ ಕರ್ನಾಟಕದಲ್ಲೂ ರೈತರಿಗೆ ಎರಡನೇ ಕಂತಿನಲ್ಲಿ ಕನಿಷ್ಠ ₹750 ಪ್ರತಿ ಟನ್ ಹೆಚ್ಚುವರಿ ಪಾವತಿಸಬೇಕು ಎಂಬ ಬೇಡಿಕೆ ಮುಂದಿಡಲಾಗಿದೆ.

ಕೋಟ್...

ಈ ಬಾರಿಯ ಭೀಕರ ಬರದಿಂದ ಕಬ್ಬಿನ ಇಳುವರಿ ಕಡಿಮೆಯಾಗಲಿದೆ. ಹಬ್ಬಗಳಲ್ಲಿ ಸಕ್ಕರೆ ಬೇಡಿಕೆ ಹೆಚ್ಚಿರುವುದನ್ನೇ ಬಂಡವಾಳ ಮಾಡಿಕೊಂಡು ದರ ಹೆಚ್ಚಿಸಲಾಗಿದೆ. ಇದರಿಂದ ಕಾರ್ಖಾನೆ ಮಾಲೀಕರಿಗೆ ಲಾಭ ಹೊರತು ಕಬ್ಬು ಪೂರೈಸಿದ ರೈತರಿಗೆ ಕಹಿಯೇ. ಕೇಂದ್ರ ಸರ್ಕಾರ ಸಕ್ಕರೆ ಬೆಲೆ ಏರಿಕೆಗೆ ನಿಯಂತ್ರಣ ಹಾಕಬೇಕು. ಉಪ ಉತ್ಪನ್ನಗಳ ಲಾಭಾಂಶ ಹಂಚಬೇಕು. ಈ ಬಾರಿ ಪ್ರತಿ ಟನ್ ಕಬ್ಬಿಗೆ ₹5 ಸಾವಿರ ಎಫ್‌ಆರ್‌ಪಿ ನಿಗದಿ ಮಾಡಬೇಕು.

– ಕುರಬೂರ ಶಾಂತಕುಮಾರ, ರಾಜ್ಯಾಧ್ಯಕ್ಷರು, ಕರ್ನಾಟಕ ಕಬ್ಬು ಬೆಳೆಗಾರರ ಸಂಘ.

ಕಾರ್ಪೊರೇಟ್ ಲಾಬಿಯಿಂದ ಹಬ್ಬಗಳಿರುವುದನ್ನು ನೋಡಿಕೊಂಡು ಏಕಾಏಕಿ ಸಕ್ಕರೆ ದರ ಏರಿಕೆ ಮಾಡಲಾಗಿದೆ. ಮಾರುಕಟ್ಟೆಯಲ್ಲಿ ಕೊರತೆ ತೋರಿಸಿ ಬೆಲೆ ಹೆಚ್ಚಿಸಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರ ಮೇಲೆ ದೊಡ್ಡ ಹೊಡೆತ ಬೀಳಲಿದೆ. ಕಬ್ಬು ಪೂರೈಸಿದ ರೈತರಿಗೆ ಇದರಿಂದ ಏನೂ ಲಾಭವಾಗುವುದಿಲ್ಲ. ಕಾರ್ಖಾನೆ ಮಾಲೀಕರು, ಕಾರ್ಪೊರೇಟ್ ಕಂಪನಿಗಳು ಮತ್ತು ದಲ್ಲಾಳಿಗಳಿಗೆ ದೊಡ್ಡ ಲಾಭವಾಗಲಿದೆ.

-ಸಿದಗೌಡ ಮೋದಗಿ, ರಾಜ್ಯಾಧ್ಯಕ್ಷರು, ಭಾರತೀಯ ಕೃಷಿಕ ಸಮಾಜ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮನೆಗಳ್ಳತನ: ಹುಬ್ಬಳ್ಳಿಯ ಇಬ್ಬರ ಬಂಧನ
ಒಣಗುತ್ತಿರುವ ಬೆಳೆಗೆ ನೀರು ಬಿಡದಿದ್ರೆ ಹೋರಾಟ