ಮೊದಲ ಕಂತಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3500 ಹಾಗೂ ಹಂಗಾಮು ಮುಕ್ತಾಯಗೊಂಡ ಬಳಿಕ ಎರಡನೇ ಕಂತಿನಲ್ಲಿ ಹೆಚ್ಚುವರಿ ₹100 ಪಾವತಿಸಲಾಗುವುದು.
ಹಳಿಯಾಳ: ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ₹3600 ದರ ಸೇರಿದಂತೆ ಲಾಭ ಹಂಚಿಕೆ ಸೂತ್ರ ನೀಡಲು ಬೆಳಗಾವಿಯಲ್ಲಿ ಕೈಗೊಂಡಿರುವ ನಿರ್ಧಾರವನ್ನು ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸರ್ವಾನುಮತದಿಂದ ಒಪ್ಪಿಕೊಂಡು ಕಾರ್ಖಾನೆಯನ್ನು ಆರಂಭಿಸಲು ಸಹಮತ ವ್ಯಕ್ತಪಡಿಸಿದರು.
2026- 27ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭಿಸುವ ಹಿನ್ನೆಲೆ ಪಟ್ಟಣದ ತಾಲೂಕಾಡಳಿತ ಸೌಧದಲ್ಲಿ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರ ಸುದೀರ್ಘ ಸಭೆ ಸಂಪನ್ನಗೊಂಡಿತು.
ಪ್ರಸಕ್ತ ವರ್ಷ ತಾಲೂಕಿನಲ್ಲಿ ಹಾಗೂ ರಾಜ್ಯದಲ್ಲಿಯೇ ಬರಗಾಲ ಇರುವುದರಿಂದ ಸಂಕಷ್ಟದಲ್ಲಿರುವ ರೈತರ ಬೆಂಬಲಕ್ಕೆ ಕಾರ್ಖಾನೆಗಳು ಬರಬೇಕು, ಸರ್ಕಾರ ನಿಗದಿಪಡಿಸಿದ ದರದ ಜತೆ ಹೆಚ್ಚುವರಿಯಾಗಿ ಪ್ರತಿ ಟನ್ ಗೆ ₹500 ನೀಡುವಂತೆ ಆಗ್ರಹಿಸಿದರು. ಕಾರ್ಖಾನೆಯವರು 2023- 24ರ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ನೀಡಬೇಕಾಗಿದ್ದ ₹256ರಂತೆ ಬಾಕಿ ₹26 ಕೋಟಿ ನೀಡುವಂತೆ ಪ್ರಸ್ತಾಪಿಸಲಾಯಿತು.
ಕಾರ್ಖಾನೆಯ ಆಡಳಿತ ಮಂಡಳಿಯ ಪರವಾಗಿ ಮಾತನಾಡಿದ ಹಿರಿಯ ಅಧಿಕಾರಿ ಬಾಲಾಜಿ ಅವರು, ರಾಜ್ಯ ಸರ್ಕಾರ ಕೈಗೊಂಡ ತೀರ್ಮಾನದಂತೆ ನಮ್ಮ ಕಾರ್ಖಾನೆಯು ನಡೆಯಲಿದೆ, ಮೊದಲ ಕಂತಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3500 ಹಾಗೂ ಹಂಗಾಮು ಮುಕ್ತಾಯಗೊಂಡ ಬಳಿಕ ಎರಡನೇ ಕಂತಿನಲ್ಲಿ ಹೆಚ್ಚುವರಿ ₹100 ಪಾವತಿಸಲಾಗುವುದು ಎಂದರು.
ಕಬ್ಬು ಬೆಳೆಗಾರರ ಬೇಡಿಕೆಯಂತೆ ಸುಟ್ಟ ಕಬ್ಬಿಗೆ ಪೂರ್ಣ ದರವನ್ನು ನೀಡುವುದಾಗಿಯೂ ಮತ್ತು ಕಬ್ಬು ಕಟಾವು ಮತ್ತು ಸಾಗಾಟದ ವೆಚ್ಚವನ್ನು ಕಾರ್ಖಾನೆಯೇ ಭರಿಸುವ ಭರವಸೆಯನ್ನು ನೀಡಿದರು. ತೂಕದ ಯಂತ್ರದ ಸಮಸ್ಯೆಯನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಕಬ್ಬು ಕಡಿಯುವ ಆದ್ಯತಾ ಪಟ್ಟಿಯನ್ನು ಪ್ರಕಟಿಸುವಂತೆ ಕಾರ್ಖಾನೆಯವರಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಲಗಾಣಿ ಇತ್ಯಾದಿ ಸಮಸ್ಯೆ ಮರುಕಳಿಸಿದಲ್ಲಿ ರೈತರು ಪೊಲೀಸರ ಅಥವಾ ತಹಸೀಲ್ದಾರರಿಗೆ ದೂರು ನೀಡಬಹುದು ತಪ್ಪತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಕಬ್ಬು ಬೆಳೆಗಾರರ ಪರವಾಗಿ ಜಿಲ್ಲೆಯ ಪ್ರಮುಖರಾದ ಕುಮಾರ ಬೊಬಾಟೆ, ನಾಗೇಂದ್ರ ಜಿವೋಜಿ, ಶಂಕರ ಕಾಜಗಾರ, ಸುರೇಶ ಶಿವಣ್ಣನವರ, ಎಂ.ವಿ. ಘಾಡಿ, ಅಶೋಕ ಮೇಟಿ, ಗಿರೀಶ ಠೊಸುರ ಮತ್ತು ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಪರವಾಗಿ ಮಹೇಶ ಬೆಳಗಾಂವಕರ, ಪರಶುರಾಮ ಎತ್ತಿನಗುಡ್ಡ, ಸುಭಾಸ್ ಬೂದಣ್ಣನವರ, ಉಳವಪ್ಪ ಬಳಿಗೇರ ಹಾಗೂ ಇತರರು ಮಾತನಾಡಿದರು.
ಕಾರ್ಖಾನೆಯ ಕಬ್ಬು ಕಟಾವು ಮತ್ತು ಸಾಗಾಟ ವಿಭಾಗದ ರಮೇಶ ರೆಡ್ಡಿ, ಶಂಕರ ಅಗಡಿ ಆಗಮಿಸಿದ್ದರು. ಜಿಲ್ಲಾ ಎಸ್ಪಿ ಎಂ.ಎನ್. ದೀಪನ್ ಹಾಗೂ ಕೃಷಿ ಮತ್ತು ಆಹಾರ ಇಲಾಖೆಯ ಜಿಲ್ಲಾಮಟ್ಟದ ಹಿರಿಯ ಅಧಿಕಾರಿಗಳು, ಹಳಿಯಾಳ ಮತ್ತು ಕಲಘಟಗಿ ತಹಸೀಲ್ದಾರರು, ತಾಪಂ ಇಒ ವಿಲಾಸರಾಜ್ ಪ್ರಸನ್ನ ಹಾಗೂ ಹಳಿಯಾಳ ದಾಂಡೇಲಿ ಪೋಲಿಸ್ ಅಧಿಕಾರಿಗಳು ಇದ್ದರು. 3 ಗಂಟೆ ಕಾದ ರೈತರು: ಪ್ರವಾಸಿ ಮಂದಿರದಲ್ಲಿಯೇ ಆಯ್ದ ರೈತ ಮುಖಂಡರೊಂದಿಗೆ ಹಾಗೂ ಕಾರ್ಖಾನೆಯವರೊಂದಿಗೆ ಸಭೆ ನಡೆಸಿದ್ದರಿಂದ ಬಾಕಿ ರೈತರು ತಹಸೀಲ್ದಾರ್ ಕಚೇರಿ ಆವರಣದಲ್ಲಿ 3 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು. ಮಾಧ್ಯಮದವರನ್ನು ಹೊರತಬ್ಬಿದ ಪೊಲೀಸರು: ಗುಪ್ತ ಸಭೆಯ ಮಾಹಿತಿಯನ್ನು ಪಡೆದುಕೊಂಡ ಮಾಧ್ಯಮದವರು ಪ್ರವಾಸಿ ಮಂದಿರಕ್ಕೆ ತೆರಳಿ ವರದಿ ಮಾಡಲು ಮುಂದಾದಾಗ ಪ್ರವಾಸಿ ಮಂದಿರದ ಮುಖ್ಯದ್ವಾರ ಹಾಗೂ ಎಲ್ಲ ಕಿಡಕಿ ಬಾಗಿಲುಗಳನ್ನು ಮುಚ್ಚಿ ಸಭೆ ನಡೆಸಲಾಗುತ್ತಿತ್ತು. ಬಳಿಕ ಪತ್ರಕರ್ತರು ಫೋಟೋ ತೆಗೆಯಲು ಮುಂದಾದಾಗ ಪೊಲೀಸ್ ಅಧಿಕಾರಿಗಳು ಮಾಧ್ಯಮದವರನ್ನು ತಡೆಗಟ್ಟಿ ಹೊರದಬ್ಬಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.