ಕನ್ನಡ ಪ್ರಭ ವಾರ್ತೆ ಮುಧೋಳ
ಶಾಲಾ, ಕಾಲೇಜುಗಳ ಬಸ್, ಅಂಬ್ಯುಲೆನ್ಸ್, ಪತ್ರಿಕೆ ಸರಬರಾಜು ಮತ್ತು ಹಾಲಿನ ವಾಹನ ಸಂಚಾರಕ್ಕೆ ರಸ್ತೆ ಮುಕ್ತಗೊಳಿಸಲಾಗಿತ್ತು, ಮುಧೋಳದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು, ಶಾಲಾ-ಕಾಲೇಜು, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಕಾರ್ಯ ನಿರ್ವಹಿಸಿದವು. ಮುಧೋಳ ಶ್ರೀ ಬಸವೇಶ್ವರ ಕಿರಾಣಾ ವರ್ತಕರ ಸಂಘ ಸೇರಿದಂತೆ ವಿವಿಧ ಸಂಘಟನೆಯವರು ಹೋರಾಟ ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲ ಸೂಚಿಸಿದರಲ್ಲದೆ, ಹೋರಾಟಗಾರರಿಗೆ ಊಟದ ವ್ಯವಸ್ಥೆಗಾಗಿ ಹಣಕಾಸಿನ ನೆರವು ನೀಡಿದರು. ₹3500 ಬೆಲೆ ಸಿಗುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿರುವ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಯವರು ಕ್ಯಾರೆ ಅನ್ನುತ್ತಿಲ್ಲ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಹಲವು ಭಾರಿ ಸಭೆ ನಡೆಸಿದರೂ ಇಬ್ಬರು ತಮ್ಮ ತಮ್ಮ ಪಟ್ಟು ಸಡಿಲಿಸುತ್ತಿಲ್ಲ. ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ. ಮತ್ತೊಂದೆಡೆ ಸರ್ಕಾರ ₹3300 ದರ ಘೋಷಣೆ ಮಾಡಿದ ಬಳಿಕ ಜಿಲ್ಲೆಯ ಇತರೆಡೆ ತಣ್ಣಗಾಗಿದ್ದ ಹೋರಾಟ ಮತ್ತೆ ಕಾವು ಪಡೆಯುತ್ತಿದೆ. ತಾಲೂಕಿನ ಹುಲ್ಯಾಳ, ಹಿಪ್ಪರಗಿ ಗ್ರಾಮಗಳಲ್ಲಿ ರೈತರು ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.ಸರ್ಕಾರ ನಿಗದಿ ಪಡಿಸಿರುವ ₹3300 ದರ ನೀಡುವಲ್ಲಿ ಕಾರ್ಖಾನೆ ಮಾಲೀಕರು ಹಿಂದೇಟು ಹಾಕುತ್ತಿದ್ದಾರೆ. ರಿಕವರಿ ವಿಷಯದಲ್ಲಿ ಪಾರದರ್ಶಕತೆ ಇಲ್ಲ. 10.25 ರಿಕವರಿಗೆ ₹3150 ಹಾಗೂ 11.25 ಕ್ಕೆ ₹3300 ನೀಡುವುದಾಗಿ ಹೇಳುತ್ತಿರುವ ಕಾರ್ಖಾನೆ ಮಾಲೀಕರು ರೈತರ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.