ಕಬ್ಬು ಹೋರಾಟಕ್ಕೆ ಸಂಚಾರವೇ ತಬ್ಬಿಬ್ಬು

KannadaprabhaNewsNetwork |  
Published : Nov 01, 2026, 04:15 AM ISTUpdated : Nov 01, 2026, 04:52 AM IST
Farmers

ಸಾರಾಂಶ

ಪ್ರತಿ ಟನ್‌ ಕಬ್ಬಿಗೆ ₹5,500 ನಿಗದಿ ಮಾಡುವ ಪ್ರಮುಖ ಬೇಡಿಕೆ ಸೇರಿದಂತೆ ರೈತರ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬ್ಬು ಹೋರಾಟಗಾರರು ಶನಿವಾರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಸವದತ್ತಿ, ಕಾಗವಾಡ, ಅಥಣಿ, ನಿಪ್ಪಾಣಿ, ಬೆಳಗಾವಿ, ಮೂಡಲಗಿ, ಗೋಕಾಕ, ಕಿತ್ತೂರು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೈತರು ಬಂದ್‌ ಮಾಡಿ ಉಗ್ರ ಹೋರಾಟ ನಡೆಸಿದರು

ಮುಗಳಖೋಡ: ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರೈತರ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಆರೋಪಿಸಿದರು.

ರಾಜ್ಯ ಹೆದ್ದಾರಿ ತಡೆದು ಹಮ್ಮಿಕೊಂಡಿದ್ದ ಪ್ರತಿಭಟನೆ

ಶನಿವಾರ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಮಹಾದ್ವಾರದ ಬಳಿ ರಾಜ್ಯ ಹೆದ್ದಾರಿ ತಡೆದು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಿತ್ತೂರು ಹೋರಾಟದ ಸಂದರ್ಭದಲ್ಲಿ ಆಹ್ವಾನವಿಲ್ಲದಿದ್ದರೂ ಆಗಮಿಸಿದ್ದ ಅವರು, ಸುವರ್ಣಸೌಧದಲ್ಲಿ ಸಭೆ ನಡೆಸಿ ಬೆಂಬಲ ಬೆಲೆ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳಿದ್ದರು. ಕೇಂದ್ರ ಸರ್ಕಾರದ ವಿರುದ್ಧ ಹತ್ತರಗಿ ಟೋಲ್ ಬಂದ್ ಮಾಡಿದ ಸಂದರ್ಭದಲ್ಲಿ ಸುಮ್ಮನಿದ್ದವರು. ಇದೀಗ ಡಿ.ಕೆ.ಶಿವಕುಮಾರ ಅವರ ವಿರುದ್ಧ ಹೋರಾಟಕ್ಕೆ ಮುಂದಾದಾಗ ನಿರ್ಬಂಧಗಳನ್ನು ಹೇರುತ್ತಿರುವುದು ರಾಜಕಾರಣವಲ್ಲವೇ ಎಂದು ಪ್ರಶ್ನಿಸಿದರು.

ನಾವು ರಂಗೋಲಿಯ ಕೆಳಗೆ ನುಸುಳುತ್ತೇವೆ.

ನೀವು ಚಾಪೆಯ ಕೆಳಗೆ ನುಸುಳುವ ಪ್ರಯತ್ನ ಮಾಡಿದರೆ, ನಾವು ರಂಗೋಲಿಯ ಕೆಳಗೆ ನುಸುಳುತ್ತೇವೆ. ನಮ್ಮ ಹೋರಾಟ ನಿರಂತರವಾಗಿದ್ದು, ಸರ್ಕಾರದೊಂದಿಗೆ ಗೌರವಯುತವಾಗಿ ನಡೆದುಕೊಳ್ಳುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಸ್ಪಂದಿಸಿ ಕಬ್ಬಿಗೆ ಬೆಂಬಲ ಬೆಲೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಜಿಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಿಗೋಡ ಮಾತನಾಡಿ, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ರೈತರು ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿರುವುದು ಸ್ವಾಗತಾರ್ಹ. ರೈತರ ಹೋರಾಟಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಎಲ್ಲರಿಗೂ ಅಗತ್ಯವಾಗಿರುವ ಸಕ್ಕರೆಗೆ ಎಂಎಸ್‌ಪಿ ಹಾಗೂ ಕಬ್ಬಿಗೆ ಎಸ್‌ಎಪಿ ದರ ನಿಗದಿಪಡಿಸಿ ರೈತರ ಹಿತ ಕಾಪಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಪುರಸಭೆ ಸದಸ್ಯ ಸಂಜಯ ಕುಲಿಗೋಡ, ಚಿಕ್ಕೋಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ, ಮುಖಂಡ ಭೀಮಶಿ ಬನಶಂಕರಿ, ಕೆಆರ್‌ಎಸ್ ಪಕ್ಷದ ಮೋಹನ ಲಮಾಣಿ, ಆನಂದ ಯರಡತ್ತಿ, ಶಿವಾನಂದ ಮೆಕ್ಕಳಕಿ, ಜ್ಞಾನೇಶ್ವರ ಅಳಗೋಡಿ ಹಾಗೂ ಅಶೋಕ ಗಸ್ತಿ ಮಾತನಾಡಿದರು.

ಪ್ರತಿಭಟನಾಕಾರರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಭಿಕ್ಷೆ ಬೇಡುವ ರೀತಿಯ ಭಾವಚಿತ್ರ ಪ್ರದರ್ಶಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟಕ್ಕೆ ಪಟ್ಟಣದ ಅಂಗಡಿ-ಮುಂಗಟ್ಟುಗಳ ಮಾಲೀಕರು, ತರಕಾರಿ ವ್ಯಾಪಾರಸ್ಥರು, ವಾಹನ ಮಾಲೀಕರು ಹಾಗೂ ಚಾಲಕರ ಸಂಘ, ಕನ್ನಡಪರ ಸಂಘಟನೆಗಳು, ಹಿರಿಯರು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಮತ್ತು ಗುತ್ತಿಗೆದಾರರು ಸಂಪೂರ್ಣ ಬೆಂಬಲ ಸೂಚಿಸಿದರು. ಪ್ರತಿಭಟನಾಕಾರರಿಗೆ ಅಕ್ಕಿ, ತರಕಾರಿ, ರೊಟ್ಟಿ, ಹಾಲು, ಬಾಳೆಹಣ್ಣು, ಕುಡಿಯುವ ನೀರು ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಒದಗಿಸುವುದರ ಜೊತೆಗೆ ಪೆಂಡಾಲ್ ವ್ಯವಸ್ಥೆ ಮಾಡಿ ಸಹಕಾರ ನೀಡಿದರು.

ಈ ವೇಳೆ ಪುರಸಭೆ ಸದಸ್ಯರು, ವಿವಿಧ ಸಂಘಟನೆಗಳ ಮುಖಂಡರು, ಹಿರಿಯರು, ಗ್ರಾಮಸ್ಥರು, ರೈತರು, ಶಿಕ್ಷಕರು, ವೈದ್ಯರು ಸೇರಿದಂತೆ ಹಲವರು ಇದ್ದರು.

ಪ್ರತಿ ಟನ್‌ ಕಬ್ಬಿಗೆ ₹5,500 ನಿಗದಿ ಮಾಡುವ ಪ್ರಮುಖ ಬೇಡಿಕೆ ಸೇರಿದಂತೆ ರೈತರ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಬ್ಬು ಹೋರಾಟಗಾರರು ಶನಿವಾರ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಸವದತ್ತಿ, ಕಾಗವಾಡ, ಅಥಣಿ, ನಿಪ್ಪಾಣಿ, ಬೆಳಗಾವಿ, ಮೂಡಲಗಿ, ಗೋಕಾಕ, ಕಿತ್ತೂರು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ರೈತರು ಬಂದ್‌ ಮಾಡಿ ಉಗ್ರ ಹೋರಾಟ ನಡೆಸಿದರು. ಇದರಿಂದಾಗಿ ಸಂಚಾರ ಮತ್ತು ಜನಜೀವನ ಸಂಪೂರ್ಣ ಸ್ತಬ್ದವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಬೆಂಗಳೂರು ಹೋಟೆಲ್‌ ಈಜು ಕೊಳದಲ್ಲಿ 2 ವಿದೇಶಿಗರ ಸಾವು
ಪ್ರಜ್ವಲ್‌ ಜೀವಾವಧಿಗೆ ಕಾರಣ ಆದ ಮೂವರಿಗೆ ಕೇಂದ್ರ ಗೃಹ ಪ್ರಶಸ್ತಿ