ಸುಗ್ಗನಹಳ್ಳಿ ಸೊಸೈಟಿ ಚುನಾವಣೆ: ಜೆಡಿಎಸ್ - ಬಿಜೆಪಿ ಮೈತ್ರಿ ಜಯಭೇರಿ

KannadaprabhaNewsNetwork | Published : Jan 17, 2024 1:46 AM

ಸಾರಾಂಶ

ಸುಗ್ಗನಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.

ಸಂಘದ 12 ಸ್ಥಾನಗಳ ಪೈಕಿ 11ರಲ್ಲಿ ಜೆಡಿಎಸ್ ಬೆಂಬಲಿಗರ ವಶ । ಕಾಂಗ್ರೆಸ್‌ಗೆ ಹೀನಾಯ ಸೋಲು

ಕನ್ನಡಪ್ರಭ ವಾರ್ತೆ ರಾಮನಗರ

ತಾಲೂಕಿನ ಸುಗ್ಗನಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಮುಖಭಂಗ ಅನುಭವಿಸಿದೆ.

ಸಂಘದ 12 ನಿರ್ದೇಶಕ ಸ್ಥಾನಗಳ ಪೈಕಿ ಜೆಡಿಎಸ್ ಬೆಂಬಲಿತರು - 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ, ಕಾಂಗ್ರೆಸ್ ಬೆಂಬಲಿತರು - 01 ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಈ ಮೂಲಕ ಸಂಘದ ಆಡಳಿತ ಜೆಡಿಎಸ್ ಪಾಲಾಗಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಪ್ರಮುಖ ಮುಖಂಡರು ಹೀನಾಯ ಸೋಲು ಅನುಭವಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಜಿ.ಎಲ್. ಆಂಜನೇಯ, ಜೆಡಿಎಸ್ ಬೆಂಬಲಿತರಾದ ಎಚ್ .ರವಿ ಕೃಷ್ಣ, ಕೆ. ಚಂದ್ರಯ್ಯ, ಬಿ. ನರಸಿಂಹಯ್ಯ, ಮಹಿಳಾ ಮೀಸಲು ಕ್ಷೇತ್ರದಿಂದ ರಾಮಕ್ಕ, ಜಯಮ್ಮ, ಪ್ರವರ್ಗ - ಎ ಕ್ಷೇತ್ರದಿಂದ ವೆಂಕಟೇಶ್, ಪ್ರವರ್ಗ -ಬಿ ಕ್ಷೇತ್ರದಿಂದ ಕೆ.ಎಲ್. ಸಿದ್ದಲಿಂಗಯ್ಯ, ಪ.ಜಾತಿ ಮೀಸಲು ಕ್ಷೇತ್ರದಿಂದ ಹೊನ್ನಯ್ಯ, ಪ.ಪಂಗಡ ಮೀಸಲು ಕ್ಷೇತ್ರದಿಂದ ವೆಂಕಟಯ್ಯ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಕೃಷ್ಣಮೂರ್ತಿ ಚುನಾಯಿತರಾಗಿದ್ದಾರೆ.

ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತರು ಗೆಲುವು ಸಾಧಿಸಿದ ವಿಷಯ ತಿಳಿಯುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ, ಜನರಿಗೆ ಸಿಹಿ ಹಂಚಿದರು. ಅಲ್ಲದೆ, ನೂತನ ನಿರ್ದೇಶಕರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.

ಚುನಾವಣಾಧಿಕಾರಿಯಾಗಿ ನಾಗೇಶ್, ಸಹಾಯಕ ಚುನಾವಣಾಧಿಕಾರಿಯಾಗಿ ಸಂಘದ ಸಿಇಒ ಪ್ರಕಾಶ್ ಕಾರ್ಯನಿರ್ವಹಿಸಿದರು.

ಸಂಘದ ನೂತನ ನಿರ್ದೇಶಕ ಕೆ. ಚಂದ್ರಯ್ಯ ಮಾತನಾಡಿ, ಉತ್ತಮ ಸಹಕಾರಿ ಸಂಘ ಎಂದು ಗುರುತಿಸಿಕೊಂಡಿರುವ ಈ ಸಂಘವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ನಾವೆಲ್ಲರೂ ಶ್ರಮಿಸುತ್ತೇವೆ ಎಂದರು.

ಚುನಾವಣೆಯಲ್ಲಿ ಬಿಜೆಪಿ ಸಹಕಾರದಲ್ಲಿ 12ರ ಪೈಕಿ 11 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತರು ಆಯ್ಕೆಯಾಗಿದ್ದು, ಈ ಗೆಲುವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸಮರ್ಪಿಸುತ್ತೇವೆ ಎಂದು ಹೇಳಿದರು.

ಜೆಡಿಎಸ್ ಮುಖಂಡರಾದ ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಶಾಂತಮಲ್ಲಯ್ಯ, ಭೈರಪ್ಪ, ಮಹದೇವಯ್ಯ, ಶಿವರಾಮಯ್ಯ, ಲೋಕೇಶ್ , ಕುಮಾರಸ್ವಾಮಿ, ಗಿರೀಶ್, ಬೋರೇಗೌಡ, ಎಸ್ .ಆರ್. ಮಹದೇವಯ್ಯ, ಬಿಜೆಪಿ ಮುಖಂಡ, ಗ್ರಾಪಂ ಮಾಜಿ ಅಧ್ಯಕ್ಷ ಶಿವಕುಮಾರ್ ಮತ್ತಿರರು ಹಾಜರಿದ್ದರು.

------------

ಕೋಟ್ ...

ಸಹಕಾರಿ‌ ಸಂಸ್ಥೆಯ ಸದಸ್ಯರಿಗೆ ಉತ್ತಮ ಸೇವೆ ಒದಗಿಸಲು ಸ್ಥಳೀಯ ಮಟ್ಟದಲ್ಲಿ ನಡೆದ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಜೆಡಿಎಸ್ ಬೆಂಬಲಿತ 11 ನಿರ್ದೇಶಕರನ್ನು ಆಡಳಿತ ಮಂಡಳಿಗೆ ಆಯ್ಕೆ ಮಾಡಿದ ಸದಸ್ಯರಿಗೆ ಹಾಗೂ ನೂತನ‌ ನಿರ್ದೇಶಕರು ಮತ್ತು ಜೆಡಿಎಸ್ ಎಲ್ಲ ಮುಖಂಡರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಒಗ್ಗಟ್ಟಿನಿಂದ ನಮಗೆ ಸ್ಫೂರ್ತಿ ಸಿಕ್ಕಿದ್ದು, ಜೆಡಿಎಸ್ ಬೆಂಬಲಿತರ ಅಭೂತ ಪೂರ್ವ ಗೆಲುವು ಮುಂದಿನ ಚುನಾವಣೆಗಳಿಗೆ ದಿಕ್ಸೂಚಿಯಾಗಿದೆ.

- ಎಸ್.ಆರ್. ರಾಮಕೃಷ್ಣಯ್ಯ, ಮಾಜಿ ಅಧ್ಯಕ್ಷರು, ಸುಗ್ಗನಹಳ್ಳಿ ಗ್ರಾಪಂ.

------------

15ಕೆಆರ್ ಎಂಎನ್ 5.ಜೆಪಿಜಿ

ರಾಮನಗರ ತಾಲೂಕಿನ ಸುಗ್ಗನಹಳ್ಳಿ ವಿವಿದ್ದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

-------------------------

Share this article