ಸುಜ್ಞಾನ ಪಿಯು ಕಾಲೇಜು: ರಾಜ್ಯ ಮಟ್ಟದ ಸಾಧಕಿ ಸ್ಪಂದನಾ ಶೆಟ್ಟಿಗೆ 50,000 ನಗದು ಬಹುಮಾನ

KannadaprabhaNewsNetwork |  
Published : Apr 11, 2026, 02:45 AM IST
ವಿದ್ಯಾರ್ಥಿನಿ ಸ್ಪಂದನಾ ಆರ್ ಶೆಟ್ಟಿ ಅವರಿಗೆ ಕಾಲೇಜು ಆಡಳಿತ ಮಂಡಳಿ ಚೆಕ್ ಹಸ್ತಾಂತರ ಮಾಡಲಾಯಿತು. | Kannada Prabha

ಸಾರಾಂಶ

Sugnan PU College: State level achiever Spandana Shetty gets Rs. 50,000 cash prize

ಕುಂದಾಪುರ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 592 ಅಂಕಗಳನ್ನು ಪಡೆದು ರಾಜ್ಯಕ್ಕೆ 9ನೇ ರ್‍ಯಾಂಕ್‌ ಪಡೆದು ಕಾಲೇಜಿಗೆ ಹೆಮ್ಮೆ ತಂದ ಯಡಾಡಿ ಮತ್ಯಾಡಿಯ ಸುಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ಪಂದನಾ ಆರ್. ಶೆಟ್ಟಿ ಅವರಿಗೆ ಕಾಲೇಜು ಆಡಳಿತ ಮಂಡಳಿ 50,000 ರು. ನಗದು ಘೋಷಿಸಿ, ಚೆಕ್ ಹಸ್ತಾಂತರಿಸಿದೆ. ಶುಕ್ರವಾರ ಮಧ್ಯಾಹ್ನ ಕಾಲೇಜಿನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ಕಾರ್‍ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಅವರು ವಿದ್ಯಾರ್ಥಿನಿಯನ್ನು ಅಭಿನಂದಿಸಿ ಚೆಕ್ ಹಸ್ತಾಂತರಿಸಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಟ್ರಸ್ಟ್ ನ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ, ವಿದ್ಯಾರ್ಥಿನಿ ಸ್ಪಂದನಾ ಶೆಟ್ಟಿ ರಾಜ್ಯಕ್ಕೆ 9ನೇ ರ್‍ಯಾಂಕ್ ಪಡೆದಿರುವುದು ಎಲ್ಲ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ. ನಮ್ಮ ಸಂಸ್ಥೆಯ ಪ್ರಥಮ ಬ್ಯಾಚ್ ನಲ್ಲಿ ಯಾವುದೇ ವಿದ್ಯಾರ್ಥಿ ರಾಜ್ಯ ಮಟ್ಟದ ರ್‍ಯಾಂಕ್‌ ಪಡೆದರೆ 50,000 ರು. ಬಹುಮಾನ ನೀಡುವುದಾಗಿ ಹಿಂದೆ ತಿಳಿಸಲಾಗಿತ್ತು. ಅದರಂತೆ ಇಂದು ಸ್ಪಂದನಾಗೆ 50,000 ರು. ನಗದು ನೀಡಿ ಗೌರವಿಸಲಾಗಿದೆ. ಸ್ಪಂದನಾ ಅವರ ಸಾಧನೆ ನಮ್ಮ ಮುಂದಿನ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಲಿ ಎಂದರು.

ವಿವಿಧ ವಿಭಾಗಗಳಲ್ಲಿ ಶೇ. 95ಕ್ಕಿಂತ ಅಧಿಕ 22 ವಿದ್ಯಾರ್ಥಿಗಳು, ಶೇ. 90ಕ್ಕಿಂತ ಅಧಿಕ 57 ವಿದ್ಯಾರ್ಥಿಗಳು, ಶೇ. 85ಕ್ಕಿಂತ ಅಧಿಕ 89 ವಿದ್ಯಾರ್ಥಿಗಳು ಅಂಕಗಳನ್ನು ಪಡೆದು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಹೀಗೆ ಉತ್ತಮ ಫಲಿತಾಂಶ ಪಡೆದವರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಎರಡು ವರ್ಷಗಳ ಹಿಂದಿನ ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧಾರಣ ಅಂಕಗಳನ್ನು ಪಡೆದಿದ್ದರು. ಈಗ ಪಿಯುಸಿ ಫಲಿತಾಂಶದಲ್ಲಿ ಅವರುಗಳು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳಿಗಿಂತ ಗಣನೀಯ ಏರಿಕೆಯ ಅಂಕ ಗಳಿಸಿದ್ದು, ಪೋಷಕರ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದರು.ಕಾರ್‍ಯದರ್ಶಿ ಪ್ರತಾಪಚಂದ್ರ ಶೆಟ್ಟಿ ಮಾತನಾಡಿ, ಅತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಂಡು ಕಾಲೇಜು ಆರಂಭಗೊಂಡ ಮೊದಲ ಬ್ಯಾಚ್ ನಲ್ಲೇ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆ ತಂದಿದೆ. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ್‍ಯಾಂಕ್‌ ಬಂದಿದ್ದು, ಇದು ಅಚ್ಚಳಿಯದೆ ಉಳಿಯುವ ವಿಶೇಷ ಸಾಧನೆ. ಇದಕ್ಕೆ ಬೋಧಕ ಸಿಬ್ಬಂದಿಗಳ ಅವಿರತವಾದ ಶ್ರಮವೇ ಕಾರಣ ಎಂದರು.ಖಜಾಂಚಿ ಭರತ್ ಶೆಟ್ಟಿ ಮಾತನಾಡಿ, ಪಿಯುಸಿ ವಾರ್ಷಿಕ ಫಲಿತಾಂಶದಲ್ಲಿ ಅನೇಕ ವಿದ್ಯಾರ್ಥಿಗಳು ಸಾಧನೆ ಮಾಡಿದ್ದು, ಎಸೆಸ್ಸೆಲ್ಸಿಯಲ್ಲಿ ಅತಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಪಿಯುಸಿಯಲ್ಲಿ ತಮ್ಮ ಅಂಕಗಳನ್ನು ಗಣನೀಯವಾಗಿ ಏರಿಸಿಕೊಂಡಿದ್ದಾರೆ. ಶೈಕ್ಷಣಿಕ ಗುಣಮಟ್ಟದ ಜೊತೆಗೆ ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆ ನಮ್ಮ ಆದ್ಯತೆಯಾಗಿದೆ. ಹೀಗಾಗಿ ನಾವು ನಮ್ಮ ಸಂಸ್ಥೆಯಲ್ಲಿ, ಸಾಂಸ್ಕೃತಿಕ ಕಾರ್‍ಯಕ್ರಮಗಳು, ಪರಂಪರೆಯನ್ನು ಪರಿಚಯಿಸುವ ಚಟುವಟಿಕೆಗಳು ಹಾಗೂ ಆಟೋಟಗಳಿಗೂ ಪ್ರಾಮುಖ್ಯ ನೀಡುತ್ತಿದ್ದೇವೆ. ಇದು ಮಕ್ಕಳನ್ನು ಶಾರೀರಿಕವಾಗಿ ಸದೃಢಗೊಳಿಸುವ ಜೊತೆಗೆ ಅವರ ಮನೋಬಲವನ್ನೂ ವೃದ್ಧಿಸಲು ಸಹಕಾರಿಯಾಗಿದೆ. ಉತ್ತಮ ಶೈಕ್ಷಣಿಕ ಪರಿಸರ ಕಾಯ್ದುಕೊಳ್ಳಲು ನಮ್ಮ ಹೆಚ್ಚು ಗಮನ ನೀಡುತ್ತಿದ್ದೇವೆ. ಇದು ವಿದ್ಯಾರ್ಥಿಗಳಿಗೆ ತಮ್ಮ ಯಾವುದೇ ಪ್ರಶ್ನೆಗಳಿಗೆ ಬೋಧಕರೊಂದಿಗೆ ಚರ್ಚಿಸಿ ಉತ್ತರಗಳನ್ನು ಕಂಡುಕೊಳ್ಳಲು ಅನುಕೂಲಕರವಾಗಿದೆ. ಬೋಧಕರು ತರಗತಿಯಲ್ಲಿ ಸಾಮೂಹಿಕವಾಗಿ ಬೋಧನೆ ಮಾಡುವ ಜೊತೆಗೆ ಪ್ರತಿ ವಿದ್ಯಾರ್ಥಿಯ ಬಗ್ಗೆ, ವೈಯಕ್ತಿಕ ನಿಗಾ ವಹಿಸುತ್ತಾರೆ. ಆಯಾ ವಿದ್ಯಾರ್ಥಿಗೆ ಸೂಕ್ತವೆನ್ನಿಸುವ ರೀತಿಯಲ್ಲಿ ವಿಷಯವನ್ನು ಮನ ಮುಟ್ಟಿಸುವ ಪ್ರಯತ್ನ ಮಾಡುತ್ತಾರೆ. ಇದು ನಮ್ಮ ಸಂಸ್ಥೆಯಲಿ ಕಲಿಕೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಿದೆ ಎಂದರು.

ಈ ಸಂದರ್ಭ ಪ್ರಾಂಶುಪಾಲ ರಂಜನ್ ಬಿ. ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಮೋದ್ ಶೆಟ್ಟಿ, ಉಪನ್ಯಾಸಕಿ ಪೂಜಾ, ವಿದ್ಯಾರ್ಥಿನಿ ಸ್ಪಂದನಾ ತಂದೆ ರಘುರಾಮ ಶೆಟ್ಟಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವಿತೀಯ ಪಿಯುಸಿ ಫಲಿತಾಂಶ: ಅಂಬಿಕಾ ಪದವಿ ಪೂರ್ವ ವಿದ್ಯಾಲಯಕ್ಕೆ ದ್ವಿತೀಯ ರ‍್ಯಾಂಕ್
ಕೊರಗರ ಕಟ್ಟುಕಟ್ಟಲೆಗಳು: ಆರಾಧನೆ ಮತ್ತು ಆಚರಣೆ ಪುಸ್ತಕ ಬಿಡುಗಡೆ