ವಿಶ್ವಕರ್ಮರು ಕೌಶಲ್ಯತೆಗೆ ಆಧುನಿಕ ಟಚ್ ನೀಡಲು ಸುಜ್ಞಾನಮೂರ್ತಿ ಕರೆ

KannadaprabhaNewsNetwork |  
Published : Aug 22, 2026, 01:15 AM IST
21 ಟಿವಿಕೆ 4 – ತುರುವೇಕೆರೆಗೆ ಆಗಮಿಸಿದ ರಾಜ್ಯ ವಿಶ್ವಕರ್ಮ ಅಭಿವೃದ್ದಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿಯವರನ್ನು ತಾಲೂಕು ವಿಶ್ವಕರ್ಮ ಸಮುದಾಯದ ಮುಖಂಡರು ಗೌರವಿಸಿದರು. | Kannada Prabha

ಸಾರಾಂಶ

ಸದ್ಯದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಮ್ಮ ಸಮುದಾಯದವರ ಅಭಿವೃದ್ಧಿಗಾಗಿ ಸುಮಾರು ₹50 ಕೋಟಿ ನೀಡಿದೆ. ನಮ್ಮ ನಿಗಮದಲ್ಲಿ ಹಲವಾರು ಕಾರ್ಯಕ್ರಮಗಳು ಇವೆ. ಇವುಗಳನ್ನು ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ಇರುವ ಪ್ರತಿಯೊಬ್ಬ ವಿಶ್ವಕರ್ಮರಿಗೂ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸಮಾಜಕ್ಕೆ ತಮ್ಮದೇ ಆದ ಸೇವೆ ಮಾಡುತ್ತಿರುವ ವಿಶ್ವಕರ್ಮರು ತಮ್ಮಲ್ಲಿರುವ ಕಲೆಗಳಿಗೆ ಆಧುನಿಕ ಟಚ್ ನೀಡುವ ಕಲೆಗಾರಿಕೆಯನ್ನು ಮೈಗೂಡಿಸಿಕೊಳ್ಳಬೇಕೆಂದು ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ವಿಶ್ವಕರ್ಮ ಸಮಾಜದ ಮುಖಂಡರನ್ನು ಭೇಟಿ ಮಾಡಿ ತಾಲೂಕಿನಲ್ಲಿರುವ ವಿಶ್ವಕರ್ಮರ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಪರಿಸ್ಥಿತಿಗಳ ಅವಲೋಕನ ಮಾಡಿದರು.

ಈ ವೇಳೆ ಮಾತನಾಡಿದ ಅವರು, ಸಮಾಜಕ್ಕೆ ಅತ್ಯಗತ್ಯವಾಗಿ ಬೇಕಿರುವ ಹಲವಾರು ಸೇವೆಗಳನ್ನು ನೀಡುತ್ತಿರುವ ವಿಶ್ವಕರ್ಮರ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಕ್ಷೀಣ ಪರಿಸ್ಥಿತಿಯಲ್ಲಿದೆ. ರಾಜಕೀಯವಾಗಂತೂ ಇಲ್ಲವೇ ಇಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆ ವೇಳೆ ನಮ್ಮ ಮತಪಡೆಯಲು ಮುಂದಾಗುತ್ತವೆ ಹೊರೆತು ನಮ್ಮನ್ನು ಉದ್ಧಾರ ಮಾಡುವ ಮನಸ್ಸು ಮಾಡಿಲ್ಲ ಎಂದರು.

ಸದ್ಯದ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ನಮ್ಮ ಸಮುದಾಯದವರ ಅಭಿವೃದ್ಧಿಗಾಗಿ ಸುಮಾರು ₹50 ಕೋಟಿ ನೀಡಿದೆ. ನಮ್ಮ ನಿಗಮದಲ್ಲಿ ಹಲವಾರು ಕಾರ್ಯಕ್ರಮಗಳು ಇವೆ. ಇವುಗಳನ್ನು ಇನ್ನು ಕೆಲವೇ ದಿನಗಳಲ್ಲಿ ರಾಜ್ಯದಾದ್ಯಂತ ಇರುವ ಪ್ರತಿಯೊಬ್ಬ ವಿಶ್ವಕರ್ಮರಿಗೂ ತಿಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ವಿಶ್ವಕರ್ಮರು ಸಾಮಾಜಿಕವಾಗಿ ಹಿಂದುಳಿದಿದ್ದಾರೆ. ಅವರು ತಮ್ಮ ವಂಶಪಾರಂಪರ್ಯವಾಗಿ ಬಂದಿರುವ ಕುಲ ಕಸುಬನ್ನು ಇನ್ನೂ ಮುಂದುವರೆಸುತ್ತಿದ್ದಾರೆ. ಯುವಕರು ತಾಂತ್ರಿಕವಾಗಿ ಮುಂದುವರೆಯಲು ನಮ್ಮಲ್ಲಿ ಸಾಕಷ್ಟು ತರಬೇತಿ ನೀಡಲಾಗುತ್ತಿದೆ. ಉದ್ಯಮವನ್ನಾಗಿಸಲು ಪ್ರಯತ್ನಿಸಬೇಕು. ಸರ್ಕಾರದಿಂದ ಆರ್ಥಿಕ ನೆರವು ದೊರೆಯುತ್ತಿಲ್ಲ ಎಂಬ ದೂರಿದೆ. ಅವರ ಉದ್ಯಮಕ್ಕೆ ಸಹಕಾರ ನೀಡಲು ಕನಿಷ್ಠ ₹5 ಲಕ್ಷ ನೆರವು ನೀಡಲು ಚಿಂತನೆ ನಡೆದಿದೆ. ಎಲ್ಲ ವಿಶ್ವಕರ್ಮರು ತಮ್ಮ ಹೆಸರಿನಲ್ಲಿ ಲೇಬರ್ ಕಾರ್ಡ್ ಮಾಡಿಸಿಕೊಳ್ಳಿ. ಇದರಿಂದ ಹತ್ತು ಹಲವಾರು ಪ್ರಯೋಜನಗಳು ಇವೆ. ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಮದುವೆ, ತದ ನಂತರ ಪಿಂಚಣಿ ಸೇರಿದಂತೆ ಹಲವಾರು ಉಪಯೋಗಗಳನ್ನು ಪಡೆಯಬಹುದು ಎಂದರು.

ಜಿಲ್ಲಾ ಕೈಗಾರಿಕಾ ಅಧಿಕಾರಿಗಳ ಸಂಪರ್ಕಗಳಿಸಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಗಳಿಸಲು ಮುಂದಾಗಿ. ಮಹಿಳೆಯರಿಗೆ ಎಲೆಕ್ಟ್ರಾನಿಕ್ ಹೊಲಿಗೆ ಯಂತ್ರಗಳನ್ನು ನೀಡಲು ನಿಗಮ ಮುಂದಾಗಿದೆ. ನಮ್ಮ ಸಮುದಾಯದವರಿಗೆ ಗಂಗಾಕಲ್ಯಾಣ ಯೋಜನೆಯಲ್ಲಿ ಬೋರ್ ವೆಲ್ ದೊರೆಯಲಿದೆ. ಸಾರಥಿ ಯೋಜನೆಯಡಿ ವಾಹನಗಳನ್ನು ಕೊಳ್ಳಬಹುದಾಗಿದೆ. ಅರಿವು ಯೋಜನೆಯಡಿ ಕುಲ ಕಸುಬಿನ ಅಭಿವೃದ್ಧಿಗಾಗಿ ಆಧುನಿಕ ತಂತ್ರಗಾರಿಕೆ ಕುರಿತು ತರಬೇತಿ ನೀಡಲಾಗುತ್ತದೆ. ವಿದೇಶಿ ವಿದ್ಯಾಭ್ಯಾಸಕ್ಕೂ ಆಧ್ಯತೆ ನೀಡಲಾಗಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವವರಿಗೆ ಸುಮಾರು ₹50 ಲಕ್ಷದವರೆಗೂ ಬಡ್ಡಿರಹಿತ ಸಾಲ ದೊರೆಯಲಿದೆ ಎಂದು ಸುಜ್ಞಾನ ಮೂರ್ತಿ ತಿಳಿಸಿದರು.

ಈ ವೇಳೆ ತಾಲೂಕಿನ ಹಲವಾರು ಮುಖಂಡರು ಸುಜ್ಞಾನ ಮೂರ್ತಿಯವರನ್ನು ಗೌರವಿಸಿ ತಾಲೂಕಿನ ವಿಶ್ವಕರ್ಮರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅವರ ವ್ಯವಹಾರಕ್ಕಾಗಿ ಬ್ಯಾಂಕ್ ವತಿಯಿಂದ ಹೆಚ್ಚು ಹಣಕಾಸಿನ ನೆರವು ಒದಗಿಸಬೇಕು. ಮನೆ ಇಲ್ಲದವರಿಗೆ ಮನೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.

ಜಿಪಂ ಮಾಜಿ ಸದಸ್ಯ ಎನ್. ಆರ್. ಜಯರಾಮ್ ಮಾತನಾಡಿ, ಜಿಲ್ಲೆಯ ವಿಶ್ವಕರ್ಮರಲ್ಲಿರುವ ಕೌಶಲ್ಯತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಮತ್ತು ಮಾರುಕಟ್ಟೆ ಮಾಡಲು ಜಿಲ್ಲೆಯಲ್ಲಿ ಗುಡಿಕೈಗಾರಿಕಾ ಕೇಂದ್ರ ಸ್ಥಾಪನೆ ಮಾಡಿದರೆ ಗ್ರಾಹಕರು ಕೊಳ್ಳಲು ಅನುಕೂಲ, ವೃತ್ತಿನಿರತರಿಗೂ ಅನುಕೂಲವಾಗಲಿದೆ ಎಂದು ಸಲಹೆ ಇತ್ತರು.

ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ಡಾ.ಶಶಿಧರ್ ಮಾತನಾಡಿ, ಕುಂಬಾರ ಸಮುದಾಯ ಮಣ್ಣಿನ ಕಲೆಯನ್ನೇ ಪ್ರಧಾನವಾಗಿ ಇಟ್ಟಿಕೊಂಡಿತ್ತು. ಆದರೆ ಇತ್ತೀಚೆಗೆ ಪ್ಲಾಸ್ಟಿಕ್ ಬಂದು ಕುಂಬಾರರ ಕುಲ ಕಸುಬನ್ನೇ ನುಂಗಿಬಿಟ್ಟಿದೆ. ಇದೇ ಕಸುಬನ್ನು ನೆಚ್ಚಿಕೊಂಡಿರುವ ಕುಟುಂಬ ಅತಂತ್ರವಾಗಿದೆ. ಹಾಗಾಗಿ ಅವರಿಗೂ ಸೂಕ್ತ ತರಬೇತಿ ನೀಡಿ ಕುಲ ಕಸುಬಿಗೆ ಹೊಳಪು ನೀಡಬೇಕೆಂದು ವಿನಂತಿಸಿಕೊಂಡರು.

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ, ತಾಲೂಕು ವಿಶ್ವಕರ್ಮ ಸಮುದಾಯದ ಮುಖಂಡರಾದ ಮಹೇಂದ್ರ, ರಮೇಶ್, ಗಿರೀಶ್, ಹುಲಿಕಲ್ ಕೃಷ್ಣಾಚಾರ್, ಅರುಣ್ ಕುಮಾರ್, ಚಂದ್ರು, ವಾಲ್ಮೀಕಿ ಸಮಾಜದ ಮುಖಂಡ ವಸಂತ್ ಕುಮಾರ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಚಿದಾನಂದ್, ಕನ್ನಡ ಸೋಮಣ್ಣ, ರಾಜು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

------

21 ಟಿವಿಕೆ 4 – ತುರುವೇಕೆರೆಗೆ ಆಗಮಿಸಿದ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನ ಮೂರ್ತಿಯವರನ್ನು ತಾಲೂಕು ವಿಶ್ವಕರ್ಮ ಸಮುದಾಯದ ಮುಖಂಡರು ಗೌರವಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಅಭಿವೃದ್ಧಿಯೇ ಲಯನ್ಸ್ ಧ್ಯೇಯ: ಡಾ.ಕೃಷ್ಣೇಗೌಡ
ಮಂಡ್ಯ: ೬೭ ಆಸ್ತಿ ಮಾಲೀಕರಿಂದ ರಾಜಕಾಲುವೆ ಒತ್ತುವರಿ..!