ಕನ್ನಡಪ್ರಭ ವಾರ್ತೆ ಸುಳ್ಯ ಸುಳ್ಯದ ಕಾಂತಮಂಗಲದಲ್ಲಿ ನಡೆದ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಸುಳ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಎಡಮಂಗಲ ಮೂಲದ ಉದಯ್ ಕುಮಾರ್ ನಾಯ್ಕ್ ಕೊಲೆ ಆರೋಪಿ. ಮೃತ ವಸಂತ ಹಾಗೂ ಆರೋಪಿ ಉದಯ್ ಅವರಿಗೆ ಸುಳ್ಯದ ಬಾರೊಂದರಲ್ಲಿ ಪರಿಚಯ ಆಗಿತ್ತು. ಇಬ್ಬರೂ ಮದ್ಯ ಸೇವಿಸಿದ್ದರು. ಬಳಿಕ ಅಂದಿನ ರಾತ್ರಿ ಜತಗೇ ಕಳೆಯುವ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಶಾಲಾ ವರಾಂಡದಲ್ಲಿ ಇಬ್ಬರೂ ಮದ್ಯ ಸೇವಿಸಿ ಮಲಗಿದ್ದು ರಾತ್ರಿ ಸುಮಾರು 12 ಗಂಟೆಯ ಸಮಯಕ್ಕೆ ಉದಯ್ ವಸಂತನ ಜೇಬಿನಲ್ಲಿ ಕಂಡಿದ್ದ ಹಣ ಮತ್ತು ಆತನ ಬಳಿ ಇದ್ದ ಮೊಬೈಲ್ ಫೋನನ್ನು ಲಪಟಾಯಿಸುವ ಉದ್ದೇಶದಿಂದ, ಶರ್ಟ್ ಎಳೆದಿದ್ದಾನೆ. ಎಚ್ಚರಗೊಂಡ ವಸಂತ ಇದನ್ನು ಪ್ರಶ್ನಿಸಿದ್ದು, ಇಬ್ಬರ ಮಧ್ಯೆ ಜಗಳ ಆರಂಭವಾಗಿದೆ. ವಸಂತ ಉದಯ್‌ಗೆ ಹೊಡೆದಿದ್ದು, ಕುಡಿತದ ನಶೆಯಲ್ಲಿ ಮೇಲೇಳಲು ಆಗದೇ ಅಲ್ಲೇ ನಿದ್ರೆ ಮಾಡಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಉದಯ್ ಸ್ವಲ್ಪ ದೂರ ಹೋಗಿ ಕೆಂಪು ಕಲ್ಲನ್ನು ತಂದು ವಸಂತ ತಲೆಯ ಮೇಲೆ ಹಾಕಿ ಕೊಂದಿದ್ದು. ಮುಂಜಾನೆಯವರಿಗೆ ಅಲ್ಲಿದ್ದು ಬಳಿಕ ಪರಾರಿಯಾಗಿದ್ದಾನೆ.
ಅಲ್ಲಿಂದ ಸುಳ್ಯಕ್ಕೆ ಬಂದ ಆರೋಪಿ ಉದಯ್ ತಾನು ಕದ್ದು ತಂದಿದ್ದ ಹಣದಲ್ಲಿ ಮತ್ತೆ ಬಾರ್‌ಗೆ ತೆರಳಿ ಕುಡಿದು ತಿರುಗಾಡುತ್ತಿದ್ದ. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ಫುಟೆಜ್, ಸ್ಥಳದಲ್ಲಿ ದೊರೆತ ಮದ್ಯದ ಪಾಕೇಟ್ ಆಧಾರದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.