ಕನ್ನಡಪ್ರಭ ವಾರ್ತೆ ಮಾಲೂರು
ಕಳೆದ ತಿಂಗಳು ಮಾಲೂರು ತಾಲೂಕಿನಾದ್ಯಂತ ಏಪ್ರಿಲ್ 14ರಂದು ದಾಳಿ ನಡೆಸಿ ಸರ್ಕಾರಿ ಇಲಾಖೆ ಅಧಿಕಾರಿಗಳ ಕಳ್ಳಾಟವನ್ನು ಪತ್ತೇ ಹಚ್ಚಿ ತರಾಟೆ ತೆಗೆದುಕೊಂಡಿದ್ದ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು, ತಾಲೂಕಿನ ವಿವಿಧ ಸರ್ಕಾರಿ ಇಲಾಖೆಯ ೧೮ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.ಇಲ್ಲಿನ ತಹಸೀಲ್ದಾರ್ ರೂಪ, ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್, ಬೆಸ್ಕಂ ಎ.ಇ.ಇ.ಅನ್ಸರ್ ಪಾಷ, ಕಾರ್ಯಪಾಲಕ ಅಭಿಯಂತರೆ ಕವಿತಾ, ಕಾರ್ಮಿಕ ನಿರೀಕ್ಷಕ ರೇಣುಕಾ, ಅಬಕಾರಿ ಇಲಾಖೆ ನಿರೀಕ್ಷಕಿ ಎ.ಪಿ.ಶಶಿಕಲಾ ಸೇರಿದಂತೆ ತಾಲೂಕು ಅಧಿಕಾರಿಗಳ ವಿರುದ್ಧ ಕೇಸು ದಾಖಲಾಗಿದೆ.ಜಿಲ್ಲಾ ಮಟ್ಟದ ಅಧಿಕಾರಿಗಳು
ಇವರ ಜತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ಧೇಶಕ ಕೋದಂಡರಾಮಯ್ಯ, ವಿಜ್ಞಾನಿ ವಿಶ್ವನಾಥ್, ಚೇತನ್, ಕೆ.ಶ್ರೀನಿವಾಸ್, ಕಿರಿಯ ಅಭಿಯಂತರ ರುಕ್ಸಾನ ಸುಲ್ತಾನ, ಪ್ರಾದೇಶಿಕ ಸಾರಿಗೆ ಅಧಿಕಾರಿ ವೇಣುಗೋಪಾಲ ರೆಡ್ಡಿ, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ನಯಾಜ್ ಪಾಷ, ಜಿಲ್ಲಾ ಪರಿಸರ ಅಧಿಕಾರಿ ಡಾ.ಕೆ.ರಾಜು ವಿರುದ್ಧ ಉಪ ಲೋಕಾಯುಕ್ತರು ಕೇಸು ದಾಖಲಿಸಿದ್ದಾರೆ.ಮುಖ್ಯವಾಗಿ ತಾಲೂಕಿನ ಟೇಕಲ್. ಮಾಸ್ತಿ ವ್ಯಾಪ್ತಿಯಲ್ಲಿನ ಜಲ್ಲಿ ಕ್ರಷರ್ ಗಳ ಮೇಲೆ ಉಪ ಲೋಕಾಯುಕ್ತರ ಕೆಂಗಣ್ಣು ಬೀರಿದ್ದು , ತಾಲೂಕಿನ ತಿಮ್ಮನಾಯಕಹಳ್ಳಿ ಅಗ್ರಹಾರದ ಆರ್.ಮಂಜುಳಾ, ಅದೇ ಗ್ರಾಮದ ರಾಜಣ್ಣ ,ಮಾಕಾರಹಳ್ಳಿ ಗ್ರಾಮದ ಚಂದ್ರಶೇಖರ್ ರೆಡ್ಡಿ, ಅದೇ ಗ್ರಾಮದ ಸತ್ಯನಾರಾಯಣ ಶೆಟ್ಟಿಯ ಸ್ನೇಹ ಕ್ರಷರ್, ವೈ.ಎಸ್.ಆರ್.ಸತೀಶ್ ಸ್ಟೋನ್ ಕ್ರಷರ್, ಅನಿಮಿಟ್ಟಹಳ್ಳಿ ಬಿ.ಮಂಜುನಾಥ್, ಅದೇ ಗ್ರಾಮದ ಎಂ.ಎಸ್.ಸ್ಟೋನ್ ಸಪ್ಲ್ಯೆ, ಅದೇ ಗ್ರಾಮದ ರವಿ ಅವರ ಲಕ್ಷ್ಮಿ ನರಸಿಂಹ ಸ್ವಾಮಿ ಟ್ರೇಡರ್ಸ್ ವಿರುದ್ಧ ಕೇಸು ದಾಖಲಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕೇಸ್ಇದಲ್ಲದೇ ಪಟ್ಟಣದಲ್ಲಿ 18 ಸಾವಿರ ಖಾತೆಗಳ ಪೈಕಿ ಅನಧಿಕೃತವಾಗಿರುವ 2000 ಖಾತೆಗಳಲ್ಲಿ ಕೇವಲ 15 ಪ್ರಕರಣದಲ್ಲಿ ನೋಟಿಸ್ ನೀಡಿರುವ ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಪ್ರದೀಪ್ ಕುಮಾರ್ ಪಟ್ಟಣದಲ್ಲಿ ಎಷ್ಟು ರಸ್ತೆ ಒತ್ತುವರಿಯಾಗಿದೆ. ಎಷ್ಟು ಅನಧಿಕೃತ ಕಟ್ಟಡಗಳಿವೆ, ಅವುಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ದಾಖಲೆ ಹಾಜರು ಪಡಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.
ಸರ್ಕಾರಿ ಆಸ್ವತ್ರೆಯಲ್ಲಿ ರೋಗಿಗಳಿಗೆ ಅವಧಿ ಮುಗಿದ ಔಷಧಿಯನ್ನು ವಿತರಣೆ ಮಾಡಿರುವ ಆರೋಪದ ಮೇಲೆ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್, ಡಾಟಾ ಅಪರೇಟರ್ ಗಳಾದ ಹೇಮಂತ್, ಗಂಗಾಧರ್,ಕೃಷ್ಣಪ್ಪ, ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಅಬಕಾರಿ ಇಲಾಖೆ ನಿರೀಕ್ಷಕಿ ಪಿ.ಕೆ.ಶಶಿಕಲಾ, ನೋಂದಣಾಧಿಕಾರಿ ಬೈರಾರೆಡ್ಡಿ ವಿರುದ್ಧವೂ ದೂರು ದಾಖಲಿಸಿದ್ದಾರೆ.