ಎಸ್.ಜಿ. ತೆಗ್ಗಿನಮನಿ
ಒಂದು ವಾರಕ್ಕಿಂತ ಮೊದಲು ಮಾರುಕಟ್ಟೆಯಲ್ಲಿ ಕ್ವಿಂಟಲ್ ಸೂರ್ಯಕಾಂತಿಗೆ 7 ಸಾವಿರದಿಂದ 7700ರ ವರೆಗೆ ದರವಿತ್ತು. ಸದ್ಯ ಮಾರುಕಟ್ಟೆಯಲ್ಲಿ ಕ್ವಿಂಟಲ್ ಸೂರ್ಯಕಾಂತಿಗೆ 5800ರಿಂದ 6100ರ ವರೆಗೆ ಮಾರಾಟವಾಗುತ್ತಿದೆ. ಈ ಪರಿ ದರ ಇಳಿದರೆ ಖರ್ಚು ತೆಗೆದು ಲಾಭ ಎಷ್ಟು ಬರುತ್ತದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ತಾಲೂಕಿನ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಸೂರ್ಯಕಾಂತಿಯನ್ನು ರೈತರು ಬೆಳೆದಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ 20 ಸಾವಿರ ಹಣವನ್ನು ಬಿತ್ತನೆ ಬೀಜ, ಗೊಬ್ಬರ, ನಿರ್ವಹಣೆಗೆ ಖರ್ಚು ಮಾಡಿ ಸೂರ್ಯಕಾಂತಿ ಬೆಳೆದಿದ್ದಾರೆ. ಪ್ರತಿ ಎಕರೆಗೆ ಸರಾಸರಿ 8ರಿಂದ 10 ಕ್ವಿಂಟಲ್ ಇಳುವರಿ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋದರೆ ಧಾರಣೆ ಕೇಳಿ ರೈತರು ಹೌಹಾರುತ್ತಿದ್ದಾರೆ.ಪ್ರಾರಂಭವಾಗದ ಖರೀದಿ ಕೇಂದ್ರ: ಕೇಂದ್ರ ಸರ್ಕಾರ ಕ್ವಿಂಟಲ್ ಸೂರ್ಯಕಾಂತಿಗೆ ₹7771 ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ ತಾಲೂಕಿನಲ್ಲಿ ಇನ್ನೂವರೆಗೂ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಪ್ರಾರಂಭವಾಗಿಲ್ಲ. ಇದರಿಂದ ಅನಿವಾರ್ಯವಾಗಿ ರೈತರು ಸಮೀಪದ ವ್ಯಾಪಾರಸ್ಥರಿಗೆ ಕಡಿಮೆ ದರದಲ್ಲಿಯೇ ಸೂರ್ಯಕಾಂತಿಯನ್ನು ಮಾರಾಟ ಮಾಡುತ್ತಿದ್ದಾರೆ.
ಬಿತ್ತನೆ ವಿವರ: ಪ್ರಸಕ್ತ ವರ್ಷ ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ನೀರಾವರಿ ಜಮೀನುಗಳಲ್ಲಿ 8500 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿಯನ್ನು ತಾಲೂಕಿನ ರೈತರು ಇಲ್ಲಿಯವರೆಗೆ 3,13,710 ಕ್ವಿಂಟಲ್ ಫಸಲನ್ನು ಆಯಾ ದಿನದ ದರಕ್ಕೆ ತಕ್ಕಂತೆ ಮಾರಾಟ ಮಾಡಿದ್ದಾರೆಂದು ಎಪಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರಕ್ಕೆ ಪತ್ರ: ಈ ವರ್ಷ ತಾಲೂಕಿನಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಸೂರ್ಯಕಾಂತಿ ಬೆಳೆದಿದ್ದಾರೆ ಎಂಬುದರ ಮಾಹಿತಿಯನ್ನು ಕೃಷಿ ಇಲಾಖೆಯವರು ನೀಡಿದ್ದಾರೆ. ಅಲ್ಲದೇ ಬೆಂಬಲ ಬೆಲೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಪ್ರಾರಂಭಿಸಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಎಪಿಎಂಸಿ ಕಾರ್ಯದರ್ಶಿ ರಾಘವೇಂದ್ರ ಸಜ್ಜನರ ತಿಳಿಸಿದರು.ರೈತರಿಗೆ ತೊಂದರೆ: ನರಗುಂದ ಮಾರುಕಟ್ಟೆಯಲ್ಲಿ ಸೂರ್ಯಕಾಂತಿ ಕಟಾವಿಗೆ ಬರುವ ಮುನ್ನ ಪ್ರತಿ 1 ಕ್ವಿಂಟಲ್‌ಗೆ ₹7000ದಿಂದ ₹7700ದ ವರೆಗೆ ಬೆಲೆಯಿತ್ತು. ಆದರೆ ಸದ್ಯ ರೈತರು ಬೆಳೆ ಕಟಾವು ಮಾಡಿ ಮಾರುಕಟ್ಟೆಗೆ ಮಾರಾಟ ಮಾಡಲು ತಂದಿದ್ದೇವೆ. ವ್ಯಾಪಾರಸ್ಥರು ದಿಢೀರ್ ಸೂರ್ಯಕಾಂತಿ ಬೆಲೆಯನ್ನು ಕಡಿಮೆ ಮಾಡಿದ್ದಾರೆ. ಇದರಿಂದ ಬೆವರು ಸುರಿಸಿದ ರೈತರು ತೊಂದರೆ ಅನುಭವಿಸುವಂತಾಗಿದೆ ಎಂದು ಕಣಿಕಿಕೊಪ್ಪ ಗ್ರಾಮದ ರೈತ ತೀರ್ಥಗೌಡ ಪಾಟೀಲ ತಿಳಿಸಿದರು.