ಶಿರಸಿ: ಉಡುಪಿಯಿಂದ ಶಿರಸಿಗೆ ಬರುವಾಗ 5 ಸಾವಿರ ಹೊಂಡ ನೋಡಿದ್ದೇನೆ ಎಂದು ಶಾಸಕ ವಿ. ಸುನೀಲಕುಮಾರ ಹೇಳಿರುವುದು ಬಿಜೆಪಿ ಮೇಲೆ ಆರೋಪವಾಗಿದೆ. ರಾಷ್ಟ್ರೀಯ ಹೆದ್ದಾರಿ ಯಾರಿಗೆ ಸೇರಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲಿ ಎಂದು ಶಾಸಕ ಭೀಮಣ್ಣ ನಾಯ್ಕ ತಿರುಗೇಟು ನೀಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರವಾಗಿದ್ದು, 5 ಗ್ಯಾರಂಟಿ ಯೋಜನೆ ಜನರಿಗೆ ತಲುಪಿಸುವ ಜತೆಗೆ ಅಭಿವೃದ್ಧಿಗೆ ಹಣ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಬಾಕಿ ಹಣದ ಕುರಿತು ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ವಿರೋಧ ಪಕ್ಷದ ತನ್ನ ಕೆಲಸವನ್ನು ಮಾಡಲಿ. ಅದನ್ನು ಬಿಟ್ಟು ರಾಜಕೀಯ ಉದ್ದೇಶಕ್ಕೆ ಹೇಳಿಕೆ ನೀಡುವುದನ್ನು ಕಡಿಮೆ ಮಾಡಲಿ ಎಂದು ಸಲಹೆ ನೀಡಿದರು.
ಅಘನಾಶಿನಿ-ವೇದಾವತಿ ನದಿ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ನದಿ ತಿರುವು ಯೋಜನೆಗೆ ಅವಕಾಶ ನೀಡುವುದಿಲ್ಲ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಗೊಂದಲಗಳಿಲ್ಲ. ನಿಗಮ ಮಂಡಳಿಯಲ್ಲಿ ನಮ್ಮ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಂದಿನ ದಿನದಲ್ಲಿ ಅವಕಾಶ ಸಿಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಶಿರಸಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ತಾಲೂಕು ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷೆ ಸುಮಾ ಉಗ್ರಾಣಕರ, ಶಿರಸಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಗಣೇಶ ದಾವಣಗೆರೆ, ಬಂಡಳ ಗ್ರಾಪಂ ಅಧ್ಯಕ್ಷ ದೇವರಾಜ ಮರಾಠಿ, ಪ್ರಮುಖರಾದ ವೆಂಕಟೇಶ ಹೆಗಡೆ ಹೊಸಬಾಳೆ, ಎಸ್.ಕೆ. ಭಾಗ್ವತ್ ಶಿರ್ಸಿಮಕ್ಕಿ, ಜ್ಯೋತಿ ಪಾಟೀಲ, ನಗರಸಭೆ ಸದಸ್ಯರಾದ ಪ್ರದೀಪ ಶೆಟ್ಟಿ, ಖಾದರ ಆನವಟ್ಟಿ, ಗೀತಾ ಶೆಟ್ಟಿ ಮತ್ತಿತರರು ಇದ್ದರು.
ಆಸ್ಪತ್ರೆ ಕಟ್ಟಡ: ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆ ಕಟ್ಟಡ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಸಿದ್ದಾಪುರ ತಾಲೂಕನ್ನು ಸಾಗರಕ್ಕೆ ಸೇರಿಸುವುದು ಅವೈಜ್ಞಾನಿಕ. ಶಿರಸಿ ಜಿಲ್ಲೆಯಾಗಬೇಕೆಂಬ ಅನೇಕ ವರ್ಷದ ಹೋರಾಟ ನಡೆಯುತ್ತಿದೆ. ಶಿರಸಿ ಜಿಲ್ಲೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ. ಆದರೆ ಒಟ್ಟಾಗಿ ಹೋರಾಟ ಮಾಡಬೇಕು ಎಂದು ಭೀಮಣ್ಣ ನಾಯ್ಕ ಹೇಳಿದರು.