ಎಲ್ಲೆಡೆ ಬಿಸಿಲಿನಾರ್ಭಟ: ಉಣಕಲ್‌ ಕೆರೆಯಲ್ಲೀಗ ಚಿಣ್ಣಾಟ

KannadaprabhaNewsNetwork | Published : Apr 1, 2024 12:45 AM

ಸಾರಾಂಶ

ಒಂದು ವಾರದ ಹಿಂದೆ 2-3 ದಿನಗಳ ವರೆಗೆ ಸಂಜೆ ಕೊಂಚ ಮಳೆಯಾದರೂ ಯಾವುದೇ ಪ್ರಭಾವ ಬೀರಲಿಲ್ಲ. ಈಗ ಬೆಳಗ್ಗೆ 8 ಗಂಟೆಯಾದರೆ ಸಾಕು ಮಧ್ಯಾಹ್ನದ ಬಿಸಿಲಿನ ಅನುಭವ ಕಾಣಬಹುದಾಗಿದೆ.

ಅಜೀಜಅಹ್ಮದ ಬಳಗಾನೂರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವರ್ಷಕ್ಕಿಂತಲೂ ಈ ಬಾರಿ ಬಿಸಿಲಿನ ಆರ್ಭಟ ನಗರದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಈ ಬೇಗೆ ನಿವಾರಿಸಿಕೊಳ್ಳಲು ನಿತ್ಯವೂ ನೂರಾರು ಚಿಣ್ಣರು, ಯುವಕರು ಇಲ್ಲಿನ ಉಣಕಲ್ಲಿನ ಕೆರೆ (ಚೆನ್ನಬಸವ ಸಾಗರ)ಗೆ ದಾಂಗುಡಿ ಇಡುತ್ತಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಿತ್ಯವೂ ಬಿಸಿಲಿನ ತಾಪಮಾನ ಏರಿಕೆಯಾಗುತ್ತಲೆ ಸಾಗಿದೆ. ನಗರದ ಮುಖ್ಯರಸ್ತೆಯ ಅಕ್ಕಪಕ್ಕದಲ್ಲಿ ನೂರಾರು ವರ್ಷಗಳಿಂದ ಬಿಸಿಲು, ಮಳೆ, ಗಾಳಿಗೆ ಕುಗ್ಗದೇ ಸವಾರರಿಗೆ ನೆರಳಿನ ಆಶ್ರಯ ನೀಡುತ್ತಿದ್ದ ನೂರಾರು ಮರಗಳನ್ನು ರಸ್ತೆ ಅಗಲೀಕರಣ, ರಸ್ತೆ ಸುಧಾರಣೆಯ ನೆಪವಾಗಿಟ್ಟುಕೊಂಡು ಕಡಿದಿದ್ದು, ಬಿಸಿಲಿನ ಪ್ರಖರತೆ ಇನ್ನಷ್ಟು ಬಾಧಿಸುವಂತೆ ಮಾಡಿದೆ.

ಸಮರ್ಪಕವಾಗಿ ಆಗದ ಮಳೆ

ಕಳೆದ ಒಂದು ತಿಂಗಳಿನಿಂದ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ಬಿಸಿಲಿನ ಪ್ರಖರತೆ ತೀವ್ರವಾಗಿದೆ. ಈ ಬಾರಿ ಸಮರ್ಪಕ ಮಳೆಯಾಗದೆ ಭೂಮಿಯಲ್ಲಿ ತೇವಾಂಶದ ಕೊರತೆಯಾಗಿದೆ. ಒಂದು ವಾರದ ಹಿಂದೆ 2-3 ದಿನಗಳ ವರೆಗೆ ಸಂಜೆ ಕೊಂಚ ಮಳೆಯಾದರೂ ಯಾವುದೇ ಪ್ರಭಾವ ಬೀರಲಿಲ್ಲ. ಈಗ ಬೆಳಗ್ಗೆ 8 ಗಂಟೆಯಾದರೆ ಸಾಕು ಮಧ್ಯಾಹ್ನದ ಬಿಸಿಲಿನ ಅನುಭವ ಕಾಣಬಹುದಾಗಿದೆ. ಭಾನುವಾರ 38 ಡಿಗ್ರಿ ಸೆಲ್ಸಿಯಸ್‌ ವರೆಗೆ ಬಿಸಿಲಿನ ತಾಪಮಾನವಿತ್ತು. ಏಪ್ರಿಲ್, ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ ಇನ್ನೂ ಏರಿಕೆಯಾಗುವ ನಿರೀಕ್ಷೆಯಿದೆ.

ಕೆರೆಗಳಿಗೆ ಚಿಣ್ಣರ ದಾಂಗುಡಿ

ಬಿಸಿಲಿನ ಪ್ರಖರತೆ ಎಷ್ಟಿದೆ ಎಂದರೆ ಮನೆಯಲ್ಲಿ ಫ್ಯಾನ್‌, ಏಸಿ ಹಾಕಿಕೊಂಡು ಕುಳಿತುಕೊಳ್ಳಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ಪರೀಕ್ಷೆ ಪೂರ್ಣಗೊಂಡಿದ್ದು, ಇಲ್ಲಿನ ಐತಿಹಾಸಿಕ ಉಣಕಲ್ಲ ಕೆರೆಗೆ ನಿತ್ಯವೂ ನೂರಾರು ಮಕ್ಕಳು, ಯುವಕರು, ಸಾರ್ವಜನಿಕರು ಆಗಮಿಸಿ ಈಜಾಡುವ ಮೂಲಕ ಬಿಸಿಲಿನ ದಾಹ ತಣಿಸಿಕೊಳ್ಳುತ್ತಿದ್ದಾರೆ.

ಸೂಕ್ತ ರಕ್ಷಣೆ ಇಲ್ಲ

ಹುಬ್ಬಳ್ಳಿಯ ಪ್ರಮುಖ ಆಕರ್ಷಣೆಗಳಲ್ಲೊಂದಾದ ಉಣಕಲ್ಲ ಕೆರೆಯು ಸುಮಾರು 200 ಎಕರೆ ವಿಸ್ತೀರ್ಣ ಹೊಂದಿದ್ದು, ಹು-ಧಾ ಮಹಾನಗರಕ್ಕೆ ಮುಕುಟದಂತಿದೆ. ಅದಕ್ಕೆ ಹೊಂದಿಕೊಂಡು ಸುಂದರ ಉದ್ಯಾನ ನಿರ್ಮಿಸಲಾಗಿದ್ದು, ಇಲ್ಲಿಗೆ ನಿತ್ಯವೂ ಅದರಲ್ಲೂ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ಮಾರ್ಟ್‌ ಸಿಟಿ ಯೋಜನೆಯ ಅಡಿ ಕೋಟ್ಯಂತರ ರುಪಾಯಿ ಖರ್ಚು ಮಾಡಿ ಕೆರೆ ಅಭಿವೃದ್ಧಿ ಮಾಡಲಾಗಿದೆ. ಆದರೆ, ಅಂದುಕೊಂಡಷ್ಟು ಅಭಿವೃದ್ಧಿಯಾಗಿಲ್ಲ. ಕೆರೆಯ ಎಡಭಾಗದಲ್ಲಿ ತಡೆಗೋಡೆಯಾಗಲಿ, ಸಮರ್ಪಕ ಬೇಲಿಗಳಿಲ್ಲದೇ ಇಲ್ಲದಿರುವುದರಿಂದ ನಿತ್ಯವೂ ನೂರಾರು ಮಕ್ಕಳು ಈ ಕೆರೆಯಲ್ಲಿ ಈಜಾಡುತ್ತಾರೆ. ಕೆರೆಯು ತುಂಬಾ ಆಳವಿದ್ದು, ಏನಾದರೂ ಅನಾಹುತವಾಗುವುದರೊಳಗೆ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಕೆರೆಗೆ ಸಾರ್ವಜನಿಕರು ಪ್ರವೇಶಿದಂತೆ ಕ್ರಮ ಕೈಗೊಳ್ಳುವ ಅನಿವಾರ್ಯತೆ ಇದೆ.

ಜಾನುವಾರುಗಳಿಗೂ ಸ್ನಾನ

ಬಿಸಿಲ ಬೇಗೆಯು ಕೇವಲ ಮನುಷ್ಯನಿಗಷ್ಟೇ ಅಲ್ಲ, ಜಾನುವಾರುಗಳನ್ನು ಹೈರಾಣಾಗಿಸಿದೆ. ಭಾನುವಾರ ಇಲ್ಲಿನ ಉಣಕಲ್ಲಿಗೆ ಈಜಲು ಆಗಮಿಸಿದ್ದ ನೂರಾರು ಯುವಕರು ತಮ್ಮೊಂದಿಗೆ ಎತ್ತು, ಎಮ್ಮೆ, ಕುದುರೆ, ಕುರಿಗಳನ್ನು ಕರೆತಂದು ಕೆರೆಯಲ್ಲಿ ಸ್ನಾನ ಮಾಡಿಸುತ್ತಿರುವುದು ಕಂಡುಬಂದಿತು. ಬೆಳಗ್ಗೆ 11 ಗಂಟೆಗೆ ಕೆರೆಯ ನೀರಿಗಿಳಿದಿದ್ದ ಕುದುರೆ ಹಾಗೂ ಎಮ್ಮೆಗಳು ಸಂಜೆಯ ವರೆಗೂ ನೀರು ಬಿಟ್ಟು ಹೊರಬರಲಿಲ್ಲ. ಹಲವು ಯುವಕರು ತಾವು ತಂದ ಜಾನುವಾರುಗಳಿಗೆ ಕೆರೆಯಲ್ಲಿಯೇ ಸ್ನಾನ ಮಾಡಿಸುವ ಮೂಲಕ ಬಿಸಿಲ ಬೇಗೆಯಿಂದ ಕೆಲಕಾಲ ಮುಕ್ತಿ ದೊರಕುವಂತೆ ಮಾಡಿದರು.ಬಿರುಬಿಸಿಲು

ಕಳೆದ 15 ದಿನಗಳಿಂದ ನಾನು ಕೆರೆಯಲ್ಲಿ ಈಜಲು ಬರುತ್ತಿದ್ದೇನೆ. ಬಿಸಿಲಿನ ಬೇಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮನೆಯಲ್ಲಿ ಕುಳಿತು ಕೆಲಸ ಮಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನಿಂದ ದಣಿವಾರಿಸಿಕೊಳ್ಳಲು ಕೆರೆಗೆ ಬಂದು ಸ್ನಾನ ಮಾಡುತ್ತಿದ್ದೇನೆ.

ಹನುಮಂತ ಗೌಳಿ, ಹುಬ್ಬಳ್ಳಿ ನಿವಾಸಿಕೆರೆಯಲ್ಲಿ ಈಜಾಟಮನೆಯವರಿಗೆ ಯಾರಿಗೂ ಗೊತ್ತಾಗದಂತೆ ಸ್ನೇಹಿತರೊಂದಿಗೆ ಕೆರೆಗೆ ಈಜಲು ಬಂದಿದ್ದೇನೆ. ಒಂದೆರಡು ಗಂಟೆಗಳ ಕಾಲ ಕೆರೆಯಲ್ಲಿ ಈಜಿ ಸ್ನೇಹಿತರೆಲ್ಲ ಮನೆಗೆ ವಾಪಸಾಗುತ್ತೇವೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದೇವೆ.

ಚಿದಾನಂತ, ಮೌನೇಶ, ಕೆರೆಯಲ್ಲಿ ಈಜಲು ಆಗಮಿಸಿದ್ದ ಚಿಣ್ಣರು

Share this article