ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಳಿಗೆ ಹರಾಜು ಗೊಂದಲ: ಘರ್ಷಣೆ

KannadaprabhaNewsNetwork |  
Published : Feb 29, 2024, 02:04 AM IST
ಚಿತ್ರ.1: ಪಂಚಾಯಿತಿ ಸದಸ್ಯ ರಫೀಕ್ ಖಾನ್ ಅಧಿಕಾರಿಗಳೊಂದಿಗೆ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಸುಂಟಿಕೊಪ್ಪ ಗ್ರಾಮ ಪಂಚಾಯತ್‌ ಮಳಿಗೆಗಳ ಹರಾಜು ಗೊಂದಲ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ಪಂಚಾಯಿತಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮುಂದುವರಿದ ಇದು, ಪರ ಮತ್ತು ವಿರೋಧ ಗುಂಪುಗಳಾಗಿ ಬುಧವಾರದ ಸಭೆಯಲ್ಲಿ ಮಾತಿನ ಸಮರ ಸ್ಫೋಟಗೊಂಡಿತು. ಇದರಿಂದಾಗಿ ಪರಿಸ್ಥಿತಿ ಕೈಮೀರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಳೆಯಿತು

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ನಡೆಸಿದ ಮಳಿಗೆ ಹರಾಜು ಪ್ರಕ್ರಿಯೆ ಕಾನೂನು ಬದ್ಧವಾಗಿದ್ದು ಅದರಂತೆ ಮುಂದುವರಿಯುತ್ತೇವೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಮಳಿಗೆ ಹರಾಜು ಕುರಿತಾದ ಆರೋಪ, ಮಾತಿನ ಚಕಮಕಿ, ಅಸಮಾಧಾನದ ಬೆಳವಣಿಗೆಗಳ ಬಳಿಕ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಈ ವೇಳೆ ಸೋಮವಾರಪೇಟೆ ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಹಾಗೂ ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಸುದ್ದಿಗಾರರ ಜೊತೆ ಸುನಿಲ್‌ ಕುಮಾರ್‌ ಮಾತನಾಡಿದರು.

ಪಂಚಾಯಿತಿಯ ಕೆಲವು ಸದಸ್ಯರ ಗೊಂದಲ ಮತ್ತು ಅನಾವಶ್ಯಕವಾದ ಆರೋಪಗಳನ್ನು ಸ್ಪಷ್ಟವಾಗಿ ತಳ್ಳಿಹಾಕುವ ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಹರಾಜು ಪ್ರಕ್ರಿಯೆಯನ್ನು ಕಾನೂನು ಬದ್ಧವಾಗಿ ಮುಂದುವರಿಸಲು ತೀರ್ಮಾನಿಸಲಾಯಿತು. ಹಳಬರು ಮತ್ತು ಹೊಸಬರು ಎಂಬುದು ಹರಾಜು ಪ್ರಕ್ರಿಯೆಯಲ್ಲಿ ಇಲ್ಲ. ಬದಲಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರಿಗೆ ಸಮಾನ ಅವಕಾಶ ಮತ್ತು ಹಕ್ಕುಗಳು ಇರುತ್ತವೆ ಎಂದು ಸುನಿಲ್ ಕುಮಾರ್ ಸ್ಪಷ್ಟವಾಗಿ ನುಡಿದರು. ಪಂಚಾಯಿತಿ ಸದಸ್ಯ ರಫೀಕ್ ಖಾನ್ ಮಾತನಾಡಿ, ಟೆಂಡರ್ ಪ್ರಕ್ರಿಯೇ ಪಾರದರ್ಶಕವಾಗಿಲ್ಲ. ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಮ್ಮ ಮೂಗಿನ ನೇರಕ್ಕೆ ಟೆಂಡರ್ ಪ್ರಕ್ರಿಯೆ ಮಾಡಿದ್ದು, ಇಲ್ಲಿ ಪಂಚಾಯಿತಿಗೆ ನೇರವಾಗಿ ಹಣ ಪಾವತಿಸುವವರು ಬೇಕಾಗಿಲ್ಲ. ಬದಲಾಗಿ ಅಡ್ಡ ದಾರಿಯಲ್ಲಿ ಹಣ ಸಂಪಾದನೆ ಮಾಡಿಕೊಳ್ಳುವವರು ಬೇಕಾಗಿದ್ದಾರೆಂದು ನೇರವಾಗಿ ಆರೋಪಿಸಿದರು.

ಸಾಕಷ್ಟು ಚರ್ಚೆಯ ಬಳಿಕ ತಾಲೂಕು ಕಾರ್ಯನಿರ್ವಹಣಾಧಿಕಾರಿ ಜಯಣ್ಣ ಅವರು, ಈಗಾಗಲೇ ಹರಾಜು ಪ್ರಕ್ರಿಯೆ ಕಾನೂನು ಬದ್ಧವಾಗಿ ಮಾಡಿದ್ದು, ಅದರಂತೆ ಮುಂದುವರಿಯಲಾಗುವುದೆಂದು ಪ್ರಕಟಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮೀನು,ಕೋಳಿ ಮತ್ತು ಕುರಿ ಮಾಂಸ ಮಳಿಗೆಗಳ ತೆರವು ಪ್ರಕ್ರಿಯೆ ರಾಜ್ಯ ಉಚ್ಛನ್ಯಾಯಾಲಯದ ಮುಂದೆ ಇದ್ದು ಈ ಬಗ್ಗೆ ಏನನ್ನೂ ಹೇಳ ಬಯಸುವುದಿಲ್ಲ. ಆದರೆ ನ್ಯಾಯಾಲಯದ ತೀರ್ಮಾನಕ್ಕೆ ಬದ್ಧರಾಗಿರಬೇಕಾಗುತ್ತದೆ ಎಂದು ಪ್ರತಿಕ್ರಿಯಿಸಿದರು.

ಸಭೆಯಲ್ಲಿ ಮಾತಿನ ಸಮರ ಸ್ಫೋಟ: ಬಿಗಿ ಬಂದೋಬಸ್ತು

ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಸರ್ವ ಸದಸ್ಯರ ಸಭೆ ಕರೆದು ಕೋಳಿ, ಕುರಿ ಮೀನು ಮಾಂಸ ಮಳಿಗೆಗಳ ಹರಾಜು ಪ್ರಕ್ರಿಯೆಗೆ ಒಪ್ಪಿಗೆ ಪಡೆದು ಸಾರ್ವಜನಿಕ ಜಾಹೀರಾತು ಮೂಲಕ ಟೆಂಡರ್ ಪ್ರಕ್ರಿಯೆಗೆ 15 ದಿನಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಫೆ.27 ರಂದು ಟೆಂಡರ್ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.

ಬೆಳಗ್ಗಿನಿಂದ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿಗದಿತ ಶುಲ್ಕವನ್ನು ನಿಗದಿತ ನಮೂನೆಯಲ್ಲಿ ಬ್ಯಾಂಕಿಗೆ ಪಾವತಿ ಮಾಡಲು ಹಾಲಿ ಅಂಗಡಿ ಹೊಂದಿರುವ ಕೆಲವು ವ್ಯಾಪಾರಸ್ಥರು ವಿಫಲರಾಗಿದ್ದರು. ಇದೇ ಹೊತ್ತಿಗೆ ಈಗಿನ ವ್ಯಾಪಾರಸ್ಥರ ಪೈಕಿ ಕೆಲವರು ಮತ್ತು ಹೊಸಬರು ನಿಗದಿತ ಶುಲ್ಕಕಟ್ಟಿ ಟೆಂಡರ್ ಪ್ರಕಿಯೆಯಲ್ಲಿ ಪಾಲ್ಗೊಳ್ಳಲು ಆರ್ಹತೆ ಹೊಂದಿದ್ದರು.

ಇದು ಗೊಂದಲಕ್ಕೆ ಕಾರಣವಾಗಿದ್ದು, ಟೆಂಡರ್ ಪ್ರಕ್ರಿಯೆ ನಡೆಯಲು ಬಿಡುವುದಿಲ್ಲ ಎಂದಿದ್ದ ಕೆಲವು ಪಂಚಾಯಿತಿ ಸದಸ್ಯರ ಮಾತನ್ನು ನಂಬಿ ಕೆಲವು ವ್ಯಾಪಾರಸ್ಥರು ಮೋಸ ಹೋಗಿರುವುದು ಬಹಿರಂಗಗೊಂಡಿತ್ತು. ಈ ಹಿನ್ನಲೆಯಲ್ಲಿ ಮಂಗಳವಾರ ಸಂಜೆಯಿಂದಲೇ ಪಂಚಾಯಿತಿ ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ನಡುವೆ ಮಾತಿನ ಚಕಮಕಿ ನಡೆದಿತ್ತು. ಮುಂದುವರಿದ ಇದು, ಪರ ಮತ್ತು ವಿರೋಧ ಗುಂಪುಗಳಾಗಿ ಬುಧವಾರದ ಸಭೆಯಲ್ಲಿ ಮಾತಿನ ಸಮರ ಸ್ಫೋಟಗೊಂಡಿತು. ಇದರಿಂದಾಗಿ ಪರಿಸ್ಥಿತಿ ಕೈಮೀರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಬೆಳೆಯಿತು. ಇದರ ಮೂನ್ಸೂಚನೆ ಅರಿತಿದ್ದ ಗ್ರಾ.ಪಂ.ಅಧ್ಯಕ್ಷರು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬುಧವಾರದ ಸಭೆಗೆ ಪೊಲೀಸ್ ರಕ್ಷಣೆ ಕೋರಿದರು ಎಂದು ತಿಳಿದು ಬಂದಿದೆ.

ಈ ಹಿನ್ನಲೆಯಲ್ಲಿ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್, ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಮತ್ತು ನಾಲ್ವರು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಸಹಿತ ಪೊಲೀಸ್‌ ತಂಡ ಸಭೆಗೆ ಬಂದೋಬಸ್ತು ಕಲ್ಪಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಏ.1ರಿಂದ ರಾಜ್ಯದ ರಾಷ್ಟ್ರೀಯ ಹೆದ್ದಾರಿ ಟೋಲ್‌ ಶುಲ್ಕ ಹೆಚ್ಚಳ
ತೈಲ ಕೊರತೆ ವದಂತಿ: ಖರೀದಿಗೆ ಮುಗಿಬಿದ್ದ ಜನ-ಬಂಕ್‌ಗಳಲ್ಲಿ ಭಾರೀ ರಷ್‌