ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸುಂಟಿಕೊಪ್ಪದ ಆಟೋ ಚಾಲಕರ ಮತ್ತು ಮಾಲೀಕರ ಸಂಘ ಹಾಗೂ ವಾಹನ ಚಾಲಕರ ಸಂಘವು ಇಡೀ ರಾಜ್ಯದಲ್ಲಿ ಒಗ್ಗಟು ಮತ್ತು ಅನ್ಯೋನ್ಯತೆಯಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಹೆಸರು ಮಾಡಿದೆ ಎಂದು ಜಿಲ್ಲಾಡಳಿತದ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಬಣ್ಣಿಸಿದ್ದಾರೆ.ಆಟೋ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ಶುಕ್ರವಾರ ನಡೆದ ಆಯುಧ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮತ್ತೋರ್ವ ಅತಿಥಿ ಜಿ.ಪಂ. ಮಾಜಿ ಸದಸ್ಯ ಬಿ.ಬಿ.ಭಾರತೀಶ್ ಮಾತನಾಡಿ, ಪಕ್ಷಾತೀತ ಮತ್ತು ಜಾತ್ಯತೀತ ನೆಲೆಗಟ್ಟಿನಲ್ಲಿ ಆಯುಧಪೂಜೆ ಮತ್ತು ವಿಜಯದಶಮಿ ಹಬ್ಬಗಳ ಆಚರಣೆ ಈ ವ್ಯಾಪ್ತಿಯಲ್ಲಿದ್ದು, ಮುಂದೆಯೂ ಮುಂದುವರೆಯಬೇಕೆಂದು ಅವರು ಆಶಿಸಿದರು.
ತಮ್ಮ ಬಾಲ್ಯದಲ್ಲಿ ಮೊದಲ ಆಟೋವನ್ನು ನೋಡಿದ ಮತ್ತು 3 ಚಕ್ರಗಳಲ್ಲಿ ಸಂಚರಿಸುವ ಈ ವಾಹನದ ಬಗ್ಗೆ ಸಾರ್ವಜನಿಕ ಅಭಿಪ್ರಾಯಗಳು ವಿಭಿನ್ನವಾಗಿದ್ದವು ಎಂಬುದನ್ನು ಸ್ಮರಿಸಿದ ಅವರು ಕಾಲ ಬದಲಾಗಿದ್ದು, 200ಕ್ಕೂ ಹೆಚ್ಚು ಆಟೋಗಳು ಸುಂಟಿಕೊಪ್ಪದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಆಟೋಗಳು ಬೇಕಾಗಿವೆ, ಅವಶ್ಯಕತೆಗೆ ಅನುಗುಣವಾಗಿ ಆಟೋಗಳು ಕಾರ್ಯಾಚರಿಸಲಿ ಎಂದು ಹೇಳಿದರು.ಗ್ರಾ.ಪಂ. ಅಧ್ಯಕ್ಷ ಪಿ.ಆರ್.ಸುನಿಕುಮಾರ್ ಮಾತನಾಡಿ, ಸಂಘವು ರಕ್ತದಾನ ಶಿಬಿರದಂತಹ ಜೀವ ಉಳಿಸುವ ಶ್ರೇಷ್ಠ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನಾರ್ಹ. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಆಟೋಚಾಲಕರು ಜಾಗರೂಕರಾಗಿ, ಶಿಸ್ತುಬದ್ಧವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಸುಂಟಿಕೊಪ್ಪ ಠಾಣಾಧಿಕಾರಿ ಎಚ್.ವಿ.ಚಂದ್ರಶೇಖರ್ ಮಾತನಾಡಿ, ಆಟೋಚಾಲಕರ ಸಂಘವು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಲು ಮತ್ತು ಯಾವುದೇ ರೀತಿಯ ಜೀವಹಾನಿ ಆಗುವುದನ್ನು ತಪ್ಪಿಸಲು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕೆಂದು ಕರೆ ನೀಡಿದರು.ಸಭಾ ಕಾರ್ಯಕ್ರಮದ ಮೊದಲಿಗೆ ಧರ್ಮಗುರು ಸಿ.ಎಂ. ಹಮೀದ್ ಮೌಲವಿ ಆಶೀರ್ವಚನ ನೀಡಿ, ದೇವರು ಒಬ್ಬರೇ ನಾಮ ಹಲವು. ಮಾನವೀಯ ಮೌಲ್ಯ ಗುಣಗಳು ಅತೀಮುಖ್ಯ ಎಂದರು.ಆಟೋ ಚಾಲಕರ ಸಂಘದ ಕಚೇರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆಯನ್ನು ಗಣೇಶ್ ಭಟ್ ನೇರವೇರಿಸಿದರು.