ಕರ್ನಾಟಕದಲ್ಲಿ ಅಂಚೆ ಕಚೇರಿಗಳು ನಿರ್ವಹಿಸುತ್ತಿರುವ ಮಹತ್ವದ ಪಾತ್ರ, ಹಣಕಾಸು ಒಳಗೊಳ್ಳುವಿಕೆ ಹಾಗೂ ಗ್ರಾಮೀಣ ಸೇವಾ ವಿತರಣೆ ಕುರಿತು ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರಶ್ನೆ ಮಾಡಿದ್ದಾರೆ.

ಶಿವಮೊಗ್ಗ: ಕರ್ನಾಟಕದಲ್ಲಿ ಅಂಚೆ ಕಚೇರಿಗಳು ನಿರ್ವಹಿಸುತ್ತಿರುವ ಮಹತ್ವದ ಪಾತ್ರ, ಹಣಕಾಸು ಒಳಗೊಳ್ಳುವಿಕೆ ಹಾಗೂ ಗ್ರಾಮೀಣ ಸೇವಾ ವಿತರಣೆ ಕುರಿತು ಲೋಕಸಭೆಯಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಪ್ರಶ್ನೆ ಮಾಡಿದ್ದಾರೆ.

ಅಂಚೆ ಕಚೇರಿಗಳ ಮೂಲಕ ಬ್ಯಾಂಕಿಂಗ್, ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್, ಡಿಜಿಟಲ್ ಸೇವೆಗಳು ಹಾಗೂ ಲಾಸ್ಟ್–ಮೈಲ್ ಡೆಲಿವರಿ ಬಲಪಡಿಸುವ ಕುರಿತು ಅವರು ಸರ್ಕಾರದ ಗಮನ ಸೆಳೆದಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕರ್ನಾಟಕದಲ್ಲಿ ಅಂಚೆ ಕಚೇರಿಗಳು ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಹಣಕಾಸು ಒಳಗೊಳ್ಳುವಿಕೆ ಮತ್ತು ಗ್ರಾಮೀಣ ಆರ್ಥಿಕ ಚಟುವಟಿಕೆಗಳನ್ನು ಬಲಪಡಿಸಲಾಗುತ್ತಿದೆ ಎಂದು ಈ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸಂವಹನ ಸಚಿವಾಲಯದ ರಾಜ್ಯ ಸಚಿವ ಡಾ.ಚಂದ್ರಶೇಖರ್ ಪೆಮ್ಮಸಾನಿ ಸದನಕ್ಕೆ ಮಾಹಿತಿ ನೀಡಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 48.5 ಲಕ್ಷಕ್ಕೂ ಹೆಚ್ಚು ಖಾತೆಗಳು ತೆರೆಯಲ್ಪಟ್ಟಿದ್ದು, 28,000 ಕೋಟಿ ರು. ಅಧಿಕ ಮೊತ್ತದ 23 ಕೋಟಿ ಡಿಬಿಟಿ ವ್ಯವಹಾರಗಳು ಅಂಚೆ ಕಚೇರಿಗಳ ಮೂಲಕ ನೆರವೇರಿವೆ ಎಂದು ಸಚಿವರು ವಿವರಿಸಿದರು. ರಾಜ್ಯದ ಎಲ್ಲಾ ಅಂಚೆ ಕಚೇರಿಗಳು ಈಗ ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದ ಅವರು, ಮುಂದುವರಿದು, ಗ್ರಾಮೀಣ ಪ್ರದೇಶಗಳಲ್ಲಿ ಲಾಸ್ಟ್- ಮೈಲ್ ಸೇವೆಗಳನ್ನು ಬಲಪಡಿಸುವ ಉದ್ದೇಶದಿಂದ ಅಂಚೆ ರಸ್ತೆ ಸಾರಿಗೆ ಜಾಲ, ತಂತ್ರಜ್ಞಾನ ಆಧಾರಿತ ವಿತರಣೆ ವ್ಯವಸ್ಥೆ, ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ, ಪಾರ್ಸೆಲ್ ಮತ್ತು ಇ ಕಾಮರ್ಸ್ ಸಂಪರ್ಕ ವಿಸ್ತರಣೆ ಸೇರಿದಂತೆ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.ಕಟ್ಟಡಗಳ ನಿರ್ಮಾಣಕ್ಕೆ ಅನುದಾನಕ್ಕೆ ಮನವಿ:

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಹಲವಾರು ಕಡೆಗಳಲ್ಲಿ ಅಂಚೆ ಕಚೇರಿಗಳು ಪ್ರಸ್ತುತ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಅಗತ್ಯ ಭೂಮಿಯನ್ನು ಗುರುತಿಸಿ ಒದಗಿಸಲಾಗಿದೆ. ಈ ಸ್ಥಳಗಳಲ್ಲಿ ಶಾಶ್ವತ ಅಂಚೆ ಕಚೇರಿ ಕಟ್ಟಡಗಳ ನಿರ್ಮಾಣಕ್ಕಾಗಿ ಅಗತ್ಯ ಅನುದಾನ ಮಂಜೂರು ಮಾಡುವಂತೆ ಕೋರಿ ಸಂಸದ ಬಿ.ವೈ. ರಾಘವೇಂದ್ರ ಅವರು ಕೇಂದ್ರ ಸಂವಹನ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಇಂದಿನ ಅಂಚೆ ಕಚೇರಿಗಳು ಕೇವಲ ಪತ್ರ ವಿತರಣೆಗೆ ಸೀಮಿತವಾಗಿಲ್ಲ. ಬ್ಯಾಂಕಿಂಗ್, ಪಿಂಚಣಿ, ವಿಮೆ, ಡಿಬಿಟಿ ಹಾಗೂ ಹಣಕಾಸು ಸಬಲೀಕರಣದ ಪ್ರಮುಖ ಸಾರ್ವಜನಿಕ ಸೇವಾ ಕೇಂದ್ರಗಳಾಗಿ ರೂಪಾಂತರಗೊಂಡಿವೆ. ಶಿವಮೊಗ್ಗದ ಮಲೆನಾಡು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಅಂಚೆ ಕಚೇರಿ ಕಟ್ಟಡಗಳು ನಿರ್ಮಾಣವಾದರೆ ಜನಸಾಮಾನ್ಯರಿಗೆ ಹಾಗೂ ಅಂಚೆ ಸಿಬ್ಬಂದಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಕೇಂದ್ರ ಸಚಿವಾಲಯವು ಈ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಗಣಿಸುವ ಭರವಸೆ ನೀಡಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ಸಾರ್ವಜನಿಕ ಸೇವೆಗಳ ವಿಸ್ತರಣೆ ಮತ್ತು ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸಹಕಾರ ಮುಂದುವರಿಯಲಿದೆ ಎಂದು ಸಂಸದರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.