ನರಸಿಂಹರಾಜಪುರಡಿ.21 ರಿಂದ 3 ದಿನಗಳ ಕಾಲ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಹಾಗೂ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಅಧ್ಯಕ್ಷೆ ಡಾ.ನೂರಲ್ ಹುದಾ ಕರೆ ನೀಡಿದರು.
- ತಾಲೂಕು ಕಚೇರಿ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವ ಭಾವಿ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಡಿ.21 ರಿಂದ 3 ದಿನಗಳ ಕಾಲ ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಪ್ರತಿಯೊಬ್ಬರೂ ಕೈ ಜೋಡಿಸಿ ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಹಾಗೂ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಅಧ್ಯಕ್ಷೆ ಡಾ.ನೂರಲ್ ಹುದಾ ಕರೆ ನೀಡಿದರು.
ಬುಧವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ನಡೆದ ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಪೂರ್ವ ಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಿ.21 ರಿಂದ 23 ರ ವರೆಗೆ ರಾಷ್ಟ್ರದಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಪೋಲಿಯೋ ಮುಕ್ತ ರಾಷ್ಟ್ರ ಮಾಡಬೇಕು ಎಂದ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. ಎಲ್ಲಾ ಇಲಾಖೆಯವರು ತಮ್ಮ ವಾಹನವನ್ನು ಕಡ್ಡಾಯವಾಗಿ ನೀಡಬೇಕು. ಗ್ರಾಪಂ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಪಲ್ಸ್ ಪೋಲಿಯೋ ಸಿಬ್ಬಂದಿಗೆ ಗ್ರಾಮ ಪಂಚಾಯಿತಿಯವರು ಊಟದ ವ್ಯವಸ್ಥೆ ಮಾಡಬೇಕು. ಹಳ್ಳಿಗಳಲ್ಲಿ ಕಸದ ಗಾಡಿಯಲ್ಲಿ ಪಲ್ಸ್ ಪೋಲಿಯೋ ಪ್ರಚಾರ ಮಾಡಬೇಕು. ಮೆಸ್ಕಾಂ ಇಲಾಖೆ ನಿರಂತರವಾಗಿ ವಿದ್ಯುತ್ ನೀಡಬೇಕು. ಅಂಗನವಾಡಿ ತೆರೆಯಲು ಅನುಮತಿ ನೀಡಬೇಕು. ಶಾಲೆಗಳ ಪ್ರಾರ್ಥನೆ ಗಳಲ್ಲಿ ಪಲ್ಸ್ ಪೋಲಿಯೋ ಬಗ್ಗೆ ಪ್ರಚಾರ ಮಾಡಬೇಕು. ಪಲ್ಸ್ ಪೋಲಿಯೋ ಉದ್ಘಾಟನಾ ಕಾರ್ಯಕ್ರಮಕ್ಕೆ ಜನಪ್ರತಿ ನಿಧಿಗಳನ್ನು ಆಹ್ವಾನಿಸಬೇಕು. ರೋಟರಿ, ಲಯನ್ಸ್, ಜೇಸಿ ಸಂಸ್ಥೆಗಳು ಬೂತ್ ಗಳನ್ನು ದತ್ತು ಪಡೆದು ಸಹಕಾರ ನೀಡಬೇಕು ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ಮಹೇಂದ್ರ ಕಿರೀಟಿ ಮಾತನಾಡಿ, ಪೋಲಿಯೋ ವೈರಸ್ ನಿಂದ ಬರುವ ಕಾಯಿಲೆ ಯಾಗಿದ್ದು ಇದರ ನಿರ್ಮೂಲನೆಗೆ 2014 ರಿಂದ ಪೋಲಿಯೋ ಮುಕ್ತ ಭಾರತ ಎಂಬ ಸರ್ಟಿಫಿಕೇಟ್ ಪಡೆದುಕೊಂಡಿದೆ. ಆದರೂ ನೆರೆಯ ಪಾಕಿಸ್ತಾನ, ಅಫಘಾನಿಸ್ಥಾನದಲ್ಲಿ ಪೋಲಿಯೋ ಪ್ರಕರಣ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಒಂದು ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಸಲಾಗುತ್ತದೆ. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೋ ಬೂತ್ ತೆರೆಯಲಾಗಿದೆ. 5 ವರ್ಷದ ಒಳಗಿನ ಎಲ್ಲಾ ಮಕ್ಕಳನ್ನು ಕರೆತಂದು ಪೋಲಿಯೋ ಲಸಿಕೆ ಹಾಕಿಸಬೇಕು. ಡಿ.21 ರಂದು ಬೂತ್ ಗಳಲ್ಲಿ ಲಸಿಕೆ ಹಾಕಲಾಗುವುದು.ಡಿ. 22 ಹಾಗೂ 23 ರಂದು ಪೋಲಿಯೋ ವ್ಯಾಕ್ಸಿನೇಟರ್ ಗಳು ಮನೆ, ಮನೆಗೆ ಭೇಟಿ ನೀಡಿ ಬಿಟ್ಟು ಹೋಗಿರುವ ಮಕ್ಕಳನ್ನು ಹುಡುಕಿ ಪೋಲಿಯೋ ಹಾಕುವ ಕಾರ್ಯಕ್ರಮ ನಡೆಸಲಾಗುತ್ತದೆ.
ನರಸಿಂಹರಾಜಪುರ ತಾಲೂಕಿನಲ್ಲಿ 97 ಪೋಲಿಯೋ ಬೂತ್ ಇರಲಿದೆ. 2352 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.18,713 ಮನೆಗಳನ್ನು ಗುರುತಿಸಲಾಗಿದೆ. 31 ವಲಸಿಗರ ಕೇತ್ರ ಎಂದು ಗುರುತಿಸಿದ್ದೇವೆ.ಅದರಲ್ಲಿ 249 ಮಕ್ಕಳಿಗೆ ಪೋಲಿಯೋ ಲಸಿಗೆ ಹಾಕಲಾಗುವುದು. ಒಟ್ಟು 388 ವ್ಯಾಕ್ಸಿನೇಟರ್ ಗಳು ಮತ್ತು 21 ಮೇಲ್ವೀಚಾರಕರು ಈ ಕಾರ್ಯದಲ್ಲಿ ಕೆಲಸ ಮಾಡಲಿದ್ದಾರೆ ಎಂದರು.ಜೇಸಿ ಸಂಸ್ಥೆಯಿಂದ ಬಸ್ಸು ಸ್ಟಾಂಡ್ ಲಸಿಕೆ ಕೇಂದ್ರ, ಲಯನ್ಸ್ ಕ್ಲಬ್ ನಿಂದ ಬಿ.ಎಚ್.ಕೈಮರದ ಲಸಿಕಾ ಕೇಂದ್ರವನ್ನು ದತ್ತು ಪಡೆಯಲು ಹಾಗೂ ರೋಟರಿ ಕ್ಲಬ್ ನಿಂದ ಎಲ್ಲಾ ಸಹಕಾರ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಜೆ.ಆಂಟೋನಿ, ರೋಟರಿ ಕ್ಲಬ್ ನಿಯೊಜಿತ ಅಧ್ಯಕ್ಷ ಪಿ.ಎಸ್.ವಿದ್ಯಾನಂದಕುಮಾರ್, ಜೇಸಿ ಸಂಸ್ಥೆ ಅಧ್ಯಕ್ಷ ಆದರ್ಶ ಬಿ ಗೌಡ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಸ್ವಾಗತಿಸಿದರು.