ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆ ರಸ್ತೆ ಕುಸಿತ ಆತಂಕ

KannadaprabhaNewsNetwork | Published : Aug 7, 2024 1:06 AM

ಸಾರಾಂಶ

2018ರ ಆ.16ರಂದು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟ ಹಾಗೂ ಜಲಪ್ರಯಳಯದ ಸಂದರ್ಭದಲ್ಲಿ ಈ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಬರೆ ಕುಸಿತಗೊಂಡಿತು. ಅಂದು ಜಿಲ್ಲಾಡಳಿತದಿಂದ ನೆರೆಹಾವಳಿ ಪರಿಹಾರ ಯೋಜನೆಯಡಿ ಅಪಾಯದ ಅಂಚಿನಲ್ಲಿರುವ ಮನೆ ರಸ್ತೆ ಬರೆ ಕುಸಿತಗಳ ಬಗ್ಗೆ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ ಇಂದಿನವರೆಗೂ ವರದಿಯ ಶಿಫಾರಸ್‌ ಅನುಷ್ಠಾನಗೊಳಿಸದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ವಿನ್ಸೆಂಟ್‌ ಎಂ.ಬಿ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ಪಂಪ್‌ಹೌಸ್ ಬಡಾವಣೆ ರಸ್ತೆ ಕುಸಿಯುವ ಭೀತಿಯಲ್ಲಿದ್ದು, ಈ ಬಗ್ಗೆ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯದ ವಿರುದ್ಧ ನಾಗರಿಕ ವಲಯದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ.

ಸದ್ಯದ ಮಟ್ಟಿಗೆ ಮುಂಗಾರು ಮಳೆ ತೀವ್ರತೆ ತಗ್ಗಿದೆ. ಆದರೆ, 2018ರ ಮಾದರಿಯಲ್ಲಿಯೇ ಈ ಬಾರಿಯೂ ಮಳೆಯ ಪ್ರಮಾಣ ಅಧಿಕಗೊಳ್ಳುವ ಮುನ್ಸೂಚನೆಯಿದೆ. ಈಗಾಗಲೇ ಜಿಲ್ಲಾಡಳಿತ ಭೂಕುಸಿತ ಹಾಗೂ ಮೇಘಾ ಸ್ಫೋಟಗೊಂಡಿದ್ದ ಸ್ಥಳಗಳಲ್ಲಿ ನೆಲೆಸಿರುವ ಮಂದಿಗೆ ಮುನ್ನಚ್ಚರಿಕೆ ನೀಡಲಾಗಿದ್ದು, ಸುರಕ್ಷತೆ ದೃಷ್ಟಿಯಿಂದ ಇಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಆರು ವರ್ಷಗಳ ಇತಿಹಾಸ:

2018ರ ಆ.16ರಂದು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಮೇಘಸ್ಫೋಟ ಹಾಗೂ ಜಲಪ್ರಯಳಯದ ಸಂದರ್ಭದಲ್ಲಿ ಈ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಬರೆ ಕುಸಿತಗೊಂಡಿತು. ಅಂದು ಜಿಲ್ಲಾಡಳಿತದಿಂದ ನೆರೆಹಾವಳಿ ಪರಿಹಾರ ಯೋಜನೆಯಡಿ ಅಪಾಯದ ಅಂಚಿನಲ್ಲಿರುವ ಮನೆ ರಸ್ತೆ ಬರೆ ಕುಸಿತಗಳ ಬಗ್ಗೆ ಸಮೀಕ್ಷೆ ನಡೆಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ ಇಂದಿನವರೆಗೂ ವರದಿಯ ಶಿಫಾರಸ್‌ ಅನುಷ್ಠಾನಗೊಳಿಸದೇ ಇರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿ ಅಂದಾಜು 200ಕ್ಕೂ ಮಿಕ್ಕಿ ವಾಸದ ಮನೆಗಳಿವೆ. ಖಾಸಗಿ ವ್ಯಕ್ತಿಯೊಬ್ಬರು ತಮ್ಮ ನಿವೇಶನದಲ್ಲಿ ಅವೈಜ್ಞಾನಿಕವಾಗಿ ಮಣ್ಣು ತೆಗೆದು ಸಮತಟ್ಟುಗೊಳಿಸಿರುವ ಬಗ್ಗೆ ಆರೋಪ ಕೇಳಿ ಬಂದಿದ್ದು, ಪಂಚಾಯಿತಿಗೆ ನಿವೇಶನ ಮಾಲೀಕರ ವಿರುದ್ಧ ದೂರು ಸಲ್ಲಿಸಲಾಗಿದೆ. ಇದರ ಅಂಚಿನಲ್ಲಿ ಮೋರಿಯಲ್ಲಿ ನಿತ್ಯ ನೀರು ಹರಿಯುತ್ತಿದೆ. ಅಧಿಕ ಮಳೆಯ ನೀರು ಇಲ್ಲಿ ಹರಿಯುವುದ್ದರಿಂದ ಮಣ್ಣು ಸಡಿಲಗೊಂಡು ಮತ್ತಷ್ಟು ಭೂಕುಸಿತಗೊಂಡಲ್ಲಿ ಈ ಬಡಾವಣೆಗೆ ತೆರಳುವ ಮುಖ್ಯ ರಸ್ತೆಯೇ ಕಡಿತಗೊಳ್ಳುವ ಅತಂಕ ಈ ಭಾಗದಲ್ಲಿ ನೆಲೆಸಿದೆ.

ಈ ಬಡಾವಣೆಯಲ್ಲಿ ವೃದ್ಧರು, ರೋಗಿಗಳು ಹಾಗೂ ಗರ್ಭಿಣಿಯರು ಇಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಆರೋಗ್ಯ ಸಮಸ್ಯೆ ಉಂಟಾದಲ್ಲಿ ವಾಹನ ಸಂಚರಿಸಲಾಗದೆ ಅವರನ್ನು ಹೊತತೊಯ್ಯುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಈ ರಸ್ತೆ ಮೇಲ್ಭಾಗದಲ್ಲಿ ಕೆರೆ ಇದ್ದ ಜಾಗಕ್ಕೆ ಮಣ್ಣು ತುಂಬಿಸಿ ಕಟ್ಟಡ ನಿರ್ಮಿಸಲಾಗಿದೆ ಭೂಕುಸಿತಗೊಂಡರೆ ಅಂಗನವಾಡಿ ಕೇಂದ್ರಕ್ಕೆ ಅಪಾಯವಿದೆ. ಇದರ ಅಂಚಿನಲ್ಲಿಯೇ ಹತ್ತಾರು ವಾಸದ ಮನೆಗಳಿದ್ದು ಇವುಗಳಿಗೂ ಅಪಾಯದ ಭೀತಿಯಿದೆ.

ಕಂದಾಯ ಇಲಾಖೆಯ ಹಿಂಭಾಗದಲ್ಲಿರುವ ವಸತಿಗೃಹಗಳ ಸಮೀಪದಲ್ಲೂ ಬರೆ ಕುಸಿತ ಉಂಟಾಗಿದ್ದು, 2018ರಲ್ಲಿ ಸಂಬಂಧಿಸಿದ ಇಲಾಖೆ ದೂರು ನೀಡಲಾಗಿದ್ದರೂ ಸಹ ಇಲ್ಲಿ ಅಗತ್ಯ ಕ್ರಮಗಳು ಜರುಗಿಲ್ಲ.

ಮುಂಜಾಗ್ರತಾ ಕ್ರಮಕ್ಕೆ ಆಗ್ರಹ:

ಜೂನ್ ಜುಲೈ ತಿಂಗಳಿನಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದ್ದು, ಜಿಲ್ಲೆಯಾದ್ಯಂತ ಭೂಕುಸಿತ, ಪ್ರವಾಹ ಸಹಿತ ಅಪಾರ ಆಸ್ತಿ ನಷ್ಟ ಉಂಟಾಗಿದೆ. ಮುಖ್ಯಮಂತ್ರಿಯಿಂದ ಹಿಡಿದು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಜಿಲ್ಲೆಗೆ ಭೇಟಿ ನೀಡಿದ್ದು, ಪರಿಹಾರ ಮತ್ತು ಮುಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ಸಂಸತ್ ಸದಸ್ಯರು ಸಹಿತ ಮುಖಂಡರು ಜಿಲ್ಲೆಗೆ ಭೇಟಿ ನೀಡಿದ್ದಾರೆ. ಈಗಾಗಲೇ ವರದಿಯಾಗಿರುವಂತೆ ಜಿಲ್ಲಾಧಿಕಾರಿ ವಿಡಿಯೋ ಸಂವಾದದ ಮೂಲಕ ತಾಲೂಕು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಭಾರಿ ಮಳೆಯಾಗುವ ಮುನ್ಸೂಚನೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸ್ಪಷ್ಟನಿರ್ದೇಶನಗಳನ್ನು ನೀಡಿದ್ದಾರೆ. ದುರಾದೃಷ್ಟವಶತ್ ಸುಂಟಿಕೊಪ್ಪದ ಪಂಪ್ ಹೌಸ್ ಬಡಾವಣೆಯಲ್ಲಿ ಯಾವ ಮುನ್ಸೂಚನೆಗಳು ಪಾಲನೆಯಾದಂತಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ 2018ರಲ್ಲಿ ಸಂಭವಿಸಿದ ಭೂಕುಸಿತದ ಪರಿಹಾರ ಕಾಮಗಾರಿ ಕೆಲಸಗಳನ್ನು ಇಲ್ಲಿಯವರೆಗೆ ನಿರ್ವಹಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತುಕೊಂಡು ಕಾಮಗಾರಿ ನಿರ್ವಹಿಸುವಲ್ಲಿ ಮುಂದಾಗಬೇಕಿದೆ.

..........................ಭೂಕುಸಿತ ಪರಿಹಾರ ಕಾಮಗಾರಿ ಕುರಿತಂತೆ ಕಳೆದ 4 ವರ್ಷಗಳಿಂದ ಸಂಬಂಧಿಸಿದವರಿಗೆ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೆ ಈ ಕುರಿತು ಯಾವುದೇ ಕ್ರಮ ಆಗಿಲ್ಲದಿರುವುದು ದುರಾದೃಷ್ಟಕರ. ಮುಂಬರುವ ದಿನಗಳು ಮತ್ತಷ್ಟು ಮಳೆಯಾಗುವ ಸೂಚನೆಗಳು ಬಂದಿವೆ ಅನಾಹುತ ಸಂಭವಿಸುವ ಮೊದಲು ಸಂಬಂಧಿಸಿದವರು ಎಚ್ಚೆತುಕೊಳ್ಳಬೇಕೆಂಬುದು ನಮ್ಮ ಬೇಡಿಕೆ.

-ಬಿ.ಎಂ.ಸುರೇಶ್‌, ಸುಂಟಿಕೊಪ್ಪ ಗ್ರೇಡ್ 1 ಗ್ರಾ.ಪಂ. ಸದಸ್ಯ.

........................ ಸುಂಟಿಕೊಪ್ಪ ಹಲವಾರು ಬಡಾವಣೆಗಳಲ್ಲಿ ಇದೇ ಸಮಸ್ಯೆಯಿದ್ದು ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಗಮನ ಸೆಳೆದು ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಿ, ಅಂದಾಜು ಪಟ್ಟಿ ಸಹಿತ ಸಮಸ್ಯೆ ಗಂಭೀರತೆಯ ಮಾಹಿತಿ ನೀಡಿದರೂ ಇಲಾಖೆಗಳಿಂದ ಅನುದಾನ ಸ್ಪಂದನೆ ದೊರೆಯದೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗುವಂತಾಗಿದೆ.

-ಪಿ.ಆರ್‌.ಸುನಿಲ್‌ ಕುಮಾರ್‌, ಸುಂಟಿಕೊಪ್ಪ ಗ್ರೇಡ್ 1 ಗ್ರಾ.ಪಂ.ಅಧ್ಯಕ್ಷ.

............................

ಈಗಾಗಲೇ ಸ್ಥಳ ಪರಿಶೀಲನೆ ಮಾಡಲಾಗಿದ್ದು, ಅಗತ್ಯ ಮಾಹಿಗಳೊಂದಿಗೆ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಬುಧವಾರ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿ ಅವಶ್ಯಕ ಕಾಮಗಾರಿಗೆ ಚಾಲನೆ ನೀಡಲಾಗುವುದು.

-ಫಯಾಜ್‌, ಜಿ.ಪಂ. ಕಿರಿಯ ಅಭಿಯಂತರ.

Share this article