ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪಸುಂಟಿಕೊಪ್ಪದಿಂದ ಸೋಮವಾರಪೇಟೆ ಮೂಲಕ ಹಿರಿಸಾವೆ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಗುಂಡಿಗಳದ್ದೇ ದರ್ಬಾರು.
ಕಂಟಕಪ್ರಾಯವಾಗುತ್ತಿರುವ ರಾಜ್ಯ ಹೆದ್ದಾರಿ ದುರಸ್ತಿಗೆ ಸಂಬಂಧಿಸಿ ಸಂಬಂಧಿಸಿದ ಇಲಾಖೆ ಮುಂದಾಗುವ ಮೂಲಕ ಭಾರಿ ಅನಾಹುತ ತಪ್ಪಿಸುವಂತೆ ವಾಹನ ಚಾಲಕರು ಒತ್ತಾಯಿಸಿದ್ದಾರೆ.ಈ ರಸ್ತೆಯಲ್ಲಿ ನಿತ್ಯವೂ ಪ್ರವಾಸಿಗರ ನೂರಾರು ಸಣ್ಣ ಮತ್ತು ಮಾದ್ಯಮ ಗಾತ್ರದ ವಾಹನ ಹಾಗೂ ದ್ವಿಚಕ್ರ ವಾಹನಗಳು, ಭಾರಿ ಸರಕು ಸಾಗಾಣಿಕೆ ವಾಹನಗಳು ಸಂಚರಿಸುತ್ತಾ ಇರುತ್ತವೆ.
ಸುಂಟಿಕೊಪ್ಪದಿಂದ ಮಾದಾಪುರದವರೆಗೂ 10 ಸಂಪರ್ಕ ರಸ್ತೆಗಳಲ್ಲಿ ಅಂದಾಜು 50 ಮಿಕ್ಕಿದ ಕಡೆಗಳಲ್ಲಿ ಭಾರಿ ಗಾತ್ರದ ಹೊಂಡಗಳಾಗಿವೆ. ಇಲ್ಲಿ ವಾಹನಗಳನ್ನು ಕೊಂಚ ವೇಗವಾಗಿ ಚಲಾಯಿಸಿದರೆ, ಅಪಘಾತಗಳ ಕೇಂದ್ರ ಒಂದೆಡೆಯಾದರೆ, ದ್ವಿಚಕ್ರ ವಾಹನಗಳ ಸವಾರರು ಮೈ ಮರೆತು ಚಲಾಯಿಸಿದರೆ ಗುಂಡಿಗಳಿಗೆ ಬಿದ್ದು ಅನಾಹುತ ಆಗುವುದು ಖಚಿತ.ಕೆಲವು ವರ್ಷಗಳ ಹಿಂದೆ ಈ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಆದರೆ, ಬಳಿಕ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದ್ದು, ರಸ್ತೆಯಲ್ಲಿ ಭಾರಿ ಗಾತ್ರದ ಹೊಂಡಗಳಾಗಿದ್ದು, ದ್ವಿಚಕ್ರ ವಾಹಗಳಲ್ಲಿ ಸಂಚರಿಸುವಾಗ ಅದೋಷ್ಟು ಮಂದಿ ಸವಾರರು ಗುಂಡಿಯ ಅರಿವು ಇಲ್ಲದ ಕಾರಣ ಗುಂಡಿಗಳಲ್ಲಿ ಬಿದ್ದು ಕೈ ಕಾಲು ಮುರಿದುಕೊಂಡು ಚಿಕಿತ್ಸೆಗೆ ದಾಖಲಾಗಿದ್ದಾರೆ. ಶಾಶ್ವತ ಅಂಗವಿಕಲತೆಗೆ ಒಳಗಾದ ಪ್ರಕರಣಗಳೂ ಇವೆ.
ಮಾದಾಪುರ, ಸುಂಟಿಕೊಪ್ಪ, ಕೊಡಗರಹಳ್ಳಿ, ಕುಶಾಲನಗರಕ್ಕೆ ಈ ಭಾಗದಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಇದೇ ಗುಂಡಿ ಬಿದ್ದ ರಸ್ತೆಯಲ್ಲಿ ಸಂಚರಿಸಬೇಕಾಗಿದೆ.ಸುಂಟಿಕೊಪ್ಪ, ಮಾದಾಪುರ ಹಾಗೂ ಸೋಮವಾರಪೇಟೆ ರಸ್ತೆಯಲ್ಲಿ ಹಲವು ಪ್ರವಾಸಿತಾಣಗಳಿದ್ದು ಶನಿವಾರ, ಭಾನುವಾರಗಳಲ್ಲಿ ನಿತ್ಯ ನೂರಾರು ದ್ವಿಚಕ್ರ ವಾಹನ ಹಾಗೂ ಲಘುವಾಹನಗಳಲ್ಲಿ ಈ ಭಾಗದಿಂದಲೇ ಸಂಚರಿಸುತ್ತಿರುತ್ತಾರೆ.
ಈ ಭಾಗದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಮಧ್ಯಮ ವರ್ಗಕ್ಕೆ ಸೇರಿದ ಕೂಲಿ ಕಾರ್ಮಿಕರು ನೆಲೆಸಿದ್ದಾರೆ. ಈ ಭಾಗದಲ್ಲಿ ನಿಗದಿತ ಸಮಯದಲ್ಲಿ ನಿತ್ಯ 6 ಖಾಸಗಿ ಬಸ್ ಸಂಚಾರ ಹೊರತುಪಡಿಸಿದರೆ ಮತ್ತೆ ಇನ್ನಿತರ ಸಮಯದಲ್ಲಿ ಬಾಡಿಗೆಗೆ ವಾಹನಗಳಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಹೆಚ್ಚಾಗಿದೆ. ಬಾಡಿಗೆ ವಾಹನದವರು ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣಗೊಂಡಿದೆ.ಈ ರಸ್ತೆಯಲ್ಲಿ ವಾಹನಗಳು ಸಂಚರಿಸಿದರೆ ವಾಹನಗಳು ದುರಸ್ತಿಗೀಡಾಗುತ್ತವೆ. ಗುಂಡಿ ತಪ್ಪಿಸುವ ಸಂದರ್ಭ ಕೊಂಚ ಎಚ್ಚರ ತಪ್ಪಿದರೂ ಅಪಘಾತಗಳು ಸಂಭವಿಸಬಹುದೆಂದು ಬಾಡಿಗೆ ವಾಹನ ಚಾಲಕರು ಅಳಲು ತೋಡಿಕೊಳ್ಳುತ್ತಾರೆ.
.....................ಸುಂಟಿಕೊಪ್ಪ-ಮಾದಾಪುರ ರಸ್ತೆಯು ಬಹುಪಾಲು ಗುಂಡಿಗಳಿಂದ ಕೂಡಿದ್ದು, ಈ ರಸ್ತೆಯಲ್ಲಿ ವಾಹನ ಚಲಾಯಿಸುವುದರಿಂದ ವಾಹನಗಳು ಆಗಿಂದಾಗೆ ದುರಸ್ತಿಗೀಡಾಗುತ್ತಿದೆ. ಇದನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ಚಾಲಕರು ಇಲ್ಲಿ ವಾಹನ ಚಲಾಯಿಸಲು ಹಿಂದೇಟು ಹಾಕುವಂತಾಗಿದೆ. ಸಂಬಂಧಿಸಿದವರು ತಕ್ಷಣ ರಸ್ತೆ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು.
-ಕಿಟ್ಟಣ್ಣ ರೈ, ಸುಂಟಿಕೊಪ್ಪ ವಾಹನ ಚಾಲಕರ ಸಂಘ ಅಧ್ಯಕ್ಷ...................ಸುಂಟಿಕೊಪ್ಪ ಮಾದಾಪುರ 10 ಕಿ.ಮೀ. ಅಂತರ ಹೊಂದಿದ್ದು ಈ ಭಾಗದಲ್ಲಿ ನಿಗದಿತ ಸಮಯದಲ್ಲಿ ಖಾಸಗಿ ಬಸ್ ಹಾಗೂ ಒಂದು ಸರ್ಕಾರಿ ಬಸ್ ಬೆಳಗ್ಗೆ ಹಾಗೂ ಸಂಜೆ ಮಾತ್ರ ಸಂಚರಿಸುತ್ತದೆ. ಆದುದರಿಂದ ಇತರ ಹೊತ್ತಿನಲ್ಲಿ ಈ ಭಾಗದ ನಿವಾಸಿಗಳು ಆಟೋರಿಕ್ಷಾ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳಬೇಕಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳು ದುರಸ್ತಿಗೀಡಾಗುವುದು ಹಾಗೂ ಅಪಘಾತಕ್ಕೊಳಗಾಗುವ ಹಿನ್ನೆಲೆಯಲ್ಲಿ ಚಾಲಕರು ಇಲ್ಲಿ ಸಂಚರಿಸಲು ಒಪ್ಪುತ್ತಿಲ್ಲ.
-ಶರೀಫ್, ಆಟೋರಿಕ್ಷಾ ಚಾಲಕರ ಸಂಘದ ಮಾಜಿ ಅಧ್ಯಕ್ಷ........................
ಸುಂಟಿಕೊಪ್ಪ ಮಾದಾಪುರ ರಸ್ತೆಯ ಗುಂಡಿ ಸಮಸ್ಯೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಧಿಕಾರಿಗಳು ದುರಸ್ತಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.-ಪ್ರಸಾದ್ ಕುಟ್ಟಪ್ಪ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ.