ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಚುನಾವಣಾ ಆಯೋಗದ ನೀತಿ ನಿಯಮಗಳಿಗೆ ಅನುಸಾರವಾಗಿ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಅಂಗಡಿ, ಹೊಟೇಲ್, ವ್ಯಾಪಾರ, ವಾಹನ ನಿಲುಗಡೆ ಮತ್ತು ಗುಂಪು ಓಡಾಟ ನಿರ್ಬಂಧಿಸಲಾಗಿತ್ತು.
ಆದರೆ ಈ ನಿರ್ಬಂಧಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಯಾಕೆಂದರೆ ಹಿರಿಯ ನಾಗರೀಕರು ವಿಕಲಚೇತನರು, ಅನಾರೋಗ್ಯ ಪೀಡಿತರು ವಾಹನಗಳಲ್ಲಿ ಬಂದ ಸಂದರ್ಭ ಅವರನ್ನೂ ಮತಗಟ್ಟೆಯ ಗೇಟಿನ ಮುಂಭಾಗ ತಡೆದು ಅಲ್ಲಿಂದಲ್ಲೇ ಮತಗಟ್ಟೆಗೆ ಹೋಗುವಂತೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಒತ್ತಾಯಿಸುತ್ತಿದ್ದು ಕಂಡು ಬಂತು. ಕೇವಲ ಬೆರಳೆಣಿಕೆಯ ವ್ಹೀಲ್‌ಚೇರ್ ಇರಿಸಿದ್ದು 3 ಸಾವಿರಕ್ಕೂ ಮಿಕ್ಕಿ ಮತದಾರರನ್ನು ಹೊಂದಿರುವ 4 ಮತ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಹಾಗೂ ಅನಾರೋಗ್ಯ ಪೀಡಿತರು ಸಂಕಷ್ಟಕ್ಕೆ ಒಳಗಾಗಿದ್ದು ಕಂಡು ಬಂತು.ವಿಶೇಷವಾಗಿ ಹೊರ ರಾಜ್ಯದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಹಿನ್ನಲೆಯಲ್ಲಿ ಭಾಷೆ ಪರಿಸರ ತಿಳಿಯದ ಅವರಿಂದ ಸಂವಹನ ಸಮಸ್ಯೆಯಾಯಿತು ಎಂಬ ಆರೋಪ ಕೇಳಿ ಬಂತು.
ಸುಂಟಿಕೊಪ್ಪದ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 10 ಗಂಟೆಯವರೆಗೆ ನಿಧಾನಗತಿಯಲ್ಲಿ ಸಾಗಿದ ಮತದಾನ ನಂತರ ಬಿರುಸುಗೊಂಡಿತ್ತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಬಿರುಸಿನ ಮತದಾನ ನಡೆಯಿತು.
ಮೊದಲ ಬಾರಿ ಮತ ಚಲಾಯಿಸಿದ ಯುವಕ ಯುವತಿಯರ ಮುಖದಲ್ಲಿ ಸಂತೋಷದ ನಗೆ ಮೂಡಿದ್ದು ವಿಶೇಷವಾಗಿತ್ತು.
--------
ತನ್ನ ಅನುಭವ ಹಂಚಿಕೊಂಡ ಅವರು, ದೇಶವು ನಮಗೆ ಮತದಾನದ ಹಕ್ಕನ್ನು ನೀಡಿದ್ದು ಅದನ್ನು ಚಲಾಯಿಸುವ ದೇಶದ ಉನ್ನತಿಗೆ ಅಳಿಲು ಸೇವೆಯಾಗಲಿದೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಮತದಾನದ ಹಬ್ಬವನ್ನು ಆಚರಿಸುವಂತಾಗಬೇಕೆಂದು ಹೇಳಿದರು.