ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ರಸ್ತೆ ಗುಂಡಿಗಳು ದಿನ ನಿತ್ಯ ಕಳೆಯುತ್ತಿದ್ದಂತೆ ದೊಡ್ಡದಾಗುತ್ತಿದೆ. ಗುಂಡಿ ತಪ್ಪಿಸುವ ಪ್ರಯತ್ನದಲ್ಲಿ ಪಾದಚಾರಿಗಳಿಗೂ ಅಪಾಯ ತಪ್ಪಿದಲ್ಲ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು. ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹೋಬಳಿ ಕೇಂದ್ರವಾಗಿರುವ ಸುಂಟಿಕೊಪ್ಪ ಪಟ್ಟಣದಲ್ಲಿ ಕಾರ್ಯಾಚರಿಸುತ್ತಿರುವ ನಾಡಕಚೇರಿ, ರೈತ ಸಂಪರ್ಕ ಕೇಂದ್ರ ಈ ಭಾಗದಲ್ಲಿ ಕಾರ್ಯಾಚರಿಸುತ್ತಿದ್ದು ನಿತ್ಯ ನೂರಾರು ಮಂದಿ ಈ ಎರಡು ಕಚೇರಿಗಳಿಗೆ ಭೇಟಿ ನೀಡುತ್ತಿರುತ್ತಾರೆ. ಈ ರಸ್ತೆಯು ಏರು ಹಾದಿಯಾಗಿದ್ದು ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ತುಂಬಾ ಸಂಕಷ್ಟ ತಂದೊಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದಲ್ಲಿ ಪ್ರಾಣಪಾಯವಾಗುವ ಎಲ್ಲ ಸಾಧ್ಯತೆಗಳಿದ್ದು ಅಪಾಯ ಸಂಭವಿಸುವ ಮುನ್ನ ಸಂಬಂಧಿಸಿದವರು ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ಕೆಲಸ ದೇವರ ಕೆಲಸ ಎಂಬ ಹಿನ್ನೆಲೆಯಲ್ಲಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ವಿಶೇಷವಾಗಿ ಹಿರಿಯ ನಾಗರಿಕರ ಆಗ್ರಹವಾಗಿದೆ.