ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿರುವ ಹಾವೇರಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯವಿದೆ. ಹಾವೇರಿಯಲ್ಲಿ ಸೂಪರ್ ಸ್ಪೆಷಾಲಿಟಿ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆಯನ್ನೂ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಹಾವೇರಿ ಮೆಡಿಕಲ್ ಕಾಲೇಜು ಬಹಳ ಹಿಂದೆಯೇ ಆಗಬೇಕಿತ್ತು. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೇ ಈ ಕಾಲೇಜು ಘೋಷಿಸಿದ್ದೆ. ಕಾರಣಾಂತರಗಳಿಂದ ಗುದ್ದಲಿಪೂಜೆ ಮಾಡಲಾಗಲಿಲ್ಲ. ಪ್ರತಿ ಜಿಲ್ಲೆಯಲ್ಲಿ ಒಂದು ಮೆಡಿಕಲ್ ಕಾಲೇಜ್ ಮಾಡಬೇಕು ಎಂದು ನಾನು ಘೋಷಿಸಿದ್ದೆ. ಹಾವೇರಿ ಜಿಲ್ಲೆಯನ್ನು ಮಾದರಿಯಾಗಿ ಮಾಡುವ ಪ್ರಯತ್ನವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಭರವಸೆ ನೀಡಿದರು.
ಮನುಷ್ಯ ಸಮಾಜ ನಿರ್ಮಾಣ ಆಗಬೇಕು. ಕಂದಾಚಾರ, ಮೌಢ್ಯಗಳು ತೊಲಗಬೇಕು. ಯಾವುದೇ ಧರ್ಮ ಇರಲಿ, ಪ್ರೀತಿ ಮಾಡಿ ಎನ್ನುತ್ತದೆಯೇ ಹೊರತು ದ್ವೇಷ ಮಾಡಿ ಎನ್ನುವುದಿಲ್ಲ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ಸರ್ವಜ್ಞ, ನಾರಾಯಣ ಗುರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಮ್ಮ ಸರ್ಕಾರ ನಡೆಯುತ್ತಿದೆ ಎಂದರು.ರಾಜ್ಯದಲ್ಲಿ ಈಗ ೨೨ ಸರ್ಕಾರಿ ಮೆಡಿಕಲ್ ಕಾಲೇಜ್ ಇವೆ. ಎಲ್ಲೆಲ್ಲಿ ಇಲ್ಲವೋ ಅಲ್ಲಿ ಮೆಡಿಕಲ್ ಕಾಲೇಜು ಮಾಡುತ್ತೇವೆ. ನಮ್ಮ ಸಮಾಜದಲ್ಲಿ ಬಡವರು ಹೆಚ್ಚಾಗಿದ್ದಾರೆ. ಅವರೆಲ್ಲರೂ ಸರ್ಕಾರಿ ಆಸ್ಪತ್ರೆಯನ್ನೇ ನಂಬಿದ್ದಾರೆ. ಹಾಗಾಗಿ, ಪ್ರತಿ ಜಿಲ್ಲೆಯಲ್ಲೂ ಮೆಡಿಕಲ್ ಕಾಲೇಜ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಕ್ಯಾನ್ಸರ್ ಆಸ್ಪತ್ರೆ ಅಗತ್ಯವಿದ್ದು, ಅದನ್ನು ನಾವು ಮಾಡುತ್ತೇವೆ ಎಂದರು.
ಸರ್ಕಾರ ದಿವಾಳಿಯಾಗಿಲ್ಲ: ನಮ್ಮ ಸರ್ಕಾರ ಯಾವುದೆ ತಾರತಮ್ಯ ಇಲ್ಲದೇ ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಹಾಗಾಗಿ, ಎಲ್ಲ ಧರ್ಮ, ಜಾತಿಯ ಬಡವರಿಗೆ ಗ್ಯಾರಂಟಿ ಜಾರಿಗೊಳಿಸಿದ್ದೇವೆ. ಕಟ್ಟಕಡೆಯ ವ್ಯಕ್ತಿಗೂ ಮೂಲ ಸೌಲಭ್ಯ ಸಿಗಬೇಕು. ಆಗ ಮಾತ್ರ ಜಾತ್ಯತೀತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ನಮಗೆ ಎಷ್ಟೇ ಟೀಕೆಗಳು ಬರಬಹುದು. ಗ್ಯಾರಂಟಿ ಯೋಜನೆ ಜಾರಿಗೊಳಿಸಿದರೆ ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗುತ್ತದೆ ಎಂದರು.ನಮ್ಮ ಸರ್ಕಾರ ಎರಡೂವರೆ ವರ್ಷ ಆಗಿದೆ. ₹೧.೧೨ ಲಕ್ಷ ಕೋಟಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಿದ್ದೇವೆ. ಆದರೂ ನಮ್ಮ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿಲ್ಲ. ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ ₹೫೨ ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಜನರಲ್ಲಿ ತಪ್ಪು ಕಲ್ಪನೆ ಬಿಂಬಿಸುವ ಕೆಲಸ ಆಗಬಾರದು ಎಂದರು.
ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ನೀರಾವರಿ ಯೋಜನೆ ಜಾರಿಯಾಗಬೇಕಿದೆ. ಮಹದಾಯಿ ಯೋಜನೆ ಹಾಗೂ ಕೃಷ್ಣಾ ಮೇಲ್ದಂಡೆ ಮೂರನೇ ಹಂತ ಜಾರಿ ಆಗಬೇಕಿದೆ. ಕೃಷ್ಣ ಮೇಲ್ದಂಡೆ ಯೋಜನೆ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ಇದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಗತ್ಯವಿದ್ದರೆ ಸುಪ್ರೀಂ ಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ ಕೇಸ್ ಹಿಂದಕ್ಕೆ ಪಡೆಯುವ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆ ಮುಗಿಯದಿದ್ದರೆ ನಮಗೆ ಬರಬೇಕಿರುವ ೧೭೩ ಟಿಎಂಸಿ ನೀರು ಬಳಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಿಯೋಗದಲ್ಲಿ ತೆರಳಿ ಕೇಂದ್ರ ಸರ್ಕಾರವನ್ನು ಒತ್ತಾಯಿಸೋಣ ಎಂದು ಹೇಳಿದರು.ಬೇಡ್ತಿ- ವರದಾ ಯೋಜನೆಗೆ ಸಹಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮಾತನಾಡಿ, ಬೇಡ್ತಿ- ವರದಾ ನದಿ ಜೋಡಣೆ ಯೋಜನೆಗೆ ಕೇಂದ್ರದೊಂದಿಗೆ ಎಂಒಯುಗೆ ಸಹಿ ಮಾಡಿ ಬಂದಿದ್ದೇನೆ. ಮಹದಾಯಿ ಮತ್ತು ಕೃಷ್ಣಾ ಯೋಜನೆ ಕೂಡ ಆಗಬೇಕಿದೆ. ಅದಕ್ಕಾಗಿ ಬಸವರಾಜ ಬೊಮ್ಮಾಯಿ ಮುಂದಾಳತ್ವದಲ್ಲಿ ಪ್ರಧಾನಿಗಳನ್ನು ಭೇಟಿಯಾಗಲು ಸಮಯ ನಿಗದಿ ಮಾಡಲಿ. ಕೇಸ್ ಇದ್ದರೆ ಅದನ್ನು ವಾಪಸ್ ತೆಗೆದುಕೊಳ್ಳೋಣ. ಎರಡು ವರ್ಷಗಳ ಆನಂತರ ಬೇಕಾದರೆ ರಾಜಕಾರಣ ಮಾಡೋಣ. ಮಹದಾಯಿ, ಕೃಷ್ಣಾ, ಕಾವೇರಿ ವಿಚಾರದಲ್ಲಿ ಎಲ್ಲ ಪಕ್ಷದವರು ನಮಗೆ ಕೇಂದ್ರದಲ್ಲಿ ಸಹಕಾರ ಮಾಡುತ್ತಿಲ್ಲ ಎಂದು ಹೇಳಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ, ಕಾನೂನು ಸಚಿವ ಎಚ್.ಕೆ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಇದ್ದರು.