ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಅವರ ಆತ್ಮಹತ್ಯೆಗೆ ಕಾರಣರಾದ ಅಧಿಕಾರಿಗಳು ಮತ್ತು ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ಬುಧವಾರ ಶಿವಮೊಗ್ಗ ನಗರ ಬಿಜೆಪಿ ವತಿಯಿಂದ ಶಿವಪ್ಪನಾಯಕ ವೃತ್ತದಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಭಟನೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳು ಮತ್ತು ಸಂಕಷ್ಟದಲ್ಲಿರುವ ಅತ್ಯಂತ ಕೆಳವರ್ಗದ ಜನರಿಗೆ ಮೀಸಲಿಟ್ಟ ₹187 ಕೋಟಿ ಹಣದಲ್ಲಿ ₹87 ಕೋಟಿಯ ಕಾನೂನು ಬಾಹಿರವಾಗಿ ಇತರ ವೆಚ್ಚಗಳಿಗೆ ವರ್ಗಾಯಿಸಿ ಅದನ್ನು ಪ್ರಾಮಾಣಿಕ ಅಧಿಕಾರಿಯಾದ ನಿಗಮದ ಚಂದ್ರಶೇಖರನ್ ತಲೆಗೆ ಕಟ್ಟಲು ಷಡ್ಯಂತ್ರ ಮಾಡಿದ ಅಧಿಕಾರಿಗಳು ಮತ್ತು ಮೌಖಿಕ ಆದೇಶ ನೀಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರರನ್ನು ಮುಖ್ಯಮಂತ್ರಿಯವರು ಕೂಡಲೇ ವಜಾ ಮಾಡಬೇಕು ಎಂದು ಆಗ್ರಹಿಸಿದರು.ಅಧಿಕಾರಿ ಕುಟುಂಬಕ್ಕೆ ₹25ಲಕ್ಷ ಪರಿಹಾರ ನೀಡಿ:
ಸ್ವಲ್ಪವಾದರೂ ಮಾನ ಮರ್ಯಾದೆ ಇದ್ದರೆ ಕೂಡಲೇ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಯವರಿಂದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಪಾರದರ್ಶಕ ಸರ್ಕಾರ ಎಂಬುದು ಸಾಬೀತುಪಡಿಸುವ ಜೊತೆಗೆ ಸಿಬಿಐಗೆ ಪ್ರಕರಣ ವರ್ಗಾಯಿಸಬೇಕು. ಮೃತ ಚಂದ್ರಶೇಖರ್‌ಗೆ ಇಬ್ಬರು ಮಕ್ಕಳಿದ್ದಾರೆ. ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಇನ್ನು ಮುಂದೆ ನಮ್ಮ ಕುಟುಂಬದ ಗತಿಯೇನು ಎಂದು ಮೃತನ ಪತ್ನಿ ಕಣ್ಣೀರಿಡುತ್ತಿದ್ದಾರೆ. ನಮಗೆ ನ್ಯಾಯ ಕೊಡಿ ಎನ್ನುತ್ತಿದ್ದಾರೆ. ಸರ್ಕಾರ ತಕ್ಷಣ ₹25 ಲಕ್ಷ ರು.ಗಳ ಪರಿಹಾರ ಅಧಿಕಾರಿ ಕುಟುಂಬಕ್ಕೆ ನೀಡಬೇಕು ಎಂದು ಒತ್ತಾಯಿಸಿದರು.ನಾಚಿಕೆ ಇಲ್ಲದ ಸರ್ಕಾರ:ಶಾಸಕ ಚನ್ನಬಸಪ್ಪ ಮಾತನಾಡಿ ಈ ಸರ್ಕಾರಕ್ಕೆ ಯಾವುದೇ ನೈತಿಕತೆಯಿಲ್ಲ. ಗೋಹಂತಕ ಬಲಿಯಾದರೆ ₹10 ಲಕ್ಷ ಘೋಷಿಸುತ್ತಾರೆ. ಆತ್ಮಹತ್ಯೆ ಮಾಡಿಕೊಂಡು ಡೆತ್‍ನೋಟ್ ಬರೆದಿಟ್ಟು, ಭ್ರಷ್ಟಾಚಾರದ ಬಣ್ಣ ಬಯಲು ಮಾಡಿದ ಸರ್ಕಾರಿ ನೌಕರನಿಗೆ ಇದುವರೆಗೂ ಯಾವುದೇ ಪರಿಹಾರ ನೀಡಿಲ್ಲ. ಇದು ಆಕ್ಷಮ್ಯ ಅಪರಾಧ. ನಾಚಿಕೆ ಮಾನ, ಮರ್ಯಾದೆ ಇಲ್ಲದ ಈ ಸರ್ಕಾರವನ್ನು ವಜಾ ಮಾಡಬೇಕು ಎಂದರು.
ಜಿಲ್ಲಾ ಬಿಜೆಪಿ ಮುಖಂಡ ಗಿರೀಶ್ ಪಟೇಲ್ ಮಾತನಾಡಿ, ಈ ಸರ್ಕಾರಕ್ಕೆ ಸ್ವಲ್ಪ ಕೂಡ ಮಾನವೀಯತೆ, ಮಾನ-ಮಾರ್ಯಾದೆ ಯಾವುದು ಇಲ್ಲ. ಸರ್ಕಾರ ಹಿಟ್ಲರ್‌ನಂತೆ ವರ್ತಿಸುತ್ತಿದ್ದು, ಇದು ಕೊಲೆಗಡುಕ ಸರ್ಕಾರವಾಗಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತ, ನಾಗರಿಕ ವಿರೋಧಿಯಾಗಿದೆ. ರಾಜ್ಯಪಾಲರು ಈ ಸರ್ಕಾರವನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಪ್ರಮುಖರಾದ ಎಸ್.ದತ್ತಾತ್ರಿ, ಜ್ಞಾನೇಶ್ವರ್, ನಾಗರಾಜ್, ರಾಮು, ದರ್ಶನ್, ಮಂಜುನಾಥ್, ಸುರೇಖಾ ಮುರಳೀಧರ್, ದಿನೇಶ್, ರಶ್ಮಿ ಶ್ರೀನಿವಾಸ್ ಮತ್ತಿತರರಿದ್ದರು.
ಕಾಂಗ್ರೆಸ್ ನಾಯಕರಿಂದ ದ್ವಿಮುಖ ನೀತಿ ಈಶ್ವರಪ್ಪನವರ ಮೇಲೆ ಆರೋಪ ಬಂದಾಗ ಅವರ ರಾಜೀನಾಮೆಗೆ ಪಟ್ಟು ಹಿಡಿದ ಸಿದ್ದರಾಮಯ್ಯನವರು ಈಗ್ಯಾಕೆ ದ್ವಿಮುಖ ನೀತಿ ಅನುಸರಿಸುತ್ತಿದ್ದಾರೆ. ದಲಿತರಿಗಾಗಿ ಮೀಸಲಿಟ್ಟ ₹25 ಸಾವಿರ ಕೋಟಿ ಹಣವನ್ನು ಈ ಸರ್ಕಾರ ಗ್ಯಾರಂಟಿಗೆ ಬಳಸಿಕೊಂಡಿದೆ. ಇದನ್ನು ಕೇಳಿದರೆ ಇದುವರೆಗೂ ಉತ್ತರ ನೀಡಿಲ್ಲ. ಮಾತೆತ್ತಿದರೆ, ಅಂಬೇಡ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಅಂಬೇಡ್ಕರ್ ಅಂತ್ಯ ಸಂಸ್ಕಾರಕ್ಕೂ ಭೂಮಿ ನೀಡಿಲ್ಲ. ಕಾಂಗ್ರೆಸ್ ನಾಯಕರ ಸಮಾಧಿಗೆ ನೂರಾರು ಎಕರೆ ಭೂಮಿ ನೀಡಿದ್ದಾರೆ. ಇವರಿಗೆ ದಲಿತ, ಹಿಂದುಳಿದ, ಪರಿಶಿಷ್ಟ ವರ್ಗ ಹಾಗೂ ಪಂಗಡದ ಜನರ ಬಗ್ಗೆ ಯಾವುದೇ ಪ್ರೀತಿಯಿಲ್ಲ. ಈ ಸರ್ಕಾರ ಸತ್ತು ಹೋಗಿದೆ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಟೀಕಿಸಿದರು.----------