ಕನ್ನಡಪ್ರಭ ವಾರ್ತೆ ಉಡುಪಿಬಿಜೆಪಿ ರಾಜ್ಯಾಧ್ಯಕ್ಷ ಆಯ್ಕೆಯಲ್ಲಿ ಎದ್ದಿರುವ ಭಿನ್ನಮತ, ಎಲ್ಲ ವಿವಾದಗಳಿಗೂ ಇತಿಶ್ರೀ ಹಾಕುವ ಕಾಲ ಕೂಡಿಬಂದಿದೆ. ಸದ್ಯದಲ್ಲೇ ರಾಜ್ಯಾಧ್ಯಕ್ಷರು ಯಾರಾಗುತ್ತಾರೆ ಅನ್ನೋದು ಗೊತ್ತಾಗುತ್ತದೆ ಎಂದು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.ಕಾಪುವಿನ ಹೊಸ ಮಾರಿಗುಡಿಯ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸ್ತುತ ದೇಶದ 12 ರಾಜ್ಯಗಳಲ್ಲಿ ಮಾತ್ರ ಬಿಜೆಪಿ ಅಧ್ಯಕ್ಷರ ನೇಮಕಾತಿಯಾಗಿದೆ. ನಮ್ಮ ರಾಜ್ಯ ಒಳಗೊಂಡಂತೆ ಇತರ ರಾಜ್ಯಗಳ ರಾಜ್ಯಾಧ್ಯಕ್ಷರ ಆಯ್ಕೆ ಕೆಲವೇ ದಿನಗಳಲ್ಲಿ ಆಗಲಿದೆ. ನಮ್ಮ ರಾಜ್ಯದ ಸಮಸ್ಯೆ ವಿಶೇಷವಾಗಿದೆ. ಅಧ್ಯಕ್ಷ ಹೆಸರು ಘೋಷಣೆಯಾಗುತ್ತಿದ್ದಂತೆ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದರು.ಏನೇ ಸಮಸ್ಯೆಗಳು ಬಂದರೂ ನಾನು ನಿರಾಳವಾಗಿರುತ್ತೇನೆ. ಈ ಸಮಸ್ಯೆಗೆ ಉತ್ತರ ಏನು ಅನ್ನೋದು ನನಗೆ ಗೊತ್ತಿದೆ. ಕೇಂದ್ರದ ವರಿಷ್ಠರಿಗೂ ಗೊತ್ತಿದೆ, ರಾಜ್ಯದಲ್ಲಿ ಒಳ್ಳೆ ರಾಜ್ಯಾಧ್ಯಕ್ಷರ ಆಯ್ಕೆಯಾಗುತ್ತದೆ. ಆ ಮೂಲಕ ಎಲ್ಲ ಸಮಸ್ಯೆಗಳಿಗೂ ಕೇಂದ್ರದ ವರಿಷ್ಠರು ಒಳ್ಳೆಯ ಉತ್ತರ ನೀಡುತ್ತಾರೆ ಎಂದು ಹೇಳಿದರು.ಡಿಕೆಶಿ ಹಿಂದುತ್ವ ವಿಶೇಷಾರ್ಥ ಇಲ್ಲ:
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಾಫ್ಟ್ ಹಿಂದುತ್ವ ಅನುಸರಿಸುತಿದ್ದಾರೆ ಎಂಬ ವಿವಾದಕ್ಕೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಅವರು ಈಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಕೇಂದ್ರ ಗೃಹಸಚಿವರ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ. ಆದರೆ ಇದಕ್ಕೆ ವಿಶೇಷವಾದ ಅರ್ಥ ಕಲ್ಪಿಸಬೇಕಾಗಿಲ್ಲ ಎಂದರು.ಆಡಳಿತ ಪಕ್ಷದಲ್ಲಿ ಸಿಎಂ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ, ಬರುವ ದಿನಗಳಲ್ಲಿ ಎಲ್ಲವನ್ನು ಬಹಿರಂಗವಾಗುತ್ತದೆ. ಡಿಸೆಂಬರ್‌ನಲ್ಲಿ ಡಿಕೆಶಿ ಸಿಎಂ ಆಗ್ತಾರೆ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ಅವರು ಮೂರು ತಿಂಗಳು ತಡವಾಗಿ ಹೇಳಿದ್ದಾರೆ. ಡಿಸೆಂಬರ್‌ಗೂ ಮೊದಲೇ ಆಗುತ್ತದೆ ಎಂದರು.ಬಜೆಟ್ - ಸರ್ಕಾರದಲ್ಲಿ ಹಣ ಇಲ್ಲ:
ಹಿಂದೆ ಯಡಿಯೂರಪ್ಪ ಅವರ ಬಜೆಟ್‌ನಲ್ಲಿ ಎಲ್ಲ ಜಿಲ್ಲೆಗಳಿಗೂ ನಮಗೇನು ಸಿಗುತ್ತೆ ಎಂಬ ಕಾತರ ಇತ್ತು. ತುಳುನಾಡಿಗೆ ಯಡಿಯೂರಪ್ಪ ವಿಶೇಷ ಅನುದಾನ ನೀಡುತ್ತಿದ್ದರು. ಈ ಸರ್ಕಾರದಲ್ಲಿ ಆ ಪರಿಸ್ಥಿತಿ ಇಲ್ಲ, ಗ್ಯಾರೆಂಟಿಗಳಿಂದ ತಮ್ಮ ಕೈ ತಾವೇ ಕಟ್ಟಿ ಹಾಕಿಕೊಂಡಿದ್ದಾರೆ. ಖಜಾನೆಯಲ್ಲಿ ಹಣವಿಲ್ಲ ಎಂದು ವಿಜಯೇಂದ್ರ ಹೇಳಿದರು.ನೀರಾವರಿ, ಲೋಕೋಪಯೋಗಿ ಇಲಾಖೆಯಲ್ಲಿ ಹಣ ಇಲ್ಲ, ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ವಿವಿಧ ಇಲಾಖೆಗಳು 6,000 ಕೋಟಿ ರೂಪಾಯಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಇಂಥ ಪರಿಸ್ಥಿತಿ ನಮ್ಮ ರಾಜ್ಯಕ್ಕೆ ಯಾವತ್ತೂ ಬಂದಿರಲಿಲ್ಲ. ಅನುದಾನ ನೀಡಲು ಸಾಧ್ಯವಿಲ್ಲದೆ 9 ವಿವಿಗಳನ್ನೇ ರಾಜ್ಯ ಸರ್ಕಾರ ಮುಚ್ಚಿ ಹಾಕುತ್ತಿದೆ ಎಂದವರು ಆರೋಪಿಸಿದರು.....................ಬಿಜೆಪಿ ನಾಯಕರ ಸಭೆಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದಲ್ಲಿ ಭಾಗಿಯಾಗಲು ಭಾನುವಾರ ಸಂಜೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಪು ಕಡಲ ತೀರದಲ್ಲಿ ಪಕ್ಷದ ನಾಯಕರ ಜೊತೆ ಸಭೆ ನಡೆಸಿದರು.
ಕಡಲ ತೀರದಲ್ಲಿ ವಿಹಾರ ನಡೆಸಿ, ಅಲ್ಲಿಯೇ ಸ್ವಲ್ಪ ಹೊತ್ತು ಕುಳಿತು, ಜಿಲ್ಲೆಯ ಬಿಜೆಪಿ ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಹರೀಶ್ ಪೂಂಜಾ, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್, ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಜೊತೆ ಮಾತುಕತೆ ನಡೆಸಿದರು. ನಂತರ ಮಾರಿ ಗುಡಿಗೆ ತೆರಳಿದರು.----------------
ಡಿಕೆಶಿ ಹತಾಶರಾಗಿದ್ದಾರೆ...ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿನಿಮಾ ಇಂಡಸ್ಟ್ರಿಗೆ ಎಚ್ಚರಿಕೆ ನೀಡಿದ್ದು, ಅವರ ಹತಾಶೆ ತೋರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಅವರು ಹತಾಶೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಪಕ್ಷದೊಳಗಿ ಗೊಂದಲ, ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆಯಿಂದ ಈ ರೀತಿ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ವಿಚಲಿತರಾಗಿದ್ದಾರೆ, ರಾಜಣ್ಣ ಸಹಿತ ಇತರ ಸಚಿವರ ಹೇಳಿಕೆಯಿಂದ ಇದು ಅರಿವಾಗುತ್ತಿದೆ ಎಂದರು.ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಹೇಳಲಾಗದ ಮಾತನ್ನು ಸಿನಿಮಾ ಇಂಡಸ್ಟ್ರಿಯವರಿಗೆ ಹೇಳಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದಬ್ಬಾಳಿಕೆ ದೌರ್ಜನ್ಯಕ್ಕೆ ಅವಕಾಶ ಇಲ್ಲ ಎಂದು ಬಿವೈವಿ ಹೇಳಿದರು.