ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬಳಿಕ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ರಾಜ್ಯಸರ್ಕಾರದ ವತಿಯಿಂದ ಈಗಾಗಲೇ ವಾರದಲ್ಲಿ 2 ದಿನ ಮೊಟ್ಟೆ, ಬಾಳೆಹಣ್ಣು ಹಾಗೂ ಶೆಂಗಾ ಚಿಕ್ಕಿ ವಿತರಿಸಲಾಗುತ್ತಿತ್ತು. ಆದರೂ ಮಕ್ಕಳ ಬೌದ್ಧಿಕ ಶಕ್ತಿ ಹೆಚ್ಚಿಸಿ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ಅಜೀಂ ಪ್ರೇಮ್ ಜಿ ಫೌಂಡೇಶನ್ ನೆರವಿನೊಂದಿಗೆ ಹೆಚ್ಚುವರಿಯಾಗಿ ವಾರದಲ್ಲಿ ಉಳಿದ ನಾಲ್ಕು ದಿನಗಳಲ್ಲಿಯೂ ಪೂರಕ ಪೌಷ್ಠಿಕ ಆಹಾರ ವಿತರಣೆ ಮಾಡಲಾಗುತ್ತಿದೆ. ಆ ಮೂಲಕ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರ ಆದ್ಯತೆ ನೀಡಿದೆ ಎಂದರು.ಮಕ್ಕಳು ಶಾಲೆಗಳಿಗೆ ಕಡ್ಡಾಯವಾಗಿ ಬರಲು ಹಾಗೂ ಶಾಲೆಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವುದು ಸರ್ಕಾರದ ಪ್ರೋತ್ಸಾಹದಾಯಕ ಕಾರ್ಯಕ್ರಮದ ಉದ್ದೇಶವಾಗಿದೆ. ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ, ಶೂ ಭಾಗ್ಯ ಇವೆಲ್ಲವೂ ಕೂಡ ಮಕ್ಕಳು ಕಲಿಕಾ ಪ್ರಕ್ರಿಯೆಯನ್ನು ಪ್ರೇರೇಪಿಸಲು ಸಹಕಾರಿಯಾಗಿವೆ. ವಿದ್ಯೆ ಪ್ರತಿಯೊಬ್ಬರಿಗೂ ಬಹುಮುಖ್ಯ ಆಸ್ತಿ. ಶಿಕ್ಷಣದಿಂದ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ. ಇದನ್ನು ಮನಗಂಡಿರುವ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಾಮಾಜಿಕ, ಶೈಕ್ಷಣಿಕ ಪ್ರಗತಿಗೆ ಕಾಳಜಿ ವಹಿಸಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಮೋನಾ ರೋತ್ ಮಾತನಾಡಿ, ಮಕ್ಕಳ ಬುದ್ಧಿಶಕ್ತಿ ವೃದ್ಧಿಸಿ ಗುಣಮಟ್ಟದ ಶಿಕ್ಷಣದ ಕಲಿಕೆಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾರದಲ್ಲಿ ಆರು ದಿನವು ಪೂರಕ ಪೌಷ್ಠಿಕ ಆಹಾರ ನೀಡುತ್ತಿರುವುದು ಉತ್ತಮ ಬೆಳವಣಿಗೆ. ಒಟ್ಟಿನಲ್ಲಿ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್ ಮಾತನಾಡಿ, ಮಕ್ಕಳ ಬುದ್ಧಿಮತ್ತೆ ಹೆಚ್ಚಿಸಲು ನೀಡಲಾಗುತ್ತಿರುವ ಪೂರಕ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ದೊರೆತು ಸರ್ಕಾರಿ, ಅನುದಾನಿತ ಶಾಲೆಗಳ ಬೇಡಿಕೆ ಈಡೇರಿದಂತಾಗಿದೆ. ಇದರಿಂದ ಜಿಲ್ಲೆಯ 894 ಶಾಲೆಗಳ 8293 ಮಕ್ಕಳು ಯೋಜನೆಯ ಪ್ರಯೋಜನೆ ಪಡೆಯಲಿದ್ದಾರೆ. ಸಾಮಾಜಿಕ ಹಾಗೂ ಶೈಕ್ಷಣಿಕ ಕಾಳಜಿ ಹೊಂದಿರುವ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆ ಇಲಾಖೆಯ ಖಾತೆಗೆ ಈಗಾಗಲೇ ಒಂದೂವರೆ ಸಾವಿರ ಕೋಟಿ ರು. ಜಮೆ ಮಾಡಿದೆ. ವಾರದಲ್ಲಿ 2 ದಿನ ಪೌಷ್ಟಿಕ ಆಹಾರ ಸರ್ಕಾರ ನೀಡಲಿದೆ. ಉಳಿದ 4 ದಿನ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಸ್ಥೆ ಒದಗಿಸಲಿದೆ. ಇದೇ ಸೆ.25ರಿಂದ 2025ರ ಏ.10ರವರೆಗೆ 146 ಶಾಲಾ ದಿನಗಳಲ್ಲಿ ಇದಕ್ಕಾಗಿ 4 ಕೋಟಿ 62 ಲಕ್ಷ ರು. ವೆಚ್ಚವಾಗಲಿದೆ ಎಂದರು.