ಶಿರಸಿ: ಯೋಗವು ವಿದ್ಯಾರ್ಥಿಗಳ ದೈಹಿಕ ಸದೃಢತೆಯನ್ನು ಹೆಚ್ಚಿಸಿ ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿ ಓದುವ ಆಸಕ್ತಿಯನ್ನು ಬೆಳೆಸುವುದರಿಂದ ಅದು ನಮ್ಮ ಜೀವನದ ದೈನಂದಿನ ಉತ್ಸವವಾಗಲಿ ಎಂದು ಶಾಸಕ ಭೀಮಣ್ಣ ನಾಯ್ಕಅಭಿಪ್ರಾಯಪಟ್ಟರು.
ಡಾ. ಪ್ರಸನ್ನ ಆಯುಷ್ ವೈದ್ಯಾಧಿಕಾರಿಗಳು, ಮತ್ತಿಘಟ್ಟ ಮಾತನಾಡಿ, ಸದೃಢ ದೇಹದಲ್ಲಿ ಸದೃಢ ಮನಸ್ಸು ಇರುತ್ತದೆ. ಸದೃಢ ದೇಹಕ್ಕೆ ಯೋಗವು ಅತಿ ಉಪಯುಕ್ತವಾದದ್ದು. ಅದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಪ್ರಾಂಶುಪಾಲರಾದ ಗಿರಿಜಾ ಪೂಜಾರಿ ಮಾತನಾಡಿ, ಯೋಗವು ದೇಹದ ಚೈತನ್ಯ, ಹುಮ್ಮಸ್ಸನ್ನು ಮತ್ತು ಜೀವನೋತ್ಸಾಹವನ್ನು ಹೆಚ್ಚಿಸಿ ಕ್ರಿಯಾಶೀಲಗೊಳಿಸುತ್ತದೆ ಎಂದರು.ದೈಹಿಕ ಶಿಕ್ಷಣ ಶಿಕ್ಷಕ ಶಂಕರಪ್ಪ ಕುರುಬರ ಹಾಗೂ ಆಯುಷ್ ವೈದ್ಯಾಧಿಕಾರಿಗಳು ಯೋಗದ ವಿವಿಧ ಆಸನಗಳ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಸಂಗೀತ ಶಿಕ್ಷಕ ವಿಶ್ವನಾಥ್ ಹಿರೇಮಠ ಅವರು ಯೋಗಗೀತೆಯನ್ನು ಹಾಡುವ ಮೂಲಕ ಹಾಗೂ ಆಂಗ್ಲ ಶಿಕ್ಷಕಿ ಸೌಖ್ಯ ಭಟ್ ನಿರ್ದೇಶನದಲ್ಲಿ ಮೂಡಿಬಂದ ಯೋಗ ನೃತ್ಯವು ಕಾರ್ಯಕ್ರಮಕ್ಕೆ ಮೆರುಗನ್ನು ಹೆಚ್ಚಿಸಿದವು.
ಕಾರ್ಯಕ್ರಮದಲ್ಲಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡರ, ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯದರ್ಶಿಗಳು, ಪಂಚಾಯಿತಿ ಸಿಬ್ಬಂದಿ, ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಸಿಬ್ಬಂದಿ ಉಪಸ್ಥಿತರಿದ್ದರು.