ಕೃಷಿಗೆ 7 ತಾಸು ಗುಣಮಟ್ಟದ ವಿದ್ಯುತ್‌ ಪೂರೈಸಿ

KannadaprabhaNewsNetwork |  
Published : Oct 20, 2023, 01:00 AM IST
19ಕೆಡಿವಿಜಿ1, 2-ಕೃಷಿ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ರೈತ ಸಂಘ ಮತ್ತು ಹಸಿರು ಸೇನೆ, ಬಿಜೆಪಿ ರೈತ ಮೋರ್ಚಾ ದಾವಣಗೆರೆಯಲ್ಲಿ ಬೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟಿಸುತ್ತಿರುವುದು. | Kannada Prabha

ಸಾರಾಂಶ

ರೈತ ಸಂಘ-ಹಸಿರು ಸೇನೆ, ಬಿಜೆಪಿ ರೈತ ಮೋರ್ಚಾದಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ, ಪ್ರತಿಭಟನೆ । ರಾಜ್ಯ ಸರ್ಕಾರಕ್ಕೆ ಮನವಿ

ರೈತ ಸಂಘ-ಹಸಿರು ಸೇನೆ, ಬಿಜೆಪಿ ರೈತ ಮೋರ್ಚಾದಿಂದ ಬೆಸ್ಕಾಂ ಕಚೇರಿಗೆ ಮುತ್ತಿಗೆ, ಪ್ರತಿಭಟನೆ । ರಾಜ್ಯ ಸರ್ಕಾರಕ್ಕೆ ಮನವಿ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೃಷಿ ಪಂಪ್‌ಸೆಟ್‌ಗೆ ನಿತ್ಯ 7 ಗಂಟೆ 3 ಫೇಸ್‌ ಗುಣಮಟ್ಟದ ವಿದ್ಯುತ್ ಪೂರೈಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಜ್ಯವ್ಯಾಪಿ ಕರೆ ಮೇರೆಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಘಟಕ, ಬಿಜೆಪಿ ರೈತ ಮೋರ್ಚಾದಿಂದ ನಗರದ ಬೆಸ್ಕಾಂ ಕಚೇರಿಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

ಇಲ್ಲಿನ ವಿದ್ಯಾರ್ಥಿ ಭವನ ಸಮೀಪದ ಬೆಸ್ಕಾಂ ಅಧೀಕ್ಷಕ ಅಭಿಯಂತರರ ಕಚೇರಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಬಿಜೆಪಿ ರೈತ ಮೋರ್ಚಾಗಳ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಸಮರ್ಪಕ ವಿದ್ಯುತ್ ಪೂರೈಸುವುದೂ ಸೇರಿ ವಿವಿಧ ಬೇಡಿಕೆ ಈಡೇರಿಸಲು ಅಧೀಕ್ಷಕ ಅಭಿಯಂತರ ಜಗದೀಶ್‌ ಮುಖಾಂತರ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಕೃಷಿ ಪಂಪ್‌ ಸೆಟ್‌ಗಳಿಗೆ ನಿರಂತರ 7 ತಾಸು 3 ಫೇಸ್‌ನಲ್ಲಿ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಈಗಾಗಲೇ ಮಳೆ ಕೈಕೊಟ್ಟಿದ್ದರಿಂದ ಬೆಳೆ ಕಳೆದುಕೊಳ್ಳುವ ಭೀತಿಗೆ ಸಿಲುಕಿದ ರೈತರಿಗೆ ಗುಣಮಟ್ಟದ ವಿದ್ಯುತ್ ಪೂರೈಸಬೇಕು ಎಂದರು.

ವಿದ್ಯುತ್ ಕ್ಷಾಮ ಉಂಟಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು. ವಿದ್ಯುತ್ ಪೋಲು ತಡೆಯಬೇಕು. ಸೌರ, ಪವನ ವಿದ್ಯುತ್ ಉತ್ಪಾದನೆಗೂ ಹೆಚ್ಚು ಒತ್ತು ನೀಡಬೇಕು. ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆ ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ 192ಕ್ಕಿಂತ ಹೆಚ್ಚು ತಾಲೂಕು ಬರಕ್ಕೆ ತುತ್ತಾಗಿವೆ. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೂ ಶಿಫಾರಸ್ಸು ಮಾಡಿದೆ. ರಾಜ್ಯದ 45 ಲಕ್ಷಕ್ಕೂ ಅಧಿಕ ರೈತ ಕುಟುಂಬಗಳು ಪಂಪ್ ಸೆಟ್‌ ಮೂಲಕ ತೋಟಗಾರಿಕೆ, ಇತರೆ ಫಸಲು ಬೆಳೆಯುತ್ತಾರೆ. ವಿದ್ಯುತ್‌ ಅಭಾವದಿಂದಾಗಿ ಇವರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಬುಳ್ಳಾಪುರ ಹನುಮಂತಪ್ಪ, ಕೊಗ್ಗನೂರು ಹನುಮಂತಪ್ಪ, ಕರಿಲಕ್ಕೇನಹಳ್ಳಿ ರೇವಣಸಿದ್ದಪ್ಪ, ಅಣಬೇರು ಅಣ್ಣಪ್ಪ, ಚಿನ್ನಸಮುದ್ರ ಭೀಮಾ ನಾಯ್ಕ. ಕೊಗ್ಗನೂರು ಎ.ಮಂಜುನಾಥ, ಬಲ್ಲೂರು ಅಣ್ಣಪ್ಪ, ಎಸ್.ಟಿ.ಪರಮೇಶ್ವರಪ್ಪ, ಕರಿಲಕ್ಕೇನಹಳ್ಳಿ ಹನುಮಂತಪ್ಪ, ನಿಟುವಳ್ಳಿ ಅಂಜಿನಪ್ಪ, ಬಿಜೆಪಿ ರೈತ ಮೋರ್ಚಾದ ಲೋಕಿಕೆರೆ ನಾಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಧನಂಜಯ ಕಡ್ಲೇಬಾಳ್, ಎನ್‌.ಎಚ್‌.ಹಾಲೇಶ, ವಾಟರ್ ಮಂಜುನಾಥ, ಪರಶುರಾಮ ಇತರರಿದ್ದರು.

ಬರ ವಿಚಾರ ಗೊತ್ತಿದ್ದರೂ ಜೂನ್‌ನಲ್ಲೇ ಕಲ್ಲಿದ್ದಲು ಖರೀದಿಗೆ ಮುಂದಾಗದ ಸರ್ಕಾರ ಅಸಡ್ಡೆ ತೋರಿತು. ಈಗ ಲಭ್ಯ ವಿದ್ಯುತ್ ಪೂರೈಕೆಯಲ್ಲಿ ಕೈಗಾರಿಕೆಗಳಿಗೆ ಸಮರ್ಪಕ ವಿದ್ಯುತ್ ನೀಡಿ, ಕೃಷಿ ಕ್ಷೇತ್ರ ಕಡೆಗಣಿಸಿ, ತಾರತಮ್ಯ ಮಾಡಲಾಗುತ್ತಿದೆ. ಕೊಟ್ಟ ಮಾತಿನಂತೆ ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ತ್ರಿಫೇಸ್‌ ವಿದ್ಯುತ್ ನೀಡಿ, ರೈತರ ರಕ್ಷಿಸಬೇಕು.- ರೈತ ಮುಖಂಡ

ಇಂದು ಬೆಸ್ಕಾಂ-ರೈತರ ಸಭೆ

ಮಳೆ ಕೊರತೆಯಿಂದಾಗಿ ವಿದ್ಯುತ್ ಉತ್ಪಾದನೆ ಕ್ಷೀಣವಾಗಿದೆ. ವಾಡಿಕೆಯಂತೆ ಅಕ್ಟೋಬರ್‌, ನವೆಂಬರ್‌ನಲ್ಲಿ ಬಿಸಿಲು, ಗಾಳಿ ಬೀಸುವ ಪ್ರಮಾಣ ಕಡಿಮೆ ಇದ್ದು, ಪವನ ಮತ್ತು ಸೌರ ವಿದ್ಯುತ್ ಉತ್ಪಾದನೆಯೂ ನಿರೀಕ್ಷಿತವಾಗಿ ಆಗುತ್ತಿಲ್ಲ. ಹಾಗಾಗಿ 7 ಗಂಟೆ ಬದಲು 5 ತಾಸು ಸಮರ್ಪಕ ವಿದ್ಯುತ್‌ ಪೂರೈಸಲಾಗುವುದು. ಅ.20ರ ಮಧ್ಯಾಹ್ನ 12ಕ್ಕೆ ಇಇ ಕಚೇರಿ ಸಭಾಂಗಣದಲ್ಲಿ ರೈತರು, ಬೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು

ಬೆಸ್ಕಾಂ ಅಧೀಕ್ಷಕ ಅಭಿಯಂತರ ಜಗದೀಶ ಹೇಳಿದರು.

.....

19ಕೆಡಿವಿಜಿ1, 2

ಕೃಷಿ ಪಂಪ್‌ಸೆಟ್‌ಗೆ ಸಮರ್ಪಕ ವಿದ್ಯುತ್ ಪೂರೈಸಲು ರೈತ ಸಂಘ ಮತ್ತು ಹಸಿರು ಸೇನೆ, ಬಿಜೆಪಿ ರೈತ ಮೋರ್ಚಾ ದಾವಣಗೆರೆಯಲ್ಲಿ ಬೆಸ್ಕಾಂ ಕಚೇರಿ ಎದುರು ಗುರುವಾರ ಪ್ರತಿಭಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ