ಹಾವೇರಿ: ಎಫ್.ಐ.ಡಿ. ಇಲ್ಲದೇ ರೈತರಿಗೆ ಯೂರಿಯಾ ಗೊಬ್ಬರ ಪೂರೈಕೆ, ಬಿತ್ತನೆ ಬೀಜ ವಿತರಣೆ ಹಾಗೂ ಹಗಲು ಹೊತ್ತಿನಲ್ಲಿ ರೈತರಿಗೆ 7 ತಾಸು ವಿದ್ಯುತ್ ಪೂರೈಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾಮೂಹಿಕ ನಾಯಕತ್ವದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ರೈತ ಮುಖಂಡರು ಬುಧವಾರ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಎಫ್.ಐ.ಡಿ. ಇಲ್ಲದೇ ರೈತರಿಗೆ ಯೂರಿಯಾ ಗೊಬ್ಬರ, ಬೀಜ ವಿತರಣೆ ಮಾಡಬೇಕು. ಹೆಸ್ಕಾಂನಿಂದ ಪ್ರತಿದಿನ ಹಗಲುವೇಳೆ 7 ತಾಸು ವಿದ್ಯುತ್ ಪೂರೈಸಬೇಕು. ತೋಟಗಾರಿಕೆ ಇಲಾಖೆಯಿಂದ ಎಸ್‌ಸಿ-ಎಸ್‌ಟಿ ಅನುದಾನದಡಿ ಸಹಾಯಧನ ನೀಡುತ್ತಿಲ್ಲ, ತಕ್ಷಣ ಗ್ರಾಂಟ್ ಬಿಡುಗಡೆ ಮಾಡಬೇಕು. ಚಿರತೆ, ಚಿಗರೆ ಹಾವಳಿಯಿಂದ ರೈತರ ಪ್ರಾಣಹಾನಿ, ರೈತರ ಬೆಳೆಯನ್ನು ರಕ್ಷಣೆ ಮಾಡಲು ಅರಣ್ಯ ಇಲಾಖೆಯವರು ರೈತರ ಪರವಾಗಿ ಜಾಗ್ರತರಾಗಿರಬೇಕು ಎಂದು ಒತ್ತಾಯಿಸಿದರು.
ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಯೋಗಿ ಹೊಸಗೌಡ್ರ ಮಾತನಾಡಿ, ಹಾವೇರಿ ಶಹರದಲ್ಲಿ ಒಳಚರಂಡಿ, ರಸ್ತೆ, ಗಟಾರ ಹದಿಗೆಟ್ಟಿರುತ್ತದೆ. ನಗರಸಭೆಯವರು ಆದಷ್ಟು ಬೇಗನೇ ಕಾಮಗಾರಿ ಪ್ರಾರಂಭಿಸಬೇಕು. ಬ್ಯಾಂಕಿನಿಂದ ದಬ್ಬಾಳಿಕೆ ಮಾಡಿ ಸಾಲ ವಸೂಲಿ ಮಾಡುತ್ತಿದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ಹೊಲ ನಮ್ಮ ದಾರಿ, ಸರಿಯಾಗಿ ಗ್ರಾಮ ಪಂಚಾಯಿತಿಯಿಂದ ದಾರಿ ಮಾಡಿಸಿಕೊಡಬೇಕು. ಹಾವೇರಿ ತಾಲೂಕನಲ್ಲಿ ಬೆಳೆವಿಮೆ ಹಾಗೂ ಬೆಳೆ ಹಾನಿ ಬಹಳಷ್ಟು ರೈತರಿಗೆ ಅನ್ಯಾಯವಾಗಿರುತ್ತದೆ, ತಕ್ಷಣ ಸರಿಪಡಿಸಬೇಕೆಂದು ಒತ್ತಾಯಿಸಿದರು.ರೈತ ಮುಖಂಡರಾದ ರಾಜು ತರ್ಲಗಟ್ಟ, ಸುರೇಶ ಚಲವಾದಿ, ಚನ್ನಪ್ಪ ಮರಡೂರ, ಫಕ್ಕೀರಗೌಡ ಗಾಜಿಗೌಡ್ರ, ಸಿದ್ದನಗೌಡ ಗಡೆಪ್ಪಗೌಡ್ರ, ನಾಗರಾಜ ವಿಭೂತಿ, ಪರಮೇಶ ನರಗುಂದ, ಶಿವಯೋಗಿ ಬೆನ್ನೂರ, ಬಾಬುಸಾಬ ಲಿಂಗದಹಳ್ಳಿ, ಜಾಫರ್ ಸಾಬ್, ರೆಹಮಾನ್‌ಸಾಬ್ ತಟ್ಟಿಮನಿ, ಇಸ್ಪಾಕ್‌ಸಾಬ್, ಗುಡ್ಡಪ್ಪ ಸತ್ಯಪ್ಪನವರ ಇದ್ದರು.