ಬೇಡಿಕೆಯಂತೆ ಮೆಕ್ಕೆಜೋಳ ಪೂರೈಸಿ:ಡಿಸಿ

KannadaprabhaNewsNetwork |  
Published : Dec 20, 2025, 02:30 AM IST
19ಕೆಪಿಎಲ್103 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025-26 ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆ ಜೋಳದ ಖರೀದಿಯ ಕುರಿತು ಕೊಪ್ಪಳ ಜಿಲ್ಲಾ ಕೋಳಿ ಫಾರಂ ಮಾಲೀಕರೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಸಭೆ | Kannada Prabha

ಸಾರಾಂಶ

ಕೋಳಿ ಫಾರಂಗಳ ಆಹಾರ ತಯಾರಿಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೆಕ್ಕೆಜೋಳ ಬಳಸಲಾಗುತ್ತದೆ.

ಕೊಪ್ಪಳ: ಪೌಲ್ಟ್ರಿ ಫೀಡ್, ಕೋಳಿ ಫಾರಂಗಳ ಮೂಲಕ ರೈತರ ಮೆಕ್ಕೆಜೋಳ ಖರೀದಿಸಲು ಪ್ರತಿ ಕೋಳಿ ಫಾರಂಗಳ ಬೇಡಿಕೆಯಂತೆ ಮೆಕ್ಕೆಜೋಳ ಪೂರೈಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ 2025-26 ನೇ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೈತರು ಬೆಳೆದ ಮೆಕ್ಕೆ ಜೋಳದ ಖರೀದಿಯ ಕುರಿತು ಕೊಪ್ಪಳ ಜಿಲ್ಲಾ ಕೋಳಿ ಫಾರಂ ಮಾಲೀಕರೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರ್ಕಾರದ ಆದೇಶದಂತೆ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆದ ಮೆಕ್ಕೆಜೋಳ ಪ್ರತಿ ರೈತರಿಂದ 50 ಕ್ವಿಂಟಲ್ ಮೆಕ್ಕೆಜೋಳ ಪ್ರತಿ ಕ್ವಿಂಟಲ್‌ಗೆ ₹2400ಗಳಂತೆ ಸರ್ಕಾರದ ನಿಯಮಗಳನ್ವಯ ಖರೀದಿ ಸಂಸ್ಥೆಯಾದ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ, ನಿಯಮಿತ ಮೂಲಕ ಖರೀದಿಸಬೇಕಾಗಿದೆ ಎಂದರು.

ಕೋಳಿ ಫಾರಂಗಳ ಆಹಾರ ತಯಾರಿಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮೆಕ್ಕೆಜೋಳ ಬಳಸಲಾಗುತ್ತದೆ. ಹಾಗಾಗಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯ ರೈತರು ಬೆಳೆದ ಮೆಕ್ಕೆಜೋಳ ಜಿಲ್ಲೆಯ ಕೋಳಿ ಫಾರ್ಮ್ ಮಾಲೀಕರಿಗೆ ಪೂರೈಸಲು ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಕೋಳಿ ಫಾರಂಗಳಿಗೆ ಅವಶ್ಯವಿರುವ ಬೇಡಿಕೆ ನೀಡುವಂತೆ ಜಿಲ್ಲಾಧಿಕಾರಿಗಳು ಹೇಳಿದರು.

ಕೋಳಿಫಾರಂ ಮಾಲೀಕರ ಪ್ರತಿನಿಧಿಗಳು ಮಾತನಾಡಿ, ಒಟ್ಟಾರೆ 3000 ಮೆಟ್ರಿಕ್ ಟನ್ ಮೆಕ್ಕೆಜೋಳ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿ.ಡಿ.ಕೃಷ್ಣಮೂರ್ತಿ ಮಾತನಾಡಿ, 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 1,62,000 ಹೆಕ್ಟರ್ ವಿಸ್ತೀರ್ಣದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, 3,24,878 ಮೆಟ್ರಿಕ್ ಟನ್‌ಗಳಷ್ಟು ಮೆಕ್ಕೆಜೋಳ ಇಳುವರಿ ಬಂದಿದೆ. ಇದರಲ್ಲಿ ಅಂದಾಜು 1,72,186 ಮೆಟ್ರಿಕ್ ಟನ್ ನಷ್ಟು ಮೆಕ್ಕೆಜೋಳ ರೈತರು ಮಾರಾಟ ಮಾಡಿರುತ್ತಾರೆ. ಅಂದಾಜು 1,52,692 ಮೆಟ್ರಿಕ್ ಟನ್ ಮೆಕ್ಕೆಜೋಳ ರೈತರ ಬಳಿ ಇರುವ ಸಾಧ್ಯತೆಯಿದೆ ಎಂದು ತಿಳಿಸಿದರು.

ಕೊಪ್ಪಳ ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ವಿ.ಜಿ. ಹಿರೇಮಠ ಮಾತನಾಡಿ, ಜಿಲ್ಲೆಯಲ್ಲಿ ಬೆಳೆಯಲಾದ ಮೆಕ್ಕೆಜೋಳದ ಪ್ರಮಾಣದಲ್ಲಿ ಈಗಾಗಲೇ 1,72,186.20 ಮೆಟ್ರಿಕ್ ಟನ್ ನಷ್ಟು ಮೆಕ್ಕೆಜೋಳ ರೈತರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಮಾರಾಟ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಪಿ.ಎಂ. ಮಲ್ಲಯ್ಯ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ 27 ವಾಣಿಜ್ಯ ಮೊಟ್ಟೆ ಕೋಳಿ ಫಾರಂಗಳಿದ್ದು, ಕೋಳಿ ಫಾರಂಗಳಲ್ಲಿರುವ ಕುಕ್ಕಟಗಳ ಅಂಕಿ-ಅಂಶಗಳ ಅನುಗುಣವಾಗಿ ಕೋಳಿ ಆಹಾರಗಳ ತಯಾರಿಕೆಗಾಗಿ ಅವಶ್ಯವಿರುವ ಮೆಕ್ಕೆಜೋಳ ಸರ್ಕಾರದ ನಿಯಮಗಳನ್ವಯ 2025-26ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿಸಲು ಕೋಳಿ ಫಾರಂಗಳ ಮಾಲೀಕರಿಂದ ಬೇಡಿಕೆ ಪಡೆದು ಕ್ರಮವಹಿಸುವ ಉದ್ದೇಶದಿಂದ ಈ ಸಭೆಗೆ ಜಿಲ್ಲೆಯ ಕೋಳಿ ಫಾರಂ ಮಾಲಿಕರನ್ನು ಕರೆಯಲಾಗಿದೆ. ಈ ಉದ್ದೇಶದಂತೆ ಪೌಲ್ಟ್ರಿ ಫೀಡ್, ಕೋಳಿ ಫಾರಂಗಳ ಮೂಲಕ ಮೇಕ್ಕೆಜೋಳ ಖರೀದಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಇಲಾಖೆಗಳ ಅಧಿಕಾರಿಗಳು, ಕೋಳಿ ಫಾರಂ ಮಾಲೀಕರ ಪ್ರತಿನಿಧಿಗಳು ಮತ್ತು ಪಶು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೊಸ ಅವಕಾಶ ತೆರೆದ ಸಮಕಾಲೀನ ಭಾಷಾ ತಂತ್ರಜ್ಞಾನ: ಗೀತಾ ವಾಲೀಕಾರ್
ವಸಾಹತುಶಾಹಿತ್ವ ಒಳಿತು ಕೆಡಕಿನ ಸಂತೆ: ಡಾ. ಕೆ. ವೆಂಕಟೇಶ